CM Siddaramaiah and Gov Thawar Chand Gehlot, Karnataka HC 
ಸುದ್ದಿಗಳು

ರಾಜ್ಯಪಾಲರಿಂದ ಅಭಿಯೋಜನಾ ಮಂಜೂರಾತಿ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಸಿಎಂ; ಮಧ್ಯಾಹ್ನ 2.30ಕ್ಕೆ ವಿಚಾರಣೆ

ಮುಖ್ಯ ನ್ಯಾಯಮೂರ್ತಿ ಅವರ ಆದೇಶಕ್ಕೆ ಒಳಪಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದ ನ್ಯಾ. ಹೇಮಂತ್‌ ಚಂದನ್‌ಗೌಡರ್.‌

Bar & Bench

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಅಭಿಯೋಜನಾ ಮಂಜೂರಾತಿ ನೀಡಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್‌ ಸಮ್ಮತಿಸಿದೆ. ಆದರೆ, ಇದು ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠದ ಮುಂದೆ ಅರ್ಜಿಯನ್ನು ಉಲ್ಲೇಖಿಸಿದರು.

“ರಾಜ್ಯಪಾಲರು ಮುಖ್ಯಮಂತ್ರಿ ಅವರ ವಿರುದ್ಧ ತನಿಖೆಗೆ ಅಭಿಯೋಜನಾ ಮಂಜೂರಾತಿ ನೀಡಿದ್ದಾರೆ. ಈ ಕ್ರಮವನ್ನು ಪ್ರಶ್ನಿಸಲಾಗಿದ್ದು, ಪ್ರಕರಣವನ್ನು ಮಧ್ಯಾಹ್ನ 2.30ಕ್ಕೆ ತುರ್ತಾಗಿ ಆಲಿಸಬೇಕು” ಎಂದು ಕೋರಿದರು.

ಆಗ ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರು ಘಟನೆಯ ಬಗ್ಗೆ ಮಾಹಿತಿ ಕೇಳಿದರು. ಅಂತಿಮವಾಗಿ ಮುಖ್ಯ ನ್ಯಾಯಮೂರ್ತಿ ಅವರ ಆದೇಶಕ್ಕೆ ಒಳಪಟ್ಟು ವಿಚಾರಣೆ ನಡೆಸಲಾಗುವುದು ಎಂದರು.

ಈ ವೇಳೆ ಪ್ರೊ. ರವಿವರ್ಮ ಕುಮಾರ್‌ ಅವರು ಮುಖ್ಯ ನ್ಯಾಯಮೂರ್ತಿಗಳಿಗೂ ಮನವಿ ಮಾಡಲಾಗಿದೆ ಎಂದರು. ಅಲ್ಲದೇ, ರಿಟ್‌ ಅರ್ಜಿಯನ್ನು ರಾಜ್ಯಪಾಲರ ಕಚೇರಿ ಪ್ರತಿನಿಧಿಸುವ ವಕೀಲರಿಗೂ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು. ಇದಕ್ಕೆ ನ್ಯಾಯಾಲಯವು ಸಮ್ಮತಿಸಿದೆ.

ಈ ನಡುವೆ, ಪ್ರೊ. ರವಿವರ್ಮ ಕುಮಾರ್‌ ಅವರು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣ ವಿಚಾರಣೆ ನಡೆಸುವ (ರೋಸ್ಟರ್‌ ಪೀಠ) ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಸಕದಸ್ಯ ಪೀಠದ ಮುಂದೆಯೂ ಪ್ರಕರಣ ಉಲ್ಲೇಖಿಸಿದರು. "ಅರ್ಜಿಯ ವಿಚಾರಣೆ ತುರ್ತು ಅಗತ್ಯವಿದೆ. ಮುಂಜಾಗ್ರತೆಯಿಂದ ತಮ್ಮ ಪೀಠದ ಮುಂದೆ ಉಲ್ಲೇಖಿಸುತ್ತಿದ್ದೇನೆ. ಅರ್ಜಿ ನಿಮ್ಮ ಪೀಠದ ಮುಂದೆ ಬಂದರೆ ಇಂದೇ ವಿಚಾರಣೆ ನಡೆಸಬೇಕು" ಎಂದು ಮನವಿ ಮಾಡಿದರು.

ಆಗ ನ್ಯಾ. ನಾಗಪ್ರಸನ್ನ ಅವರು "ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದರೆ ವಿಚಾರಣೆ ನಡೆಸಲಾಗುವುದು" ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರಿಗೆ ಅಕ್ರಮವಾಗಿ 14 ನಿವೇಶನಗಳನ್ನು ಮುಡಾ ಹಂಚಿಕೆ ಮಾಡಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂಬುದು ಆರೋಪವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರಾದ ಟಿ ಜೆ ಅಬ್ರಹಾಂ, ಮೈಸೂರಿನ ಸ್ನೇಹಮಯಿ ಕೃಷ್ಣ ಹಾಗೂ ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಎಸ್‌ ಪಿ ಪ್ರದೀಪ್‌ ಕುಮಾರ್‌ ಅವರ ಮನವಿಯ ಮೇರೆಗೆ ರಾಜ್ಯಪಾಲರು ಅಭಿಯೋಜನಾ ಮಂಜೂರಾತಿ ನೀಡಿದ್ದಾರೆ. ಇದನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ನಡುವೆ, ಪ್ರದೀಪ್‌ ಕುಮಾರ್‌ ಅವರು ಅಭಿಯೋಜನಾ ಮಂಜೂರಾತಿ ಪ್ರಶ್ನಿಸಿದರೆ ಆ ಅರ್ಜಿಯ ವಿಚಾರಣೆಯ ವೇಳೆ ತಮ್ಮ ವಾದವನ್ನೂ ಆಲಿಸಬೇಕು ಎಂದು ಕಳೆದ ಶನಿವಾರವೇ ಕೇವಿಯಟ್‌ ಹಾಕಿದ್ದಾರೆ.