Lawyers
Lawyers 
ಸುದ್ದಿಗಳು

ವಕೀಲರ ಕಲ್ಯಾಣ ಯೋಜನೆ: 29,077 ವಕೀಲರಿಗೆ ಇ-ಕಾರ್ಡ್‌ ನೀಡಲು ನ್ಯೂ ಇಂಡಿಯಾ ಅಶ್ಯೂರೆನ್ಸ್‌ಗೆ ದೆಹಲಿ ಹೈಕೋರ್ಟ್‌ ಸೂಚನೆ

Bar & Bench

ದೆಹಲಿ ಸರ್ಕಾರ ಜಾರಿಗೆ ತಂದಿರುವ 'ಮುಖ್ಯಮಂತ್ರಿ ವಕೀಲರ ಕಲ್ಯಾಣ ಯೋಜನೆ' ಅಡಿ ಫಲಾನುಭವಿಗಳಾಗಿ ನೋಂದಾಯಿಸಿರುವ ಎಲ್ಲಾ 29,077 ವಕೀಲರಿಗೆ ಇ-ಕಾರ್ಡ್‌ ನೀಡುವಂತೆ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪೆನಿ ಲಿಮಿಟೆಡ್‌ಗೆ (ಎನ್‌ಐಎಸಿಎಲ್‌) ಶುಕ್ರವಾರ ದೆಹಲಿ ಹೈಕೋರ್ಟ್‌ ನಿರ್ದೇಶಿಸಿದೆ (ದೆಹಲಿ ವಕೀಲರ ಪರಿಷತ್‌ ವರ್ಸಸ್‌ ಜಿಎನ್‌ಸಿಟಿಡಿ. ಗೋವಿಂದ್‌ ಸ್ವರೂಪ್‌ ವರ್ಸಸ್‌ ಜಿಎನ್‌ಸಿಟಿಡಿ).

29,077 ವಕೀಲರ ಪಟ್ಟಿಯನ್ನು ದೆಹಲಿ ಸರ್ಕಾರ ಅಥವಾ ದೆಹಲಿ ವಕೀಲರ ಪರಿಷತ್‌ನಿಂದ ಪಡೆದುಕೊಳ್ಳುವಂತೆ ಎನ್‌ಐಎಸಿಎಲ್‌ಗೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಅವರಿದ್ದ ಏಕಸದಸ್ಯ ಪೀಠವು ನಿರ್ದೇಶಿಸಿದೆ.

ವಿಮೆ ಯೋಜನೆಯ ಲಾಭ ಪಡೆದುಕೊಳ್ಳಲು 22,467 ವಕೀಲರ ದಾಖಲೆಗಳನ್ನು ದೆಹಲಿ ಸರ್ಕಾರ ಮತ್ತು ದೆಹಲಿ ವಕೀಲರ ಪರಿಷತ್‌ ಪರಿಶೀಲಿಸಿವೆ. ಉಳಿದ 6,610 ವಕೀಲರ ದಾಖಲೆಯನ್ನು ದೆಹಲಿ ಸರ್ಕಾರ ಇನ್ನಷ್ಟೇ ಪರಿಶೀಲಿಸಬೇಕಿದೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತರಲಾಯಿತು.

ಪರಿಶೀಲನಾ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿರುವ ಪೀಠವು ಪರಿಶೀಲನೆಗೆ ಒಳಪಡದ 6,610 ವಕೀಲರಿಗೂ ಇ-ಕಾರ್ಡ್‌ಗಳನ್ನು ನೀಡಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಕ್ಲೇಮು ಸ್ವೀಕರಿಸಿದಾಗಲೆಲ್ಲಾ ಪರಿಶೀಲನೆ ಪ್ರಕ್ರಿಯೆಗೆ ಅನುಕೂಲವಾಗುವಂತೆ ಎನ್‌ಐಎಸಿಎಲ್‌ನ ಪ್ರತಿನಿಧಿಯನ್ನು ದೆಹಲಿಯ ವಕೀಲರ ಪರಿಷತ್‌ ಕಚೇರಿಗೆ ನಿಯೋಜಿಸಲಾಗುವುದು ಎಂದು ನ್ಯಾಯಾಲಯ ದಾಖಲಿಸಿಕೊಂಡಿದೆ. ಪರಿಶೀಲನೆಗೆ ಒಳಪಟ್ಟಂತೆ ಅಂಥ ವಕೀಲರಿಗೆ ನಗದುರಹಿತ ಚಿಕಿತ್ಸೆ ಮುಂದುವರಿಯಲಿದೆ ಎಂದು ಪೀಠ ಹೇಳಿದೆ. ಪರಿಶೀಲನೆಯ ಬಳಿಕ, ಈ ವಕೀಲರನ್ನು ಎನ್ಐಎಸಿಎಲ್ ಯೋಜನೆಯ (ಪಾಲಿಸಿ) ಪ್ರಾರಂಭದ ದಿನಾಂಕದಿಂದ ಪರಿಗಣಿಸಲಾಗುವುದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಮರಳಿದ್ದವರು ಮತ್ತು ದೆಹಲಿಯಲ್ಲಿ ಪ್ರಾಕ್ಟೀಸ್‌ ಮಾಡುವ ವಕೀಲರನ್ನು ಯೋಜನೆಯ ವ್ಯಾಪ್ತಿಗೆ ಸೇರಿಸುವ ಸಂಬಂಧ ಸರ್ಕಾರಿ ವಕೀಲರ ನೋಂದಣಿ ಪೋರ್ಟಲ್‌ ತೆರೆಯಬೇಕು ಎಂದು ದೆಹಲಿ ವಕೀಲರ ಪರಿಷತ್‌ ಅಧ್ಯಕ್ಷ ಮತ್ತು ಹಿರಿಯ ವಕೀಲ ರಮೇಶ್‌ ಗುಪ್ತ ವಾದಿಸಿದರು. ದೆಹಲಿ ವಕೀಲರ ಪರಿಷತ್‌ನಲ್ಲಿ ನೋಂದಾಯಿಸಿರುವ ರಾಷ್ಟ್ರ ರಾಜಧಾನಿಯ ವ್ಯಾಪ್ತಿಯಲ್ಲಿ (ಎನ್‌ಸಿಆರ್‌) ನೆಲೆಸಿರುವ ವಕೀಲರಿಗೆ ಮುಖ್ಯಮಂತ್ರಿ ವಕೀಲರ ಕಲ್ಯಾಣ ನಿಧಿಗೆ ವಿಸ್ತರಿಸುವ ವಿಚಾರವನ್ನು ನ್ಯಾಯಾಲಯವು ಪರಿಗಣಿಸಲಿದೆ.

ಪ್ರಸಕ್ತ ವರ್ಷದ ಆರಂಭದಲ್ಲಿ ದೆಹಲಿ ಸರ್ಕಾರವು ಮುಖ್ಯಮಂತ್ರಿ ವಕೀಲರ ಕಲ್ಯಾಣ ನಿಧಿಗೆ ಒಪ್ಪಿಗೆ ನೀಡಿತ್ತು. ಯೋಜನೆಯಡಿ ಸಮೂಹ ವಿಮೆ, ಸಮೂಹ ಮೆಡಿ ಕ್ಲೈಮ್‌, ಇ-ಲೈಬ್ರರಿ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಾರ್ಚ್‌ 4ಕ್ಕೆ ವಿಚಾರಣೆ ಮುಂದೂಡಲಾಗಿದೆ.