Senior Advocate Dushyant Dave
Senior Advocate Dushyant Dave 
ಸುದ್ದಿಗಳು

ಸಿಜೆಐ ಎನ್‌ ವಿ ರಮಣ ಅವರಿಗೆ ಬೀಳ್ಕೊಡುಗೆ: ಗದ್ಗದಿತರಾದ ಹಿರಿಯ ವಕೀಲ ದುಷ್ಯಂತ್‌ ದವೆ

Bar & Bench

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಇಂದು ನಿವೃತ್ತಿ ಹೊಂದುತ್ತಿದ್ದು, ಅಂತಿಮ ಬಾರಿಗೆ ಪೀಠ ಅಲಂಕರಿಸಿದ್ದ ನ್ಯಾಯಮೂರ್ತಿ ರಮಣ ಅವರ ನೇತೃತ್ವದ ಶಿಷ್ಟಾಚಾರದ ಪೀಠವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ನ್ಯಾ. ರಮಣ ಅವರ ಬಗ್ಗೆ ಅಟಾರ್ನಿ ಜನರಲ್‌ ಕೆ ವೇಣುಗೋಪಾಲ್‌, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಹಿರಿಯ ವಕೀಲ ಕಪಿಲ್‌ ಸಿಬಲ್‌ ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಂಡರು. ಅನಂತರ ಮಾತನಾಡಿದ ಹಿರಿಯ ವಕೀಲ ಹಾಗೂ ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ನ ಮಾಜಿ ಅಧ್ಯಕ್ಷ ದುಷ್ಯಂತ್‌ ದವೆ ಅವರು ನ್ಯಾ. ರಮಣ ಅವರ ಕುರಿತು ಮಾತನಾಡುವಾಗ ಗದ್ಗದಿತರಾದ ಪ್ರಸಂಗ ನಡೆಯಿತು.

“ನೀವು ಜನಸಾಮಾನ್ಯರ ನ್ಯಾಯಮೂರ್ತಿ. ನನ್ನ ಭಾವನೆಗಳನ್ನು ಇಂದು ನನಗೆ ಅದುಮಿಡಲಾಗುತ್ತಿಲ್ಲ. ನೀವು ನ್ಯಾ. ಲಲಿತ್‌ ಮತ್ತು ನ್ಯಾ. ಕೊಹ್ಲಿ ಅವರಂತಹ ಅತ್ಯುತ್ತಮರ ಕೈಗೆ ನ್ಯಾಯಾಲಯ ಕೊಟ್ಟು, ಪೀಠ ತೊರೆಯುತ್ತಿದ್ದೀರಿ. ನಿಮ್ಮನ್ನು ನಾವು ಮಿಸ್‌ ಮಾಡಿಕೊಳ್ಳುತ್ತೇವೆ. ನಿಮಗೆ ತುಂಬು ಧನ್ಯವಾದಗಳು” ಎಂದರು.

“ನೀವು ಸಿಜೆಐ ಆಗಿ ಪದಗ್ರಹಣ ಮಾಡಿದಾಗ ನನಗೆ ಅನುಮಾನಗಳಿದ್ದವು. ಈ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಲೇಖನವನ್ನೂ ಬರೆದಿದ್ದೆ. ಆದರೆ, ಸಿಜೆಐ ಅವರು ಎಲ್ಲಾ ನಿರೀಕ್ಷೆಗಳನು ಮೀರಿ, ಅಸಂಖ್ಯಾತ ಜನರ ಹಕ್ಕುಗಳನ್ನು ಎತ್ತಿ ಹಿಡಿದಿದ್ದಾರೆ. ನೀವು ಜನರ ಹಕ್ಕುಗಳನ್ನು ಎತ್ತಿ ಹಿಡಿದಿದ್ದೀರಿ. ನೀವು ಸಂವಿಧಾನವನ್ನು ಎತ್ತಿ ಹಿಡಿದಿದ್ದೀರಿ” ಎಂದು ಭಾವುಕರಾದರು.

ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ನಡುವಿನ ನಿಯಂತ್ರಣ ಮತ್ತು ಸಮತೋಲನವನ್ನು ಸಿಜೆಐ ಸಾಧಿಸಿದ್ದನ್ನು ದವೆ ಮುಕ್ತ ಕಂಠದಿಂದ ಪ್ರಶಂಸಿಸಿದರು. “ನೀವು ಅದನ್ನು ಸಾಧ್ಯ ಮಾಡದಿರಿ. ನಗು ಮುಖದಿಂದ ಅದನ್ನು ಸಾಧ್ಯವಾಗಿಸಿದಿರಿ. ಸಂಸ್ಥೆಗಳು, ವಕೀಲರು ಮತ್ತು ಪಾರ್ಟಿ ಇನ್‌ ಪರ್ಸನ್‌ಗಳು ಎಲ್ಲದರೊಂದಿಗೆ ನೀವು ಇದನ್ನು ಸೌಜನ್ಯದಿಂದ ಸಾಧಿಸಿದಿರಿ. ನ್ಯಾಯಾಲಯವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದು ನೀವು ಆ ಸ್ಥಾನ ತೊರೆಯುತ್ತಿದ್ದೀರಿ. ಈ ಘನ ನ್ಯಾಯಾಲಯದಲ್ಲಿ ನೀವು ಸೃಷ್ಟಿಸಿದ ವಾತಾವರಣ, ತುಂಬಿದ ಶಕ್ತಿಯು ಮುಂದೆಯೂ ನಿರಂತರವಾಗಿ ಸದೃಢಗೊಳ್ಳಲಿದೆ” ಎಂದರು.