CM Siddaramaiah and Karnataka HC 
ಸುದ್ದಿಗಳು

ಸಿಎಂ, ಡಿಸಿಎಂ ವಿರುದ್ಧ ಭ್ರಷ್ಟಾಚಾರ, ಸಂವಿಧಾನಕ್ಕೆ ಅಪಚಾರ ಎಸಗಿದ ಆರೋಪ: ಅರ್ಜಿದಾರರಿಗೆ ₹10 ಲಕ್ಷ ದಂಡದ ಎಚ್ಚರಿಕೆ

ನೇಲೋಗಿ ಗ್ರಾಮದ ಭ್ರಷ್ಟಾಚಾರ ವಿರೋಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕಲ್ಲಾಲಿಂಗ ಹೂಗಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯವು ಪೀಠವು ಅರ್ಜಿಯಲ್ಲಿ ಮೆರಿಟ್‌ ಇಲ್ಲ ಎಂದು  ವಜಾಗೊಳಿಸಿದೆ.

Bar & Bench

ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿರುವ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ 51 ಜನರನ್ನು ಅವರ ಹುದ್ದೆಗಳಿಂದ ವಜಾಗೊಳಿಸಿ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದ್ದು, ಅರ್ಜಿದಾರನಿಗೆ ₹10 ಲಕ್ಷ ದಂಡ ಹಾಕುವುದಾಗಿ ಎಚ್ಚರಿಸಿತು.

ನೇಲೋಗಿ ಗ್ರಾಮದ ಭ್ರಷ್ಟಾಚಾರ ವಿರೋಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕಲ್ಲಾಲಿಂಗ ಹೂಗಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯವು ಪೀಠವು ಅರ್ಜಿಯಲ್ಲಿ ವಿಚಾರಣಾರ್ಹತೆ ಇಲ್ಲ ಎಂದು  ವಜಾಗೊಳಿಸಿದೆ. ಅರ್ಜಿದಾರರಿಗೆ ₹10 ಲಕ್ಷ ದಂಡ ವಿಧಿಸಬೇಕಿತ್ತು. ಆದರೆ, ಅರ್ಜಿದಾರ ಕೆಪಿಟಿಸಿಎಲ್‌ನಿಂದ(ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ) ವಜಾಗೊಂಡ ನೌಕರನಾಗಿದ್ದಾರೆ. ಆದ ಕಾರಣ ದಂಡ ಹಾಕದೆ ಸುಮ್ಮನೇ ಬಿಡುತ್ತಿರುವುದಾಗಿ ಎಚ್ಚರಿಸಿದೆ.

ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಸಂವಿಧಾನ ಅವಮಾನಿಸಿರುವ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್‌ ಸಿಂಗ್‌, ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಪಿಟಿಸಿಎಲ್‌ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೂ ಸೇರಿದಂತೆ ಒಟ್ಟು 51 ಜನರನ್ನು ಅವರ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಬೇಕು. ಅವರ ವಿರುದ್ಧ ಸಿಬಿಐ, ಎನ್‌ಐಎ, ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಯಿಂದ ತುರ್ತು ತನಿಖೆಗೆ ನಿರ್ದೇಶಿಸಬೇಕು ಎಂದು ಕೋರಿ ಕಲ್ಲಾಲಿಂಗ ಹೂಗಾರ ಅರ್ಜಿ ಸಲ್ಲಿಸಿದ್ದರು.