CLAT 2020
CLAT 2020 
ಸುದ್ದಿಗಳು

ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ನಡೆದ ಸಿಎಲ್‌ಎಟಿ ಪರೀಕ್ಷೆ; ಕೋವಿಡ್ ತಡೆಗಿತ್ತು ಅಗತ್ಯ ಕ್ರಮ: ಎನ್‌ಎಲ್‌ಯುಸಿ

Bar & Bench

ಇಂದು ನಡೆದ ಬಹುಚರ್ಚಿತ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ-2020) ವಿದ್ಯಾರ್ಥಿ ಸ್ನೇಹಿಯಾಗಿದ್ದು, ತಾಂತ್ರಿಕ ಸಮಸ್ಯೆಗಳಿಂದ ಹೊರತಾಗಿತ್ತು. ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಥರ್ಮಲ್ ಸ್ಕ್ರೀನಿಂಗ್, ಪ್ರತ್ಯೇಕ ಕೊಠಡಿಗಳಂತಹ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಕಲ್ಪಿಸಲು ಇಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿದೆ. 75,183 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದು, 68,833 ವಿದ್ಯಾರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು. ಈ ಪೈಕಿ ಶೇ. 86.20 ಪ್ರಮಾಣದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

“ಕೇವಲ ಒಬ್ಬ ವಿದ್ಯಾರ್ಥಿಗಾಗಿಯೇ ಲಕ್ಷದೀಪದ ಕವರಟ್ಟಿಯಲ್ಲಿ ಪರೀಕ್ಷಾ ಕೇಂದ್ರ ತೆರಯಲಾಗಿತ್ತು. ಆದರೆ, ಆ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿರಲಿಲ್ಲ. 6 ಕೇಂದ್ರಗಳಲ್ಲಿ 10ಕ್ಕೂ ಕಡಿಮೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ, 10 ಕೇಂದ್ರಗಳಲ್ಲಿ 11 ರಿಂದ 20 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅತಿ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಕ್ರಮವಾಗಿ ಉತ್ತರ ಪ್ರದೇಶ (45), ದೆಹಲಿಯಲ್ಲಿ (25) ತೆರೆಯಲಾಗಿತ್ತು. ಮಹಾರಾಷ್ಟ್ರದಲ್ಲಿ 23, ಕರ್ನಾಟಕದಲ್ಲಿ 18 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು” ಎಂದು ಪ್ರಕಟಣೆ ತಿಳಿಸಿದೆ.

“ಪರೀಕ್ಷೆ ವಿದ್ಯಾರ್ಥಿ ಸ್ನೇಹಿಯಾಗಿದ್ದು, ತಮ್ಮ ಸರಿ ಉತ್ತರಗಳನ್ನು ಪರಿಶೀಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಯಾವುದೇ ಪ್ರಶ್ನೆಗೆ ಉತ್ತರಿಸದೆ ಇದ್ದರೆ ಅದಕ್ಕೆ ಋಣಾತ್ಮಕ ಅಂಕ ನೀಡುವುದಿಲ್ಲ. ಹಿಂದಿನ ವರ್ಷಗಳ ಹೋಲಿಕೆಯಲ್ಲಿ ಈ ಬಾರಿ ಒಕ್ಕೂಟವು ಸಿಎಲ್‌ಎಟಿ (ಯುಜಿ) ಪ್ರಶ್ನೆಗಳ ಸಂಖ್ಯೆಯನ್ನು 200ರಿಂದ 150ಕ್ಕೆ ಇಳಿಸಿತ್ತು."
ಎನ್‌ಎಲ್‌ಯು ಒಕ್ಕೂಟದ ಮಾಧ್ಯಮ ಪ್ರಕಟಣೆ

ಪರೀಕ್ಷೆಯ ಪ್ರಾಮಾಣಿಕತೆಯ ದೃಷ್ಟಿಯಿಂದ ಅಭ್ಯರ್ಥಿಗಳಿಗೆ ಕೀ ಬೋರ್ಡ್ ಬದಲಾಗಿ ಮೌಸ್ ಬಳಕೆಗೆ ಅವಕಾಶ ಮಾಡಿಕೊಡಲಾಗಿತ್ತು. ಇಂದೇ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳನ್ನು ಅಪ್ ಲೋಡ್ ಮಾಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಆದ್ಯತೆಗಳ ಎನ್‌ಎಲ್‌ಯುಗಳನ್ನು ಪರಿಷ್ಕರಿಸಲು ಅವಕಾಶ ಮಾಡಿಕೊಡಲಾಗುವುದು. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಬಾಬು ಅವರ ನೇತೃತ್ವದಲ್ಲಿ ಕುಂದುಕೊರತೆ ಸಮಿತಿಯನ್ನೂ ರಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಿಎಲ್‌ಎಟಿ ಅಂತಿಮ ಪಟ್ಟಿಯನ್ನು ಅಕ್ಟೋಬರ್ 5ರಂದು ಪ್ರಕಟಿಸಲಾಗುವುದು. ಅಕ್ಟೋಬರ್ 14ರೊಳಗೆ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.