CJI DY Chandrachud
CJI DY Chandrachud 
ಸುದ್ದಿಗಳು

ಕೇವಲ ಕೋವಿಡ್ ಅವಧಿಗೆ ವರ್ಚುವಲ್ ವಿಚಾರಣೆ ಸೀಮಿತವಲ್ಲ, ಅದನ್ನು ಮುಂದುವರಿಸುವಂತೆ ಹೈಕೋರ್ಟ್‌ಗಳಿಗೆ ಸಿಜೆಐ ಕಿವಿಮಾತು

Bar & Bench

ದಾವೆದಾರರ ಅನುಕೂಲಕ್ಕಾಗಿ ನ್ಯಾಯಾಂಗ ಮತ್ತು ನ್ಯಾಯಾಧೀಶರು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ನ್ಯಾಯಾಧೀಶರು ತಂತ್ರಜ್ಞಾನ ಸ್ನೇಹಿಯಲ್ಲ ಎಂಬುದು ದಾವೆ ಹೂಡುವವರಿಗೆ ಹೊರೆಯಾಗಬಾರದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಶನಿವಾರ ಹೇಳಿದ್ದಾರೆ.

ಒಡಿಶಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಡಿಜಿಟೀಕರಣ ಸಮ್ಮೇಳನದಲ್ಲಿ ತಟಸ್ಥ ಉಲ್ಲೇಖ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೈಬ್ರಿಡ್‌ ವಿಚಾರಣೆ ಸಕ್ರಿಯಗೊಳಿಸುವಂತಹ ತಂತ್ರಜ್ಞಾನ ಬಳಕೆ ಮುಂದುವರಿಸುವಂತೆ ಹೈಕೋರ್ಟ್‌ಗಳಿಗೆ ಸಿಜೆಐ ಸಲಹೆ ನೀಡಿದರು. ಅಂತಹ ಸೌಲಭ್ಯಗಳನ್ನು ಕೋವಿಡ್‌ ಸಾಂಕ್ರಾಮಿಕ ಸಮಯದ ಬಳಕೆಗೆ ಮಾತ್ರ ಉದ್ದೇಶಿಸಿರಲಿಲ್ಲ ಎಂದವರು ಹೇಳಿದರು.

ಸಿಜೆಐ ಅವರ ಭಾಷಣದ ಪ್ರಮುಖಾಂಶಗಳು

  • ತಂತ್ರಜ್ಞಾನ ನಮಗೆ ಸುಲಭವಲ್ಲ ಎಂಬ ಕಾರಣಕ್ಕೆ ನಾವು ನಮ್ಮ ವಕೀಲರಿಗೆ ಹೊರೆಯಾಗಬಾರದು. ಅದಕ್ಕೆ ಸರಳ ಪರಿಹಾರ ಎಂದರೆ ನಮಗೆ ನಾವೆ ಮರುತರಬೇತಿ ಮಾಡಿಕೊಳ್ಳುವುದು.

  • (ಕೋವಿಡ್‌ ಹಿನ್ನೆಲೆಯಲ್ಲಿ ಹೈಬ್ರಿಡ್‌ ವಿಚಾರಣೆಗೆ ಸಲಹೆ ನೀಡಿ ತಾವು ಕೆಲ ದಿನಗಳ ಹಿಂದೆ ದೇಶದೆಲ್ಲೆಡೆಯ ಹೈಕೋರ್ಟ್‌ಗಳಿಗೆ ಬರೆದಿದ್ದ ಪತ್ರ ಪ್ರಸ್ತಾಪಿಸುತ್ತಾ) ಕೆಲ ಹೈಕೋರ್ಟ್‌ಗಳು ವೀಡಿಯೊ ಕಾನ್ಫರೆನ್ಸ್‌ ವ್ಯವಸ್ಥೆ ರದ್ದುಗೊಳಿಸಿವೆ. ಆದರೆ ಸಮಸ್ಯೆ ಇರುವುದು ಮೂಲಸೌಕರ್ಯದ ಬಗ್ಗೆ ಅಲ್ಲ. ಅವುಗಳನ್ನು ನಾವು ಬಳಸುತ್ತಿದ್ದೇವೆಯೇ ಎಂಬುದರ ಬಗ್ಗೆ.

  • ಹೈಬ್ರಿಡ್‌ ವಿಚಾರಣೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಅನೇಕ ವಕೀಲರು ನನಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕೋವಿಡ್‌ ಸಾಂಕ್ರಾಮಿಕ ರೋಗಕ್ಕೆ ಮಾತ್ರ ಸೀಮಿತವಲ್ಲ. ಕೋವಿಡ್‌ ಬಳಿಕ ಅವುಗಳ ಬಳಕೆಯನ್ನು ತೊರೆಯದಿರಿ.

  • (ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಪರೀಕ್ಷಾರ್ಥವಾಗಿ ಇ ಫೈಲಿಂಗ್‌ ಪೋರ್ಟಲ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಮಾತನಾಡುತ್ತಾ) ಒಮ್ಮೆ ಇ ಫೈಲಿಂಗ್‌ ವ್ಯವಸ್ಥೆ ಜಾರಿಯಾದ ಬಳಿಕ ಭೌತಿಕವಾಗಿ ಪ್ರಕರಣಗಳನ್ನು ಫೈಲ್‌ ಮಾಡುವ ವ್ಯವಸ್ಥೆ ಇರಬಾರದು. 

  • ನ್ಯಾಯಾಲಯ ಕಲಾಪಗಳ ನೇರ ಪ್ರಸಾರದ ವೇಳೆ ನ್ಯಾಯಾಲಯಗಳಲ್ಲಿ ನಡೆಯುವಂತಹ ಕೆಲವು ಗಂಭೀರವಲ್ಲದ ಘಟನೆಗಳ ದೃಶ್ಯಾವಳಿಗಳು ಪ್ರಾಮುಖ್ಯತೆ ಪಡೆಯುತ್ತಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ನೇರಪ್ರಸಾರ ಎಂಬುದು ಹೊಸ ಸವಾಲಾಗಿ ನ್ಯಾಯಾಂಗಕ್ಕೆ ಪರಿಣಮಿಸಿದೆ. ಹೀಗಾಗಿ ಕೇಂದ್ರೀಕೃತ ಕ್ಲೌಡ್‌ ಮೂಲಸೌಕರ್ಯ ಅಗತ್ಯವಿದೆ. ನ್ಯಾಯಾಲಯಗಳಿಗೆ ಹೊಸ ಹಾರ್ಡ್‌ವೇರ್‌ ಅಗತ್ಯವಿದೆ.

  • ಶಿಕ್ಷೆ ನೀಡುವಂತಹ ತೀರ್ಪುಗಳಿಗೆ ನ್ಯಾಯಾಧೀಶರ ವಿವೇಚನೆ ಅಗತ್ಯವಾಗಿದ್ದರೂ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನದ ಬಳಕೆಯು ಸಾಕಷ್ಟು ಉಪಯುಕ್ತ.