Karnataka High Court 
ಸುದ್ದಿಗಳು

ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಮಾವಿನ ತೋಪು ತೆರವು: ಎಸಿಎಫ್‌, ಆರ್‌ಎಫ್‌ಒಗೆ ಸಮನ್ಸ್‌ ಜಾರಿ ಮಾಡಿದ ಹೈಕೋರ್ಟ್‌

Bar & Bench

ನ್ಯಾಯಾಲಯದ ಮಧ್ಯಂತರ ಆದೇಶಕ್ಕೆ ವಿರುದ್ಧವಾಗಿ ಅರಣ್ಯ ಒತ್ತುವರಿ ಆರೋಪದಡಿ ಸಾಗುವಳಿ ಚೀಟಿ ಹೊಂದಿದ ರೈತರ ಮಾವಿನ ತೋಪುಗಳನ್ನು ತೆರವುಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲ ಮತ್ತು ವಲಯ ಅರಣ್ಯಾಧಿಕಾರಿಗೆ ಸಮನ್ಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ.

ಉಪ್ಪಾರಪಲ್ಲಿಯ ಗುಲ್ಜಾರ್‌ ಪಾಷ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್‌ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ಪ್ರಕರಣದ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಎಂ ಶಿವಪ್ರಕಾಶ್‌ ಅವರು ಒತ್ತುವರಿ ಆರೋಪದಡಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿ ಏಡುಕೊಂಡಲ ಮತ್ತು ಅನಿಲ್‌ ಕುಮಾರ್ ಅವರು ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಪೀಠವು ಮುಂದಿನ ವಿಚಾರಣೆ ವೇಳೆಗೆ ಇಬ್ಬರೂ ಅಧಿಕಾರಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಆದೇಶಿಸಿ, ವಿಚಾರಣೆಯನ್ನು ಫೆಬ್ರವರಿ 21ಕ್ಕೆ ಮುಂದೂಡಿತು.

ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಅರಣ್ಯ ಅಧಿಕಾರಿಗಳು ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಶ್ರೀನಿವಾಸಪುರ ತಾಲ್ಲೂಕಿನ ಪಾಳ್ಯ, ಯಲವಳ್ಳಿ, ಕೇತಗಾನಹಳ್ಳಿ, ಚಿಂತೆ ಕುಂಟೆ, ನಾರಮಾಕಲ ಹಳ್ಳಿ, ಉಪ್ಪರಹಳ್ಳಿ, ಕೋಟಬಲ್ಲಪಲ್ಲಿ, ಇಲದೋಣಿ, ಲಕ್ಷ್ಮೀಪುರ, ಪಾತಪಲ್ಲಿ, ದ್ವಾರಸಂದ್ರ, ಆಲಂಬಗಿರಿ, ಸುಣ್ಣಕಲ್ಲು, ಜಿಂಕಲವಾರಿಪಲ್ಲಿ ಸೇರಿದಂತೆ ಮುಂತಾದ ಕಡೆ 1 ಲಕ್ಷ, 30 ಸಾವಿರಕ್ಕೂ ಹೆಚ್ಚಿನ ಮರಗಳನ್ನು ಕಡಿಯಲು ಕಾರಣವಾಗಿದ್ದಾರೆ ಎಂಬುದು ಅರ್ಜಿದಾರ ಆರೋಪವಾಗಿದೆ.