ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲಿನಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೈದಿಗಳ ಕ್ಷಮಾದಾನ ಕಡತಗಳಿಗೆ ಸಹಿ ಹಾಕಲು ಯಾವುದಾದರೂ ನಿಯಮದ ನಿರ್ಬಂಧವಿದೆಯೇ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಕೇಜ್ರಿವಾಲ್ ಅವರ ಸಹಿ ಆಗದೇ ಇರುವುದರಿಂದ ಕ್ಷಮಾದಾನ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ವಿಭಾಗೀಯ ಪೀಠಕ್ಕೆ ತಿಳಿಸಿದಾಗ ನ್ಯಾಯಾಲಯ ಮೇಲಿನ ಪ್ರಶ್ನೆ ಕೇಳಿತು.
ಕ್ಷಮಾದಾನ ಕಡತಕ್ಕೆ ಮುಖ್ಯಮಂತ್ರಿ ಸಹಿ ಬಿದ್ದ ನಂತರ ಅದು ಲೆಫ್ಟಿನೆಂಟ್ ಗವರ್ನರ್ ಅವರ ಬಳಿಗೆ ಹೋಗಲಿದೆ.
ವಿಚಾರಣೆಯ ವೇಳೆ ನ್ಯಾಯಾಲಯವು, "ಕ್ಷಮಾದಾನದ ಕಡತಗಳಿಗೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಹಿ ಹಾಕದಂತೆ ಏನಾದರೂ ನಿರ್ಬಂಧವಿದೆಯೇ ಎನ್ನುವ ಬಗ್ಗೆ ತಿಳಿಸಿ... ತಾವೇ ಒಬ್ಬ ಕೈದಿಯಾಗಿರುವ ವೇಳೆ ಅವಧಿಪೂರ್ವ ಬಿಡುಗಡೆಯ ಕಡತಗಳ ವಿಲೇವಾರಿ ಮಾಡಲು ಮುಖ್ಯಮಂತ್ರಿಯವರಿಗೆ ಏನಾದರೂ ನಿರ್ಬಂಧವಿದೆಯೇ?" ಎಂದು ನ್ಯಾಯಾಲಯ ಪ್ರಶ್ನಿಸಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಮತ್ತು ದೆಹಲಿ ಸರ್ಕಾರ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಅರ್ಚನಾ ದವೆ ಅವರು ಜೈಲಿನಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೈದಿಗಳ ಕ್ಷಮಾಪಣಾ ಕಡತಗಳಿಗೆ ಸಹಿ ಹಾಕಲು ಯಾವುದಾದರೂ ನಿಯಮದ ನಿರ್ಬಂಧವಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದು ನ್ಯಾಯಾಲಯದ ಗಮನಕ್ಕೆ ತರುವುದಾಗಿ ತಿಳಿಸಿದರು.
ಆಗ ಪೀಠವು ”ಈ ಕುರಿತು ಯಾವುದಾದರೂ ನಿಯಮ ಜಾರಿಯಲ್ಲಿದೆಯೇ ಎಂಬುದನ್ನು ತಿಳಿಸಬೇಕು. ಇಲ್ಲವಾದಲ್ಲಿ ನಾವು ಸಂವಿಧಾನದ 142ನೇ ವಿಧಿಯಡಿ ನಮ್ಮ ಅಧಿಕಾರವನ್ನು ಚಲಾಯಿಸಬೇಕಾಗುತ್ತದೆ. ಏಕೆಂದರೆ ಇಂಥ ವಿಚಾರಗಳನ್ನು ಬಹುಕಾಲ ಬಾಕಿ ಉಳಿಸಲಾಗದು” ಎಂದಿತು.
ಅರ್ಜಿದಾರರೊಬ್ಬರನ್ನು ಪೆರೋಲ್ ಮೇಲೆ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಅರ್ಜಿದಾರರಿಗೆ ಕ್ಷಮಾದಾನ ನೀಡುವ ವಿಚಾರದ ಕುರಿತು ಎರಡು ತಿಂಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು. ಈ ಕಾಲಮಿತಿಯು ಜುಲೈನಲ್ಲಿ ಅಂತ್ಯವಾಗಿತ್ತು.