Sharad Pawar, Ajit Pawar with NCP clock symbol and SCSharad Pawar, Ajit Pawar (FB)
Sharad Pawar, Ajit Pawar with NCP clock symbol and SCSharad Pawar, Ajit Pawar (FB)  
ಸುದ್ದಿಗಳು

ಗಡಿಯಾರ ಚಿಹ್ನೆ: ಚುನಾವಣಾ ಜಾಹೀರಾತಿನಲ್ಲಿ ದೊಡ್ಡದಾಗಿ ಹಕ್ಕು ತ್ಯಾಗ ವಿವರ ಪ್ರಕಟಿಸಲು ಅಜಿತ್ ಬಣಕ್ಕೆ ಸುಪ್ರೀಂ ಸೂಚನೆ

Bar & Bench

ಎನ್‌ಸಿಪಿ ಅಜಿತ್ ಪವಾರ್ ಬಣಕ್ಕೆ ನೀಡಲಾಗಿರುವ ಗಡಿಯಾರದ ಚಿಹ್ನೆ ನಾಯ್ಯಾಲಯದ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂಬ ಸ್ಪಷ್ಟನೆಯನ್ನು ಚುನಾವಣಾ ಜಾಹೀರಾತುಗಳಲ್ಲಿ ದೊಡ್ಡದಾಗಿ ಪ್ರಕಟಿಸುವಂತೆ ಅಜಿತ್‌ ಬಣಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ತಾಕೀತು ಮಾಡಿದೆ [ಶರದ್‌ ಪವಾರ್‌ ಮತ್ತು ಅಜಿತ್‌ ಅನಂತರಾವ್‌ ಪವಾರ್‌ ಇನ್ನಿತರರ ನಡುವಣ ಪ್ರಕರಣ].

ಇದೇ ವೇಳೆ ಮಾರ್ಚ್ 19ರ ಆದೇಶದಲ್ಲಿ ನಿರ್ದೇಶಿಸಿರುವಂತೆ, ಮುಂದಿನ ಚುನಾವಣೆ ವೇಳೆ ಎನ್‌ಸಿಪಿ ಗಡಿಯಾರ ಚಿಹ್ನೆಯನ್ನು ಎಲ್ಲಿಯೂ ಬಳಸದೆ ತುತ್ತೂರಿ  ಚಿಹ್ನೆಯನ್ನೇ ಬಳಸಬೇಕು ಎಂದು  ಶರದ್ ಪವಾರ್ ಬಣಕ್ಕೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಎಚ್ಚರಿಕೆ ನೀಡಿದೆ.

ಕಳೆದ ವರ್ಷ ಪಕ್ಷ ಎರಡು ಬಣಗಳಾಗಿ ಹೋಳಾದ ಬಳಿಕ ಎನ್‌ಸಿಪಿ ಅಜಿತ್‌ ಬಣದ ಮುಖ್ಯಸ್ಥರಾಗಿರುವ ಅಜಿತ್‌ ಪವಾರ್‌ ವಿರುದ್ಧ ಅವರ ದೊಡ್ಡಪ್ಪ ಶರದ್‌ ಪವಾರ್‌ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.

ಅಜಿತ್ ಬಣಕ್ಕೆ ನೀಡಲಾಗಿರುವ ಗಡಿಯಾರದ ಚಿಹ್ನೆ ನಾಯ್ಯಾಲಯದ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಜಾಹೀರಾತುಗಳಲ್ಲಿ ಪ್ರಕಟಿಸುವಂತೆ ಮಾರ್ಚ್ 19ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶ ಪಾಲಿಸಲು ಅದು ವಿಫಲವಾಗಿದೆ ಎಂದು ಆರೋಪಿಸಿ  ಶರದ್ ಪವಾರ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಗಡಿಯಾರ ಚಿಹ್ನೆ ಹಂಚಿಕೆ ವ್ಯಾಜ್ಯ ಇನ್ನೂ ಇತ್ಯರ್ಥಗೊಂಡಿಲ್ಲ ಎಂದು ಸ್ಪಷ್ಟಪಡಿಸಲು ಈ ರೀತಿಯ ಹಕ್ಕು ತ್ಯಾಗ ಮಾಹಿತಿ ಪ್ರಕಟಿಸುವಂತೆ ನ್ಯಾಯಾಲಯ ಸೂಚಿಸಿತ್ತು. 

ಶರದ್‌ ಬಣದ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನುಸಿಂಘ್ವಿ, ಅಜಿತ್‌ ಬಣದ ಪರವಾಗಿ ಮತ್ತೋರ್ವ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಿದರು.