High Court of Karnataka
High Court of Karnataka 
ಸುದ್ದಿಗಳು

ಸಿಎಂ ಕಚೇರಿ ಸಿಬ್ಬಂದಿ ಎಂದು ಬಿಂಬಿಸಿ, ಕೆಲಸ ಕೊಡಿಸುವ ಭರವಸೆ: ಆರೋಪಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

Bar & Bench

ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಎಂದು ಬಿಂಬಿಸಿಕೊಂಡು ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ವಸೂಲಿ ಮಾಡಿದ್ದ ಆರೋಪಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ ಆರ್‌ ಪ್ರದೀಪ್‌ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ ಬಸವರಾಜ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಆರೋಪಿ ಪ್ರದೀಪ್‌ ಲಂಚ ಸ್ವೀಕರಿಸಿಲ್ಲ. ಬದಲಿಗೆ ಅವರ ಭಾವ ಮೈದುನ ಅರುಣ್‌ಕುಮಾರ್‌ ಲಂಚ ಪಡೆದಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಐವತ್ತು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಭದ್ರತೆ ಒದಗಿಸಬೇಕು. ಸಾಕ್ಷಿಯ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರಬಾರದು. ತನಿಖಾಧಿಕಾರಿಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯವು ಪ್ರದೀಪ್‌ಗೆ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಆರ್‌ ಪ್ರದೀಪ್‌ ಅವರಿಗೆ ಕೆ ಜಿ ನಾಗರತ್ನಮ್ಮ ಅವರು ಕುಟುಂಬ ಸ್ನೇಹಿತರಾಗಿದ್ದರು. ಪ್ರದೀಪ್‌ ತನ್ನ ಭಾವ ಮೈದುನ ಕೆ ಎಚ್‌ ಅರುಣ್‌ ಕುಮಾರ್‌ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ಮುಖ್ಯಮಂತ್ರಿಗೆ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗುವ ಹಂತದಲ್ಲಿದ್ದಾರೆ. ಲಂಚ ಪಡೆದು ಹಲವರಿಗೆ ಉದ್ಯೋಗ ಪಡೆಯಲಯ ನೆರವಾಗಿರುವುದಾಗಿ ಹೇಳುವ ಮೂಲಕ ನಾಗರತ್ನಮ್ಮ ಕುಟುಂಬದವರಿಗೆ ನಂಬಿಕೆ ಹುಟ್ಟಿಸಿದ್ದರು.

ನಾಗರತ್ನಮ್ಮ ಅವರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, ಅದಕ್ಕಾಗಿ ಲಂಚ ನೀಡಲು ಬೇಡಿಕೆ ಇಟ್ಟಿದ್ದರು. ಫೋನ್‌ ಮೂಲಕ ಸಂಪರ್ಕಿಸಿದ್ದ ಅರುಣ್‌ ಕುಮಾರ್‌ ಸಹ ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದರು. ಇಬ್ಬರನ್ನೂ ನಂಬಿ ನಾಗರತ್ನಮ್ಮ ಅವರು 2020ರ ಜನವರಿ 7ರಂದು 7,50,000 ರೂಪಾಯಿಯನ್ನು ಅರುಣ್‌ ಕುಮಾರ್‌ ಅವರ ಐಸಿಐಸಿಐ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದರು. 2020ರ ಜನವರಿ 9ರಂದು ಅದೇ ಖಾತೆಗೆ ಮತ್ತೆ 5,00,000 ರೂಪಾಯಿ ವರ್ಗಾಯಿಸಿದ್ದರು. ಆನಂತರ ಜನವರಿ 17ರಂದು ಮತ್ತೆ 2,50,000 ರೂಪಾಯಿ ವರ್ಗಾಯಿಸಿದ್ದರು.

ಬಹುದಿನಗಳ ಬಳಿಕ ನಾಗರತ್ನಮ್ಮ ಅವರಿಗೆ ತಮ್ಮ ಉದ್ಯೋಗ ಅರ್ಜಿ ಪರಿಗಣನೆಯಲ್ಲಿದ್ದು, ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಪ್ರದೀಪ್‌ ಮತ್ತು ಅರುಣ್‌ ಕುಮಾರ್‌ ತಿಳಿಸಿದ್ದರು. ಇದೊಂದು ಹಗರಣ ಎಂದು ತಿಳಿದ ನಾಗರತ್ನಮ್ಮ ಅವರು ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿನ ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಪ್ರದೀಪ್‌, ಅರುಣ್‌ ಕುಮಾರ್‌ ಮತ್ತು ಶೈಲಜಾ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 406 (ನಂಬಿಕೆ ದ್ರೋಹ), 420 (ವಂಚನೆ) ಪ್ರಕರಣ ದಾಖಲಿಸಿದ್ದರು.

ಮಾರ್ಚ್‌ನಲ್ಲಿ ಪ್ರದೀಪ್‌ ಅವರ ಜಾಮೀನು ಅರ್ಜಿಯನ್ನು ದಾವಣಗೆರೆಯ ಸತ್ರ ನ್ಯಾಯಾಲಯ ವಜಾ ಮಾಡಿತ್ತು.

Pradeep R Vs KTJ Nagar Police.pdf
Preview