ಸಿಜೆಐ ಡಿ ವೈ ಚಂದ್ರಚೂಡ್‌ 
ಸುದ್ದಿಗಳು

ದೇಶದ ನ್ಯಾಯಾಂಗದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಬಗೆಹರಿಸಲು ಸಿಜೆಐ ಕರೆ

ಪ್ರಕರಣಗಳ ಬಾಕಿ, ಹಳೆಯ ಕಾರ್ಯವಿಧಾನ, ಮುಂದೂಡುವ ಸಂಸ್ಕೃತಿ ಸೇರಿದಂತೆ ನ್ಯಾಯಾಂಗದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ನಿಭಾಯಿಸುವ ತುರ್ತು ಅಗತ್ಯ ಇದೆ ಎಂದು ಸಿಜೆಐ ಹೇಳಿದರು.

Bar & Bench

ದೇಶದ ನ್ಯಾಯಾಂಗದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಕರೆ ನೀಡಿದರು.

ನವದೆಹಲಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸುಪ್ರೀಂ ಕೋರ್ಟ್ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಕರಣಗಳ ಬಾಕಿ, ಹಳೆಯ ಕಾರ್ಯವಿಧಾನ, ಮುಂದೂಡುವ ಸಂಸ್ಕೃತಿ ಸೇರಿದಂತೆ ನ್ಯಾಯಾಂಗದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ನಿಭಾಯಿಸುವ ತುರ್ತು ಅಗತ್ಯ ಇದೆ ಎಂದು ಸಿಜೆಐ ಹೇಳಿದರು.

ಇದೇ ವೇಳೆ ಅವರು ನ್ಯಾಯಾಂಗದ ಸ್ವಾತಂತ್ರ್ಯ ಉಳಿಸಿಕೊಳ್ಳಲು ಈಗಿರುವ ಸಾಂವಿಧಾನಿಕ ಸುರಕ್ಷತೆಗಳು ಸಾಕಾಗುವುದಿಲ್ಲಎಂದು ಒತ್ತಿ ಹೇಳಿದರು.

ನ್ಯಾಯಾಂಗ ಎಂದರೆ ಕಾರ್ಯಾಂಗ ಮತ್ತು ಶಾಸಕಾಂಗಕ್ಕಿಂತಲೂ ಭಿನ್ನವಾದುದಾಗಿದ್ದು ಮಾನವ ಪಕ್ಷಪಾತ ಇಲ್ಲದ ನ್ಯಾಯಾಧೀಶರು ಅಲ್ಲಿರುತ್ತಾರೆ ಎಂದರು.

ನ್ಯಾಯ ಬಯಸುವ ಜನರು ಸಂಪರ್ಕಿಸುವ ಮೊದಲ ಸ್ಥಳವಾಗಿ ಜಿಲ್ಲಾ ನ್ಯಾಯಾಂಗದ ಪಾತ್ರವನ್ನು ಒಪ್ಪಿಕೊಂಡ ಸಿಜೆಐ, ವ್ಯವಸ್ಥೆಯೊಳಗೆ ಘನತೆ ಕಾಪಾಡಿಕೊಳ್ಳುವ ಮಹತ್ವವನ್ನು ವಿವರಿಸಿದರು.

"ಒಂದು ಸಂಸ್ಥೆಯಾಗಿ ಪ್ರಸ್ತುತವಾಗಿ ಉಳಿಯಬೇಕೆಂದರೆ ಸವಾಲುಗಳನ್ನು ಗುರುತಿಸಿ ಕಷ್ಟಕರ ಸಂವಾದದಲ್ಲಿ ತೊಡಗಿಕೊಳ್ಳುವುದು ಅಗತ್ಯ ಎಂದ ಅವರು ನ್ಯಾಯಾಂಗದ ಮೇಲೆ ಪರಿಣಾಮ ಬೀರುವ ನಾಲ್ಕು ಸಮಸ್ಯೆಗಳು ಮತ್ತು ಅವುಗಳನ್ನು ನಿಭಾಯಿಸಬೇಕಾದ ರೀತಿಯನ್ನು ವಿವರಿಸಿದರು:

ಪ್ರಕರಣಗಳನ್ನು ಮುಂದೂಡುವ ಸಂಸ್ಕೃತಿಯ ಬದಲಿಗೆ ವೃತ್ತಿಪರತೆಯ ಸಂಸ್ಕೃತಿಗೆ ಹೊರಳಬೇಕಿದೆ.

ನ್ಯಾಯಾಂಗ ತೀರ್ಪುಗಳು ನಿರಂತರ ವಿಳಂಬಕ್ಕೆ ಕಾರಣವಾಗುವ ಸುದೀರ್ಘ ಮೌಖಿಕ ವಾದದ ಸಮಸ್ಯೆಯನ್ನು ಬಗೆಹರಿಸಬೇಕಿದೆ.

ಕಾನೂನು ವೃತ್ತಿಯಲ್ಲಿ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಲಿಂಗ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ ಮೊದಲ ತಲೆಮಾರಿನ ವಕೀಲರಿಗೆ ಸಮಾನ ಅವಕಾಶವನ್ನು ನೀಡುವ ಅಗತ್ಯವಿದೆ.

ನ್ಯಾಯಾಲಯಗಳು ಪಡೆದುಕೊಳ್ಳುವ ದೀರ್ಘ ರಜೆಗಳ ಬದಲಿಗೆ ನ್ಯಾಯಾಧೀಶರು ಮತ್ತು ವಕೀಲರಿಗೆ ಅನುಕೂಲಕರ ಬಿಡುವು ಒದಗಿಸುವುದು ಸಾಧ್ಯವೇ ಎಂಬ ಬಗ್ಗೆ ಸಂವಾದ ನಡೆಸಬೇಕಿದೆ

ಸರ್ವೋಚ್ಚ ನ್ಯಾಯಾಲಯು ಸ್ಥಾಪನೆಯಾಗಿ ಎಪ್ಪತ್ತೈದನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವುದು ಮುಖ್ಯ. ಇದೇ ವೇಳೆ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸಂವಿಧಾನವನ್ನು ಎತ್ತಿಹಿಡಿಯುವ ಬದ್ಧತೆಯನ್ನು ಹಸಿರಾಗಿಡುವಂತೆ ಅವರು ಒತ್ತಾಯಿಸಿದರು.