ಸುದ್ದಿಗಳು

ಪರಿಣಾಮಕಾರಿಯಾಗಿ ಕರ್ತವ್ಯನಿರ್ವಹಿಸಲು ವಿಫಲರಾದರೆ ಬದಲಾವಣೆ ಅನಿವಾರ್ಯ: ಎಎಜಿಗಳಿಗೆ ಸಿಎಂ ಎಚ್ಚರಿಕೆ

“ರಾಜ್ಯ ಸರ್ಕಾರದ 21,799 ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿಯಿವೆ. ಇದರಲ್ಲಿ 5,016 ಪ್ರಕರಣಗಳಲ್ಲಿ ಯಾವುದೇ ಕ್ರಮವಾಗಿಲ್ಲ. ಇದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು” ಎಂದಿರುವ ಸಿಎಂ.

Bar & Bench

“ರಾಜ್ಯ ಸರ್ಕಾರಕ್ಕೆ ಸಣ್ಣಪುಟ್ಟ ಪ್ರಕರಣಗಳಲ್ಲಿಯೂ ಮುಜುಗರವಾಗುವಂಥ ಬೆಳವಣಿಗೆ ಘಟಿಸಿವೆ. ಇದಕ್ಕೆ ಆಸ್ಪದ ನೀಡಬಾರದು. ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ವಿಫಲರಾದರೆ ಬದಲಾವಣೆ ಅನಿವಾರ್ಯವಾಗಲಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಗುರುವಾರ ಎಚ್ಚರಿಸಿದ್ದಾರೆ.

ಕಾನೂನು ಸಚಿವ ಎಚ್‌ ಕೆ ಪಾಟೀಲ್‌, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಕೆ ಎಸ್‌ ಪೊನ್ನಣ್ಣ, ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಭಾಗಿಯಾಗಿದ್ದ ಸಭೆಯ ನೇತೃತ್ವವಹಿಸಿದ್ದ ಮುಖ್ಯಮಂತ್ರಿಗಳು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಹಲವು ಸಲಹೆ-ಸೂಚನೆ ನೀಡಿದ್ದಾರೆ.

“ರಾಜ್ಯ ಸರ್ಕಾರದ 21,799 ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿಯಿವೆ. ಇದರಲ್ಲಿ 5,016 ಪ್ರಕರಣಗಳಲ್ಲಿ ಯಾವುದೇ ಕ್ರಮವಾಗಿಲ್ಲ. ಇದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು” ಎಂದರು.

“ನ್ಯಾಯಾಲಯಗಳಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸದ ಕಾರಣಕ್ಕೆ ಸರ್ಕಾರವು ಹಲವು ಪ್ರಕರಣಗಳಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಸರ್ಕಾರಕ್ಕೆ ಅನುಕೂಲಕರವಾದ ಪ್ರಕರಣಗಳಲ್ಲಿಯೂ ಸರ್ಕಾರದ ಪರ ಆದೇಶ ಬರುತ್ತಿಲ್ಲ ಯಾಕೆ? ಅನೇಕ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧ ಯಾಕೆ ಸುಲಭವಾಗಿ ತಡೆಯಾಜ್ಞೆ ದೊರೆಯುತ್ತದೆ? ತಡೆಯಾಜ್ಞೆಯನ್ನು ವರ್ಷಗಟ್ಟಲೆ ತೆರವುಗೊಳಿಸದೆ ಇಡುವ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿವೆ? ಸರ್ಕಾರದ ವಿರುದ್ಧದ ತಡೆಯಾಜ್ಞೆ ಪ್ರಕರಣಗಳನ್ನು ಆದಷ್ಟು ಬೇಗನೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು” ಎಂದರು.

“ಸರ್ಕಾರದ ಪರವಾಗಿ ಸಮರ್ಪಕವಾಗಿ ವಾದಿಸಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಸರ್ಕಾರದ ಕಾನೂನುಗಳನ್ನು ಎಲ್ಲಾ ಹಂತಗಳಲ್ಲಿ ಎತ್ತಿ ಹಿಡಿಯುವುದು ಎಎಜಿಗಳ ಕರ್ತವ್ಯ. ಕರ್ನಾಟಕ ರಾಜ್ಯ ಕಾಯಿದೆಗಳ ಅನುಷ್ಠಾನ, ಉದ್ದೇಶದ ನಿರ್ವಹಣೆ ಎಎಜಿಗಳ ಕೈಯಲ್ಲಿದೆ. ಹಿರಿಯ ವಕೀಲರಾಗಿರುವ ಎಎಜಿಗಳಿಗೆ ಸರ್ಕಾರದ ಆದ್ಯತೆ ಕಾಪಾಡುವ ಜವಾಬ್ದಾರಿ ಇದೆ. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಹಿಸಲಾಗದು” ಎಂದರು.

“ಕೆಲವು ಸಂದರ್ಭದಲ್ಲಿ ಸಣ್ಣಪುಟ್ಟ ಪ್ರಕರಣಗಳಲ್ಲಿಯೂ ಸರ್ಕಾರಕ್ಕೆ ಮುಜುಗುರವಾಗುವಂತಹ ಬೆಳವಣಿಗೆಗಳು ನಡೆದಿವೆ. ಎಎಜಿಗಳ ತಪ್ಪುಗಳಿಂದ ಸರ್ಕಾರಕ್ಕೆ ಮುಜುಗುರವುಂಟಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ತಪ್ಪಿದಲ್ಲಿ ಬದಲಾವಣೆ ಅನಿವಾರ್ಯವಾಗಲಿದೆ. ಅಗತ್ಯ ಸಿದ್ಧತೆಯೊಂದಿಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬೇಕು. ಮೆರಿಟ್‌ ಇರುವ ಪ್ರಕರಣಗಳಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಲು ಅವಕಾಶ ನೀಡಬಾರದು” ಎಂದರು.

“ಪ್ರತಿಯೊಂದು ಪ್ರಕರಣವನ್ನೂ ಸವಾಲಿನಿಂದ ಸ್ವೀಕರಿಸಿ, ಕಾರ್ಯ ನಿರ್ವಹಿಸಿದರೆ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯ. ಎಎಜಿಗಳಿಂದ ಹೆಚ್ಚಿನ ಕ್ರಿಯಾಶೀಲ ಕಾರ್ಯನಿರ್ವಹಣೆಯನ್ನು ಸರ್ಕಾರ ಅಪೇಕ್ಷಿಸುತ್ತದೆ. ಇಲಾಖೆಗಳಿಂದ ಅಥವಾ ಅಧಿಕಾರಿಗಳಿಂದ ಸರಿಯಾಗಿ ಸ್ಪಂದನೆ ದೊರೆಯದಿದ್ದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು” ಎಂದರು.

“ಮುಖ್ಯ ಕಾರ್ಯದರ್ಶಿಯು ಎಲ್ಲಾ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಸಭೆ ಕರೆದು ಸಮನ್ವಯತೆಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಎಲ್ಲಾ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಇಲಾಖಾವಾರು ಕಾರ್ಯಕ್ಷೇತ್ರ ನಿಗದಿಪಡಿಸಬೇಕು. ನ್ಯಾಯಾಂಗದಲ್ಲಿನ ಎಲ್ಲಾ ಅಡ್ಡಿ ನಿವಾರಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರದ ಪರವಾದ ನ್ಯಾಯಾಂಗ ಹೋರಾಟವನ್ನು ಇನ್ನಷ್ಟು ವೃತ್ತಿಪರಗೊಳಿಸುವ ಅಗತ್ಯವಿದೆ” ಎಂದರು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಾದ ಎಸ್‌ ಎ ಅಹ್ಮದ್‌, ಕಿರಣ್‌ ಎಂ. ರೋಣ್‌, ಪ್ರತಿಮಾ ಹೊನ್ನಾಪುರ, ದೇವದಾಸ್‌, ವಿ ಜಿ ಭಾನು ಪ್ರಕಾಶ್‌, ಸಿ ಎಸ್‌ ಪ್ರದೀಪ್‌, ರೊಬೆನ್‌ ಜಾಕಬ್‌, ಕೆಂಪಣ್ಣ, ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎ ಬೆಳ್ಳಿಯಪ್ಪ, ವಿಜಯಕುಮಾರ್‌ ಮಜಗೆ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.