CJI in Madurai  
ಸುದ್ದಿಗಳು

ಸುದೀರ್ಘವಾಗಿ ದುಡಿಯುವ ಕಿರಿಯ ವಕೀಲರಿಗೆ ಗೌರವಾನ್ವಿತ ಮೊತ್ತ ಪಾವತಿಸುವಂತೆ ಸಿಜೆಐ ಡಿ ವೈ ಚಂದ್ರಚೂಡ್ ಕರೆ

Bar & Bench

ಕಿರಿಯ ವಕೀಲರಿಗೆ ಉತ್ತಮ ವೇತನ ನೀಡುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಕರೆ ನೀಡಿದ್ದಾರೆ.

ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಸ್ಥಾಪನೆಯಾಗಿ 20 ವರ್ಷ ಸಂದ ಹಿನ್ನೆಲೆಯಲ್ಲಿ ಪೀಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ದ್ವಾದಶಮಾನೋತ್ಸವ ಸಮಾರಂಭದಲ್ಲಿ ಸಿಜೆಐ ಮಾತನಾಡಿದರು.

ಸಿಜೆಐ ಅವರ ಭಾಷಣದ ಪ್ರಮುಖಾಂಶಗಳು

  • ವಕೀಲ ವರ್ಗ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಮತ್ತೆ ಧ್ವನಿ ಎತ್ತಲು ಬಯಸುತ್ತೇನೆ.

  • ಕಿರಿಯವ ವಕೀಲರ ಪ್ರತಿಭೆಯನ್ನು ಉತ್ತೇಜಿಸಬೇಕು ಮತ್ತು ಅವರು ಬದುಕುವ ಸಲುವಾಗಿ ಗೌರವಾನ್ವಿತ ಮೊತ್ತ ನೀಡಿ ನೆರವಾಗಬೇಕು.

  • ತಿಂಗಳಿಗೆ ₹5,000ದಷ್ಟು ಕಡಿಮೆ ಮೊತ್ತ ಪಾವತಿಸುವುದು ಅವರು ವೃತ್ತಿಯನ್ನೇ ತೊರೆಯುವಂತೆ ಮಾಡಬಹುದು.

  • ವೃತ್ತಿಜೀವನದ ಮೊದಲ ಕೆಲ ವರ್ಷಗಳು ಹಿರಿಯರು ಕಿರಿಯ ವಕೀಲರಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ ಎಂಬ ಸಮರ್ಥನೆ ಇರುತ್ತದೆ. ಈ ಮೇಲರಿಮೆಯಿಂದ ಹೊರಬರಬೇಕಿದೆ.

  • ಕಿರಿಯ ವಕೀಲರು ವಕೀಲಿಕೆ ಕಲಿಯಲು ಹಿರಿಯರ ಬಳಿಗೆ ಬಂದಾಗ, ನ್ಯಾಯವಾದಿ ವೃತ್ತಿ ಮತ್ತು ಪ್ರಸ್ತುತವಾದ ಸಮಕಾಲೀನ ವಾಸ್ತವಗಳ ಬಗ್ಗೆ ಹಿರಿಯರಿಗೆ ಸಾಕಷ್ಟು ಕಲಿಸುತ್ತಿರುತ್ತಾರೆ

  • ಕಠಿಣ ಶ್ರಮ ವಹಿಸುವುದು ಮುಖ್ಯ, ಆದರೆ ಸೂಕ್ತ ವೇತನ ಇಲ್ಲದೆ ಕೆಲಸ ಮಾಡಬೇಕು ಎಂಬ ರಮ್ಯ ಭಾವನೆಯನ್ನು ತ್ಯಜಿಸಬೇಕು.

  • ಇದು ಕಡಿಮೆ ವೇತನಕ್ಕಾಗಿ ಕಡಿಮೆ ನಿದ್ರೆ ಮಾಡಿ ಹೆಚ್ಚು ಕೆಲಸ ಮಾಡಬೇಕೆಂಬ ನಿರೀಕ್ಷೆಯಾಗುತ್ತದೆ.

  • ಸಮರ್ಥ ವಕೀಲರನ್ನು ಬೆಳೆಸಲು ಅವರ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದ ಇಡೀ ನ್ಯಾಯವಾದಿ ಸಮುದಾಯ ಒಗ್ಗೂಡಬೇಕಿದೆ.

ಕಿರಿಯ ವಕೀಲರಿಗೆ ಉತ್ತಮ ವೇತನ ನೀಡಬೇಕು ಎಂದು ಸಿಜೆಐ ಚಂದ್ರಚೂಡ್‌ ಅವರು ಕರೆ ನೀಡುತ್ತಿರುವುದು ಇದೇ ಮೊದಲಲ್ಲ. ಹಿರಿಯ ನ್ಯಾಯವಾದಿಗಳು ಕಿರಿಯ ವಕೀಲರನ್ನು ಆಳುಗಳಂತೆ ನಡೆಸಿಕೊಳ್ಳಬಾರದು ಎಂದು ನವೆಂಬರ್ 2022ರಲ್ಲಿ ಅವರು ತಿಳಿಸಿದ್ದರು.

ಕಳೆದ ವರ್ಷ ಮೇ ತಿಂಗಳಿನಲ್ಲಿಯೂ ಸಹ, ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಇಂಥದ್ದೇ ಮಾತುಗಳನ್ನು ಅವರು ಆಡಿದ್ದರು. ಕಿರಿಯ ವಕೀಲರಿಗೆ ಸಮರ್ಪಕವಾಗಿ ಪರಿಹಾರ ನೀಡುವುದರ ಮಹತ್ವವನ್ನು ಆ ಸಂದರ್ಭದಲ್ಲಿ ಒತ್ತಿ ಹೇಳಿದ್ದ ಅವರು ಕಿರಿಯ ವಕೀಲರನ್ನು ಅಮೂಲ್ಯ ಕೊಡುಗೆಗಳನ್ನು ನೀಡುವ ವ್ಯಕ್ತಿಗಳನ್ನಾಗಿ ನೋಡುವಂತೆ ಕಿವಿಮಾತು ಹೇಳಿದ್ದರು.

ಇತ್ತೀಚೆಗಷ್ಟೇ ಕಿರಿಯ ವಕೀಲರಿಗೆ ಮಾಸಿಕ ರೂ.15ರಿಂದ 20 ಸಾವಿರ ರೂ ಸ್ಟೈಪೆಂಡ್‌ ನೀಡುವಂತೆ ವಕೀಲರ ಪರಿಷತ್ತು, ಸಂಘಗಳಿಗೆ ಮದ್ರಾಸ್‌ ಹೈಕೋರ್ಟ್‌ ಆದೇಶಿಸಿತ್ತು.