ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ 2022 (ಸಿಎಲ್‌ಎಟಿ) ನಿಗದಿಯಾದಂತೆ ಇಂದು, ಭಾನುವಾರ ಮಧ್ಯಾಹ್ನ 2ರಿಂದ 4 ಗಂಟೆಗೆ ನಡೆಯಲಿದೆ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ತಿಳಿಸಿದೆ.
ದೇಶದ ವಿವಿಧೆಡೆ ಯುವಜನತೆಯು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ತೀವ್ರ ಪ್ರತಿಭಟನೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಲು ಎದುರಾಗಬಹುದಾದ ತೊಡಕುಗಳನ್ನು ಗಮನದಲ್ಲಿರಿಸಿಕೊಂಡು ವಿವಿಧ ಸ್ತರಗಳಿಂದ ಕಳವಳ ವ್ಯಕ್ತವಾಗಿತ್ತು. ಇದರಿಂದಾಗಿ ಪರೀಕ್ಷೆಯನ್ನು ನಡೆಸುವ ವಿಚಾರವಾಗಿ ನಿರ್ಧರಿಸಲು ಶನಿವಾರ ಒಕ್ಕೂಟವು ಸಭೆ ಸೇರಿತ್ತು. ಅಂತಿಮವಾಗಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಈ ಕುರಿತು ಒಕ್ಕೂಟವು ಪತ್ರಿಕಾ ಹೇಳಿಕೆ ನೀಡಿದ್ದು, ಜೂನ್ 19, 2022, ಭಾನುವಾರ ಮಧ್ಯಾಹ್ನ 2 ರಿಂದ 4 ಗಂಟೆಯ ಅವಧಿಯಲ್ಲಿ ನಿಗದಿಯಂತೆ ಬಿಎ ಎಲ್‌ಎಲ್‌ಬಿ ಮತ್ತು ಎಲ್‌ಎಲ್‌ಎಂ ಕೋರ್ಸ್‌ಗಳಿಗೆ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ 2022 ನಡೆಯಲಿದೆ. ದೇಶದ 25 ರಾಜ್ಯಗಳ 131 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ನಡೆಸಲು ಸೂಕ್ತ ಕೋವಿಡ್ ಸುರಕ್ಷಾ ಕ್ರಮಗಳನ್ನು ಒಕ್ಕೂಟ ಕೈಗೊಂಡಿದೆ ಎಂದು ತಿಳಿಸಿದೆ.
ಅಲ್ಲದೆ, ಪರೀಕ್ಷಾ ಕೇಂದ್ರಗಳನ್ನು ಅವಧಿಗೂ ಮುನ್ನ ತಲುಪಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಭ್ಯರ್ಥಿಗಳಿಗೆ ಸಲಹೆ ನೀಡಿದೆ.