School children 
ಸುದ್ದಿಗಳು

ಬಿಸಿಯೂಟದ ಪಾತ್ರೆಯಲ್ಲಿ ಬಿದ್ದು ವಿದ್ಯಾರ್ಥಿನಿಗೆ ಗಾಯ: ಮುಖ್ಯ ಶಿಕ್ಷಕಿ ವಿರುದ್ದ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬಿಸಿಯೂಟ ತಯಾರಿಕೆ ಮತ್ತು ಮಕ್ಕಳಿಗೆ ಊಟ ಬಡಿಸುವುದಕ್ಕೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಅದನ್ನು ಪಾಲಿಸುವಲ್ಲಿ ಮುಖ್ಯ ಶಿಕ್ಷಕಿ ವಿಫಲವಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಪರಿಗಣಿಸಿ ನ್ಯಾಯಾಲಯ ಪರಿಹಾರ ನಿರಾಕರಿಸಿದೆ.

Bar & Bench

ಬಿಸಿಯೂಟದ ಸಾಂಬಾರ್‌ ಪಾತ್ರೆಯಲ್ಲಿ ಬಿದ್ದು ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಶಿರಾ ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸುವಂತೆ ಕೋರಿ ಶೋಭಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಕೆ ರಾಜೇಶ್‌ ರೈ ಅವರ ಪೀಠ ಗುರುವಾರ ಆದೇಶಿಸಿದೆ. ವಿಸ್ತೃತ ಆದೇಶವು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Justice K Rajesh Rai

ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 285 ಮತ್ತು 337 ಅಡಿಯ ನಿರ್ಲಕ್ಷ್ಯತನ ತೋರಿ ಅಪಾಯ ಉಂಟು ಮಾಡಿದ ಅಪರಾಧವು ಅರ್ಜಿದಾರರಿಗೆ ಅನ್ವಯಿಸುವುದಿಲ್ಲ. ಹಾಗಾಗಿ, ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದರು.

ಈ ವಾದ ಆಕ್ಷೇಪಿಸಿದ್ದ ಗಾಯಾಳು ವಿದ್ಯಾರ್ಥಿನಿ ತಂದೆಯ ಪರ ವಕೀಲೆ ಮನೋರಂಜನಿ ಅವರು, ಅರ್ಜಿದಾರರಿಗೆ ನಿರ್ಲಕ್ಷ್ಯ ಅಪರಾಧ ಅನ್ವಯಿಸಲಿದೆ. ಶಾಲೆಯಲ್ಲಿ ಅಡುಗೆ ತಯಾರಕರನ್ನು ನೇಮಿಸುವ ಮತ್ತು ಅವರ ಮೇಲ್ವಿಚಾರಣೆ ನೋಡಿಕೊಳ್ಳುವ ಹೊಣೆ ಮುಖ್ಯ ಶಿಕ್ಷಕರದ್ದಾಗಿದೆ. ಬಿಸಿಯೂಟ ತಯಾರಿಕೆ ಮತ್ತು ಮಕ್ಕಳಿಗೆ ಊಟ ಬಡಿಸುವುದಕ್ಕೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಅದನ್ನು ಪಾಲಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದು, ಎಫ್‌ಐಆರ್‌ ರದ್ದುಪಡಿಸಬಾರದು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: 2023ರ ಜುಲೈ 6ರಂದು ಕಳ್ಳಂಬೆಳ್ಳ ಪೊಲೀಸ್‌ ಠಾಣೆಗೆ ರಂಗಯ್ಯ ದೂರು ನೀಡಿದ್ದರು. ಕಳ್ಳಂಬೆಳ್ಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023ರ ಜೂನ್‌ 15ರಂದು ಮಕ್ಕಳನ್ನು ಬಿಸಿಯೂಟ ತಯಾರಿಸಲು ಬಿಡಲಾಗಿತ್ತು. ಈ ವೇಳೆ ಬಿಸಿಯೂಟದ ಸಾಂಬಾರ್‌ ಪಾತ್ರೆ ತೆರೆಯಲಾಗಿತ್ತು. 2ನೇ ತರಗತಿ ವಿದ್ಯಾರ್ಥಿನಿಯಾದ ನನ್ನ ಮಗಳು ರಿತ್ವಿಕಾ ಬಿಸಿಯೂಟ ತೆಗೆದುಕೊಳ್ಳಲು ಹೋದಾಗ ಸಾಂಬಾರಿನ ಪಾತ್ರೆಗೆ ಬಿದ್ದಿದ್ದಾಳೆ. ಇದರಿಂದ ತೊಡೆಯ ಭಾಗದಿಂದ ಅರ್ಧ ಬೆನ್ನಿನವರೆಗೆ ಎರಡೂ ಕಡೆ ಸುಟ್ಟಗಾಯಗಳಾಗಿದೆ. ಈ ಅವಘಡಕ್ಕೆ ಶಾಲೆಯಲ್ಲಿ ಅಡುಗೆ ಲಸ ಮಾಡುವ ಜಯಮ್ಮ, ನಾಗಮಣಿ, ಮಂಜಮ್ಮ ಮತ್ತು ಮುಖ್ಯಶಿಕ್ಷಕಿ ಶೋಭಾ ತೋರಿರುವ ಜವಾಬ್ದಾರಿಯೇ ಕಾರಣ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಕಳ್ಳಂಬೆಳ್ಳ ಠಾಣಾ ಪೊಲೀಸರು, ಐಪಿಸಿ ಸೆಕ್ಷನ್‌ 285 (ಬೆಂಕಿ ಅಥವಾ ದಹಿಸುವ ವಸ್ತುವಿಗೆ ಸಂಬಂಧಿಸಿದಂತೆ ತೋರುವ ನಿರ್ಲಕ್ಷ್ಯದ ನಡವಳಿಕೆ) ಮತ್ತು ಸೆಕ್ಷನ್‌ 337 (ನಿರ್ಲಕ್ಷ್ಯ ವಹಿಸಿ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡಿ  ಗಾಯಗೊಳಿಸಿದ) ಅಪರಾಧದಡಿ ಅರ್ಜಿದಾರರ ವಿರುದ್ಧ  ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಶಿರಾ ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.