ಸುದ್ದಿಗಳು

ಆಫ್‌ಲೈನ್‌ನಲ್ಲಿ ಮೇ 9ಕ್ಕೆ ಸಿಎಲ್‌ಎಟಿ- 2021 ಪರೀಕ್ಷೆ; ಜನವರಿ 1ರಿಂದ ಅರ್ಜಿ ಸ್ವೀಕಾರ

ಸಿಎಲ್‌ಎಟಿ ಪರೀಕ್ಷೆಗಾಗಿ ಜನವರಿ 1ರಿಂದ ಆನ್‌ಲೈನ್‌ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, 2021ರ ಮಾರ್ಚ್‌ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Bar & Bench

ಮುಂದಿನ ಆವೃತ್ತಿಯ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯು (ಸಿಎಲ್‌ಎಟಿ) ಆಫ್‌ಲೈನ್‌ನಲ್ಲಿ ಮೇ 9ರಂದು ನಡೆಯಲಿದೆ. ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು (ಎನ್‌ಎಲ್‌ಯುಸಿ) ಪರೀಕ್ಷೆಯ ಕುರಿತಾಗಿ ಅಧಿಸೂಚನೆ ಹೊರಡಿಸಿದ್ದು, ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ. ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಅಗತ್ಯ ಬಿದ್ದಲ್ಲಿ ಬದಲಾವಣೆ ಮಾಡಲಾಗುವುದು ಎಂದೂ ಹೇಳಲಾಗಿದೆ.

ಜನವರಿ 1ರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳು ದೊರೆಯಲಿದ್ದು, ಅರ್ಜಿ ಸಲ್ಲಿಸಲು 2021ರ ಮಾರ್ಚ್‌ 31 ಕೊನೆಯ ದಿನವಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ (10+2) ಶೇ. 45 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಸಿಎಲ್‌ಎಟಿ ಬರೆಯಲು ಅರ್ಹರಾಗಿದ್ದಾರೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶೇ. 40ರಷ್ಟು ಕಟ್‌-ಆಫ್‌ ಅಂಕ ನಿಗದಿಪಡಿಸಲಾಗಿದ್ದು, 4,000 ರೂಪಾಯಿ ಅರ್ಜಿ ಶುಲ್ಕ ನಿಗದಿಗೊಳಿಸಲಾಗಿದೆ (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 3,500 ರೂಪಾಯಿ).

CLAT 2021 notification

ಹಿಂದೆ ಘೋಷಿಸಲಾದಂತೆ ನಾಗಪುರದಲ್ಲಿರುವ ಮಹಾರಾಷ್ಟ್ರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವಿಜೇಂದ್ರ ಕುಮಾರ್‌ ಅವರನ್ನು ಸಿಎಲ್‌ಎಟಿ – 2021ಕ್ಕೆ ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಎನ್‌ಎಲ್‌ಯು ಒಕ್ಕೂದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಎನ್‌ಎಎಲ್‌ಎಸ್‌ಎಆರ್‌ ಹೈದರಾಬಾದ್‌ ಉಪಕುಲಪತಿ ಪ್ರೊ. ಫೈಜಾನ್‌ ಮುಸ್ತಾಫಾ ನೇಮಕಗೊಂಡಿದ್ದು, ಎನ್‌ಎಲ್‌ಯು ಜೋಧಪುರದ ಉಪಕುಲಪತಿ ಪ್ರೊ. ಪೂನಂ ಸೆಕ್ಸೇನಾ ಅವರು ನೂತನ ಅಧ್ಯಕ್ಷರಾಗಿದ್ದಾರೆ.

ಈಚೆಗೆ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು ಸಿಎಲ್‌ಎಟಿಗೆ ಪರ್ಯಾಯವಾಗಿ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ (ಎನ್‌ಎಲ್‌ಎಟಿ) ನಡೆಸಿದ್ದರಿಂದ ಭಾರಿ ವಿವಾದ ಸೃಷ್ಟಿಯಾಗಿತ್ತು. ಎನ್‌ಎಲ್‌ಎಟಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌ ಸಿಎಲ್‌ಎಟಿ ಮೂಲಕ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವಂತೆ ಎನ್‌ಎಲ್‌ಎಸ್‌ಐಯುಗೆ ನಿರ್ದೇಶಿಸಿತ್ತು.