CM Siddaramaiah 
ಸುದ್ದಿಗಳು

ಸಿಎಂ ಪತ್ನಿ ₹56 ಕೋಟಿ ಫಲಾನುಭವಿ; ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರಿಂದ ಅಧಿಕಾರದ ದುರ್ಬಳಕೆ: ಹೈಕೋರ್ಟ್‌ ಆದೇಶದ ಸಾರ

ಮುಡಾ ಕುರಿತಾದ ಪ್ರಕರಣದ ಆದೇಶದಲ್ಲಿ ನ್ಯಾಯಾಲಯವು 8 ಪ್ರಶ್ನೆಗಳನ್ನು ರೂಪಿಸಿದ್ದು, ಅವುಗಳಿಗೆ ದಾಖಲೆಗಳನ್ನು ಉಲ್ಲೇಖಿಸಿ ಉತ್ತರಿಸುವ ಮೂಲಕ ತನಿಖೆಯ ಅಗತ್ಯತೆಯನ್ನು ಪ್ರತಿಪಾದಿಸಿದೆ.

Siddesh M S

ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದ ಬೆನ್ನಿಗೇ ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ನೀಡಿದೆ.

ಹೈಕೋರ್ಟ್‌ ತೀರ್ಪಿನ ಪ್ರಮುಖ ಅಂಶಗಳು ಇದಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೈಕೋರ್ಟ್‌ ಸಿದ್ದರಾಮಯ್ಯನವರ ವಿರುದ್ಧದ ತನಿಖೆಯು ಅಗತ್ಯವಿದೆ ಎನ್ನುವುದನ್ನು ಮನಗಾಣಲು ಹಾಗೂ ತನಿಖೆಗೆ ಅನುಮತಿಸಿರುವ ರಾಜ್ಯಪಾಲರ ಅದೇಶವನ್ನು ಎತ್ತಿ ಹಿಡಿಯಲು ತಾನು ಕಂಡುಕೊಂಡಿರುವ ಕಾರಣಗಳನ್ನು ತನ್ನ ಆದೇಶದಲ್ಲಿ ಸವಿವರವಾಗಿ ದಾಖಲಿಸಿದೆ. ಸುದೀರ್ಘ ವಾದ, ಪ್ರತಿವಾದಗಳನ್ನು ಆಲಿಸಿದ ಪೀಠವು ಒಟ್ಟು 8 ಪ್ರಶ್ನೆಗಳನ್ನು ರೂಪಿಸಿದ್ದು, ಅವುಗಳಿಗೆ ಉತ್ತರಿಸುವ ಮೂಲಕ ತನಿಖೆಯ ಅಗತ್ಯತೆಯನ್ನು ಒತ್ತಿ ಹೇಳಿದೆ. ಹಾಗಾದರೆ, ಪ್ರಕರಣದ ಸಂಬಂಧ ಹೈಕೋರ್ಟ್‌ ರೂಪಿಸಿಕೊಂಡ ಪ್ರಶ್ನೆಗಳು ಹಾಗೂ ಕಂಡುಕೊಂಡ ಉತ್ತರಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ:

ಮೊದಲಿಗೆ ಹೈಕೋರ್ಟ್‌ ತನ್ನ ಆದೇಶದಲ್ಲಿ ಮಾಡಿರುವ ಎರಡು ಪ್ರಮುಖ ಅವಲೋಕನಗಳನ್ನು ನೋಡಬಹುದು:

“ಇದೊಂದು ಸಾಮಾನ್ಯ ವ್ಯಕ್ತಿಯ ಪ್ರಕರಣವಾಗಿದ್ದರೆ ತನಿಖೆ ಎದುರಿಸಲು ಆತ (ಸಾಮಾನ್ಯ ವ್ಯಕ್ತಿ) ಹಿಂಜರಿಯುತ್ತಿರಲಿಲ್ಲ. ಹಾಗಾಗಿ, ಈ ನ್ಯಾಯಾಲಯದ ಅಭಿಪ್ರಾಯದಲ್ಲಿ, ಬಡ, ಮಧ್ಯಮ ವರ್ಗ ಹಾಗೂ ಪ್ರತಿಯೊಬ್ಬ ನಾಗರಿಕನ ನಾಯಕರಾಗಿರುವ ಸಿದ್ದರಾಮಯ್ಯ ಅವರು ಯಾವುದೇ ತನಿಖೆ ಎದುರಿಸಲು ಹಿಂಜರಿಯಬಾರದು” ಎಂದು ಸ್ಪಷ್ಟವಾಗಿ ಹೇಳಿರುವ ಕರ್ನಾಟಕ ಹೈಕೋರ್ಟ್‌, “ಮುಖ್ಯಮಂತ್ರಿ ಪತ್ನಿ ₹56 ಕೋಟಿ ಫಲಾನುಭವಿಯಾಗಿದ್ದಾರೆ. ಸಂಶಯದ ಸುಳಿ ಮತ್ತು ಮತ್ತು ಗಂಭೀರ ಆರೋಪಗಳು ವ್ಯಕ್ತವಾಗಿರುವುದರಿಂದ ಪ್ರಕರಣದಲ್ಲಿ ತನಿಖೆ ಅಗತ್ಯವಾಗಿದೆ” ಎಂದು ಖಚಿತವಾಗಿ ನುಡಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 50:50 ಅನುಪಾತದಲ್ಲಿ 14 ನಿವೇಶನಗಳನ್ನು ಪರಿಹಾರದ ರೂಪದಲ್ಲಿ ಮಂಜೂರು ಮಾಡಲು ಕಾರಣವಾದ ಮುಡಾದ ನಿರ್ಣಯವನ್ನು ಕಾನೂನಿಗೆ ವಿರುದ್ಧವಾಗಿದೆ ಎಂದು ಹಿಂಪಡೆಯಲಾಗಿದೆ. ಹೀಗಾಗಿ, ಅಕ್ರಮವಾದ ಈ ನಿರ್ಣಯದ ಆಧಾರದಲ್ಲಿ ಮಂಜೂರು ಮಾಡಲಾಗಿರುವ 14 ನಿವೇಶನಗಳ ಗತಿ ಏನಾಗಲಿದೆ ಎಂಬುದನ್ನು ತಿಳಿಯಲು ಸಹ ತನಿಖೆ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಆದೇಶದಲ್ಲಿ ಹೇಳಿದ್ದಾರೆ.

Justice M Nagaprasanna

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ರೂಪಿಸಿಕೊಂಡ 8 ಪ್ರಶ್ನೆಗಳು ಹೀಗಿವೆ:

  1. ರಾಜ್ಯಪಾಲರು ಮುಂದಿರುವ ಅರ್ಜಿಗಳು ಮತ್ತು ಸಂಬಂಧಿತ ನ್ಯಾಯಾಲಯದ ಮುಂದೆ ಹೋಗಿರುವ ದೂರುಗಳು ವಾಸ್ತವಿಕ ಸಂದರ್ಭವನ್ನು ಸಮರ್ಥಿಸಿವೆಯೇ?

  2. ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17ಎ ಅಡಿ ಅನುಮತಿಯ ಕಡ್ಡಾಯವೇ? 

  3. ಪಿಸಿ ಕಾಯಿದೆ ಸೆಕ್ಷನ್‌ 17ಎ ಅಡಿ ಪೊಲೀಸ್‌ ಅಧಿಕಾರಿ ಮಾತ್ರವೇ ಸಕ್ಷಮ ಪ್ರಾಧಿಕಾರದ ಮುಂದೆ ಅನುಮತಿ ಕೋರಬೇಕೆ? 

  4. ರಾಜ್ಯಪಾಲರ ಆದೇಶದಲ್ಲಿ ವಿವೇಚನೆಯ ಕೊರತೆ ಕಾಣುತ್ತದೆಯೇ? 

  5. ಸಕ್ಷಮ ಪ್ರಾಧಿಕಾರವು ಕಡತದಲ್ಲಿ ಕಾರಣಗಳನ್ನು ಉಲ್ಲೇಖಿಸಿ, ಆಕ್ಷೇಪಿತ ಆದೇಶದಲ್ಲಿ ಅಗತ್ಯ ಭಾಗಗಳನ್ನು ಉಲ್ಲೇಖಿಸಿದರೆ ಸಾಕೇ? 

  6. ಮುಖ್ಯ ಕಾರ್ಯದರ್ಶಿ ವಿವರಣೆ ನೀಡಿದ ದಿನವೇ ಮುಖ್ಯಮಂತ್ರಿಗೆ ತರಾತುರಿಯಲ್ಲಿ ಶೋಕಾಸ್‌ ನೋಟಿಸ್‌ ನೀಡಿರುವ ರಾಜ್ಯಪಾಲರ ನಿಲುವು ಇಡೀ ನಿರ್ಧಾರವನ್ನು ದುರ್ಬಲಗೊಳಿಸಲಿದೆಯೇ? 

  7. ಆಕ್ಷೇಪಾರ್ಹವಾದ ಆದೇಶದಲ್ಲಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 218ರ ಅಡಿ ಉಲ್ಲೇಖ ಮಾಡಿರುವುದು ಇಡೀ ಆದೇಶವನ್ನು ದುರ್ಬಲಗೊಳಿಸಲಿದೆಯೇ? 

  8. ಪ್ರಕರಣದಲ್ಲಿ ಮೇಲ್ನೋಟಕ್ಕೆ ಅರ್ಜಿದಾರರ ಪಾತ್ರವಿದೆಯೇ?

ರಾಜ್ಯಪಾಲರು ಮುಂದಿರುವ ಅರ್ಜಿಗಳು ಮತ್ತು ಸಂಬಂಧಿತ ನ್ಯಾಯಾಲಯದ ಮುಂದೆ ಹೋಗಿರುವ ದೂರುಗಳು ವಾಸ್ತವಿಕ ಸಂದರ್ಭವನ್ನು ಸಮರ್ಥಿಸಿವೆಯೇ?

ಮೈಸೂರಿನ ತಾಲ್ಲೂಕಿನ ವ್ಯಾಪ್ತಿಯಲ್ಲಿ 90 ವರ್ಷಗಳ ಹಿಂದೆ ಕೆಸರೆ ಗ್ರಾಮವಿತ್ತು. ಆ ಗ್ರಾಮದಲ್ಲಿನ ಸರ್ವೆ ನಂಬರ್‌ 464ರಲ್ಲಿನ 3.16 ಎಕರೆ ಭೂಮಿಯನ್ನು ಪರಿಶಿಷ್ಟ ಜಾತಿಗೆ ಸೇರಿದ ನಿಂಗ ಎಂಬ ವ್ಯಕ್ತಿಗೆ ಕಡಿಮೆ ದರಕ್ಕೆ ಮಂಜೂರು ಮಾಡಲಾಗಿತ್ತು. ಇದೇ ಆಕ್ಷೇಪವಾರ್ಹ ಭೂಮಿಯಾಗಿದ್ದು, ಅದರ ಹಕ್ಕು ಹೊಂದಿದ್ದ ನಿಂಗನಿಗೆ ಮೂವರು ಮಕ್ಕಳಿದ್ದರು. 1992ರಲ್ಲಿ ಕರ್ನಾಟಕ ನಗರಾಭಿವೃದ್ಧಿ ಕಾಯಿದೆ ಸೆಕ್ಷನ್‌ 17(1)ರ ಅಡಿ ದೇವನೂರು ವಸತಿ ಬಡಾವಣೆ ರೂಪಿಸಲು ಮುಡಾ 1992ರ ಸೆಪ್ಟೆಂಬರ್‌ 18ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಈ ಸಂದರ್ಭಕ್ಕೆ ನಿಂಗ ಸಾವನ್ನಪ್ಪಿದ್ದರು. ಆಗ ನಿಂಗ ಅವರ ಮೂವರು ಮಕ್ಕಳ ಪೈಕಿ ಇಬ್ಬರು ಹಿರಿಯ ಪುತ್ರ ಮೈಲಾರಯ್ಯ ಎಂಬಾತನಿಗೆ ಹಕ್ಕು ಬದಲಾವಣೆ ಮಾಡಿಕೊಟ್ಟಿದ್ದರು. ಹೀಗಾಗಿ, ಆಕ್ಷೇಪಾರ್ಹದ ಭೂಮಿಯ ಒಡೆಯ ಮೈಲಾರಯ್ಯನಾಗಿದ್ದನು. ಪ್ರಾಥಮಿಕ ಅಧಿಸೂಚನೆಯಾದ ಐದು ವರ್ಷದ ಬಳಿಕ 1997ರ ಆಗಸ್ಟ್‌ 20ರಂದು ಮುಡಾ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಖಾತೆದಾರನಾದ ನಿಂಗ ಸಾವನ್ನಪ್ಪಿದ್ದರೂ ಆತನ ಹೆಸರಿನಲ್ಲಿ ₹3,24,700 ಪರಿಹಾರ ನಿರ್ಧರಿಸಲಾಗಿತ್ತು. ಈ ಪರಿಹಾರದ ಹಣ ಪಡೆಯಲು ಯಾರು ಮುಂದಾಗದಿದ್ದರಿಂದ ಮುಡಾವು ಪರಿಹಾರದ ಹಣವನ್ನು ವ್ಯಾಪ್ತಿ ಹೊಂದಿದ ಸಿವಿಲ್‌ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿತ್ತು.

ಆನಂತರ 1997ರ ಅಕ್ಟೋಬರ್‌ 31ರಂದು ಸಾಮಾನ್ಯ ಅವಾರ್ಡ್‌ (ಪರಿಹಾರ ಮೊತ್ತ) ಪಾಸು ಮಾಡಲಾಗಿದ್ದು, 1998ರ ಮಾರ್ಚ್‌ 12ರಂದು ಜಿಲ್ಲಾಧಿಕಾರಿಯು ಅದನ್ನು ಅನುಮೋದಿಸಿದ್ದರು. ಅವಾರ್ಡ್‌ ನೋಟಿಸ್‌ಅನ್ನು (ಪರಿಹಾರ ಮೊತ್ತದ ನೋಟಿಸ್‌) 1998ರ ಮಾರ್ಚ್‌ 30ರಂದು ಜಾರಿ ಮಾಡಲಾಗಿತ್ತು.

ಈ ನಡುವೆ, ಪ್ರಾಥಮಿಕ ಅಧಿಸೂಚನೆ ಮತ್ತು ಅಂತಿಮ ಅಧಿಸೂಚನೆಯ ನಡುವೆ ನಿಂಗ ಪುತ್ರ ಎಂದು ಕೊಂಡು ದೇವರಾಜು ಎಂಬಾತ ಆಕ್ಷೇಪಾರ್ಹವಾದ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಮುಡಾಗೆ 13-08-1996ರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುಡಾವು ಸ್ವಾಧೀನ ಪ್ರಕ್ರಿಯೆ ಮುಂದುವರಿಸಿತ್ತು. ಅಂತಿಮ ಅಧಿಸೂಚನೆಯಾದ ಬಳಿಕ 1997ರ ಆಗಸ್ಟ್‌ 30ರಂದು ಮುಡಾವು ಆಕ್ಷೇಪಾರ್ಹವಾದ ಭೂಮಿ ಕೈಬಿಡುವುದಕ್ಕೆ ಸಂಬಂಧಿಸಿದ ಕೆಲವು ಪ್ರಕ್ರಿಯೆ ನಡೆಸಿತ್ತು. ಈ ಪ್ರಕ್ರಿಯೆ ಆಧರಿಸಿ, ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರ ಠೇವಣಿ ಇಟ್ಟಿರುವ ವಿಚಾರವನ್ನು ಮರೆತು ಆಕ್ಷೇಪಾರ್ಹವಾದ ಭೂಮಿಯನ್ನು 1998ರ ಮೇ 18ರಂದು ಡಿನೋಟಿಫೈ ಮಾಡಲಾಗಿತ್ತು. ಇದು ರಾಜ್ಯ ಸರ್ಕಾರದ ಅಕ್ರಮ ನಡೆಯಾಗಿದೆ.

ಇಲ್ಲಿ ಕಂಡುಬರುವುದೇನೆಂದರೆ ಭೂಮಿಯನ್ನು ಮುಡಾ ಡಿನೋಟಿಫೈ ಮಾಡಿದ್ದರೆ ಡಿನೋಟಿಫಿಕೇಶನ್‌ ಬಳಿಕವೂ ಮುಡಾ ವ್ಯಕ್ತಿಗತ ಅವಾರ್ಡ್‌ ನಿರ್ಧರಿಸಿರುವುದೇಕೆ? ಇಲ್ಲಿಗೆ ನಿಲ್ಲದ ಮುಡಾ, ಬಡಾವಣೆ ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ನಿವೇಶನದ ಹಂಚಿದೆ. 1998 ರಿಂದ 31-12-2003ರವರೆಗೆ ಈ ಸರ್ವೆ ನಂಬರ್‌ 464ರಲ್ಲಿ ಮುಡಾ ಮಾಲೀಕತ್ವ ಹೊಂದಿದೆ. ಇಸಿಯಲ್ಲಿ ಮುಡಾ ಹೆಸರಿದೆ. ಭೂಸ್ವಾಧೀನದವರೆಗೆ ಮೈಲಾರಯ್ಯ ಹೆಸರಿತ್ತು. ಇಲ್ಲೆಲ್ಲಿಯೂ ದೇವರಾಜು ಹೆಸರಿರಲಿಲ್ಲ.

15-06-2004ರ ವೇಳೆಗೆ ಆಕ್ಷೇಪಾರ್ಹವಾದ ಭೂಮಿಯಲ್ಲಿ ನಿವೇಶನ, ಪಾರ್ಕ್‌, ವಿವಿಧ ಸೌಲಭ್ಯ ಕಲ್ಪಿಸಿ ಒಟ್ಟು 19 ನಿವೇಶನ ಹಂಚಿಕೆಯಾಗಿರುತ್ತದೆ. ಈ ಹಂತದಲ್ಲಿ ಮುಖ್ಯಮಂತ್ರಿ ಕುಟುಂಬ ಪ್ರವೇಶವಾಗುತ್ತದೆ. ನಿಂಗ ಪುತ್ರ ಎಂದುಕೊಂಡ ದೇವರಾಜು ಎಂಬಾತ ಸಿದ್ದರಾಮಯ್ಯ ಅವರ ಭಾವಮೈದುನ ಬಿ ಎನ್‌ ಮಲ್ಲಿಕಾರ್ಜುನಯ್ಯ ಅವರಿಗೆ 25-08-2004ರಂದು ಕ್ರಯ ಮಾಡಿಕೊಡುತ್ತಾರೆ. ಈ ಕ್ರಯಪತ್ರದಲ್ಲಿ 1992ರಿಂದ ಆಗಿರುವ ಯಾವುದೇ ಬೆಳವಣಿಗೆ ಉಲ್ಲೇಖಿಸಲಾಗಿಲ್ಲ. ಇದೆಲ್ಲಾ ವಿಚಾರಗಳೂ ದೇವರಾಜುವಿಗೆ ಗೊತ್ತಿರುತ್ತದೆ. ಅದಾಗ್ಯೂ, ಪೂರ್ವಾಪರ ಉಲ್ಲೇಖಿಸಿ ಕ್ರಯ ಪತ್ರದಲ್ಲಿ 3.16 ಎಕರೆ ಭೂಮಿಯನ್ನು ಕೃಷಿ ಭೂಮಿ ಎಂದು ಉಲ್ಲೇಖಿಸಲಾಗಿದೆ. ಆದರೆ, ಏಳು ವರ್ಷಗಳ ಹಿಂದೆಯೇ ಆ ಭೂಮಿಯಲ್ಲಿ ನಿವೇಶನ ರೂಪಿಸಿ ಹಂಚಿಕೆ ಮಾಡಲಾಗಿತ್ತು.

ಕ್ರಯ ಪತ್ರ ಮಾಡುವುದಕ್ಕೂ ಒಂದು ವರ್ಷ ಮುಂದೆ ಎಲ್ಲಾ ನಿವೇಶನಗಳನ್ನೂ ಹಂಚಿಕೆ ಮಾಡಲಾಗಿತ್ತು. ಇಷ್ಟೆಲ್ಲಾ ಆದರೂ ಆಕ್ಷೇಪಾರ್ಹವಾದ ಭೂಮಿಯು ಕೃಷಿ ಭೂಮಿ ಹೇಗಾಗುತ್ತದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇನ್ನು ಕ್ರಯಪತ್ರದಲ್ಲಿ ಜಿ ದೇವರಾಜು ಮಾರಾಟ ಮಾಡುವವರೆಗೂ ಕಂದಾಯ ಪಾವತಿಸಿರುವುದಾಗಿ ಹೇಳಿದ್ದಾರೆ. ಇದು ಇನ್ನೊಂದು ಅಕ್ರಮವಾಗಿದೆ. ಕ್ರಯ ಮಾಡಿಸಿಕೊಂಡ ಮಲ್ಲಿಕಾರ್ಜುನಯ್ಯ ಅವರು ಅದೇ ಭೂಮಿಯ ಪರಿವರ್ತನೆಗೆ ಕೋರಿದ್ದರು. 05-03-2005ರ ತಹಶೀಲ್ದಾರ್‌ ಮತ್ತು 17-06-2005ರ ಜಿಲ್ಲಾಧಿಕಾರಿ ಪರಿಶೀಲನಾ ವರದಿ ಆಧರಿಸಿ ಭೂಪರಿವರ್ತನೆ ಮಾಡಲಾಗಿದೆ.

ಆಕ್ಷೇಪಾರ್ಹವಾದ ಭೂಮಿಯಲ್ಲಿ ವಿದ್ಯುತ್‌ ಕಂಬಗಳಿಲ್ಲ. ಮರ ಬೆಳೆದಿಲ್ಲ. ಯಾವುದೇ ಕಟ್ಟಡವಿಲ್ಲ ಮತ್ತು ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಪರಿಶೀಲನಾ ವರದಿಯಲ್ಲಿ ಹೇಳಲಾಗಿದೆ. ಈ ವೇಳೆಗಾಗಲೇ ಕೃಷಿ ಭೂಮಿ ಅಸ್ತಿತ್ವ ಇಲ್ಲದಿರುವುದೇ ಅನುಮಾನಸ್ಪದವಾಗಿರುವಾಗ, ಮುಡಾ ಅದಾಗಲೇ ಬಡಾವಣೆ ರೂಪಿಸಿ ನಿವೇಶನ ಹಂಚಿರುವಾಗ ಅಧಿಕಾರಿಗಳು ಏನನ್ನು ಪರಿಶೀಲಿಸಿದರು ಎಂಬುದೇ ಅರ್ಥವಾಗದ ವಿಚಾರವಾಗಿದೆ. ಕೃಷಿಯಿಂದ ವಸತಿಯವರೆಗೆ ಏನು ಪರಿವರ್ತನೆಯಾಗಿದೆ ಎಂದು ಪರಿಶೀಲಿಸಿರುವುದೇ ರಹಸ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ವಾಸ್ತವದಲ್ಲಿ ಸ್ಥಳ ಪರಿಶೀಲನೆ ಆಗಿದೆಯೋ ಅಥವಾ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ವರದಿ ರೂಪಿಸಲಾಗಿದೆಯೇ ಎಂಬುದರ ತನಿಖೆಯಾಗಬೇಕಿದೆ. ಇದೆಲ್ಲದರ ನಡುವೆ 15-07-2005ರಂದು ಅಧಿಕೃತ ಭೂಪರಿವರ್ತನಾ ಅಧಿಕೃತ ಒಪ್ಪಿಗೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.

ಇದಾದ ಬಳಿಕ 06-10-2010ರಂದು ಮಲ್ಲಿಕಾರ್ಜುನಯ್ಯ ಅವರು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಆಕ್ಷೇಪಾರ್ಹವಾದ ಭೂಮಿಯನ್ನು ದಾನ ಮಾಡಿದ್ದಾರೆ. ಇದಾದ ಬಳಿಕ ಪಾರ್ವತಿ ಅವರು 23-06-2014ರಂದು ಪರಿಹಾರ ಕೋರಿ ಮುಡಾಗೆ ಮನವಿ ಸಲ್ಲಿಸುತ್ತಾರೆ.

ಈ ಮನವಿಯಲ್ಲಿ 2001ರಲ್ಲಿ ಮುಡಾ ಬಡಾವಣೆ ರೂಪಿಸಿ, ನಿವೇಶನ ಹಂಚಿದೆ ಎಂದು ಹೇಳಲಾಗಿದೆ. ಪಾರ್ವತಿ ಅವರಿಗೆ 2001ರಲ್ಲಿ ಮುಡಾ ನಿವೇಶನ ಹಂಚಿರುವ ವಿಚಾರ ಗೊತ್ತಿದ್ದರೆ ಮಲ್ಲಿಕಾರ್ಜುನಯ್ಯ ಅವರು ಮುಡಾದ ವಶದಲ್ಲಿರುವ ಭೂಮಿಯನ್ನು ಹೇಗೆ ಖರೀದಿಸಿದ್ದರು? ಮತ್ತು ಅದನ್ನು ದಾನವಾಗಿ ಹೇಗೆ ಸ್ವೀಕರಿಸಲಾಯಿತು ಎನ್ನುವ ಪ್ರಶ್ನೆ ಏಳುತ್ತದೆ. ಇಲ್ಲಿ ಅನುಮಾನದ ಮೂಡುತ್ತದೆ. ಪರಿಹಾರಕ್ಕೆ ಕೋರಿದ್ದ ಮನವಿಯನ್ನು ಮುಡಾದ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ರವಾನಿಸಿದ್ದರು. ಆನಂತರ 18-08-2004ರಂದು ಮುಡಾ ಆಯುಕ್ತರು ಪಾರ್ವತಿ ಅವರಿಗೆ ಪತ್ರ ಬರೆದಿದ್ದರು. ಈ ಮನವಿ ಬಾಕಿ ಇರುವಾಗಲೇ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು (ಭೂಮಿ ವಶಪಡಿಸಿಕೊಂಡಿರುವುದಕ್ಕೆ ನಿವೇಶನಗಳ ಮೂಲಕ ಪರಿಹಾರ) (ತಿದ್ದುಪಡಿ) ನಿಯಮಗಳು 2014ಕ್ಕೆ ತಿದ್ದುಪಡಿ ಮಾಡಲಾಗಿತ್ತು. ಈ ಹಿಂದೆ ಪರಿಹಾರವು 60:40 ಇತ್ತು. ಅಂದರೆ ಶೇ. 60ರಷ್ಟು ಸ್ವಾಧೀನ ಮಾಡಿದ ಪ್ರಾಧಿಕಾರಕ್ಕೆ ಶೇ. 40 ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಾಗುತ್ತಿತ್ತು. ನಿಯಮಕ್ಕೆ ತಿದ್ದುಪಡಿ ಅದನ್ನು 60:40 ರಿಂದ 50:50ಕ್ಕೆ ಇಳಿಸಲಾಗಿತ್ತು.

ಈ ಎಲ್ಲಾ ಪ್ರಕ್ರಿಯೆ ಬಳಿಕ ಮುಡಾವು ಪಾರ್ವತಿ ಅವರಿಗೆ 50:50 ಅನುಪಾತದಲ್ಲಿ ನಿವೇಶನ ನೀಡುವ ನಿರ್ಣಯ ಜಾರಿಗೊಳಿಸಿತ್ತು. 2017ರ ನಂತರ ಕೆಲಕಾಲ ಶೈತ್ಯಾಗಾರದಲ್ಲಿದ್ದ ವಿಚಾರವು 20-03-2021ರಲ್ಲಿ ಮುನ್ನೆಲೆಗೆ ಬಂದು ಪಾರ್ವತಿ ಅವರಿಗೆ ಪರಿಹಾರದ ನಿವೇಶನ ನಿರ್ಧಾರವಾಗುತ್ತದೆ. ಈ ನಿರ್ಧಾರ ಕೈಗೊಂಡ ಸಭೆಯಲ್ಲಿ ವರುಣಾ ಶಾಸಕರಾಗಿದ್ದ ಡಾ. ಎಸ್‌ ಯತೀಂದ್ರ ಅವರು ಭಾಗವಹಿಸಿರುತ್ತಾರೆ. ಇದಾದ ಬಳಿಕ 25-10-2021ರಂದು ಪಾರ್ವತಿ ಅವರು ಪರಿಹಾರ ನಿವೇಶನ ಕೋರಿ ಮುಡಾಗೆ ಮನವಿ ಸಲ್ಲಿಸುತ್ತಾರೆ. 23-11-2021ರಲ್ಲಿ ಪರಿಹಾರ ನಿವೇಶನಗಳ ಹಕ್ಕು ಪಡೆಯಲು ಸಂಬಂಧಿತ ದಾಖಲೆ ಸಲ್ಲಿಸುವಂತೆ ಮುಡಾ ಪಾರ್ವತಿ ಅವರಿಗೆ ಸೂಚಿಸುತ್ತದೆ. 25-11-2021ರಂದು ನಿವೇಶನಗಳ ಹಂಚಿಕೆ ಪತ್ರ ವರ್ಗಾವಣೆಯಾಗುತ್ತದೆ. ಬಳಿಕ 05-01-2022ರಂದು ನಿರ್ಧರಿಸಲ್ಪಟ್ಟಂತೆ ಒಟ್ಟು 38,284 ಚದರ ಅಡಿಯ 14 ನಿವೇಶನಗಳ ಹಂಚಿಕೆ ಮಾಡಲಾಗಿದೆ. 12-01-2022ರಂದು ನಿವೇಶನಗಳ ಕ್ರಯಪತ್ರವನ್ನು ಪಾರ್ವತಿಗೆ ಮಾಡಿಕೊಡಲಾಗಿದೆ ಎಂದು ಮುಡಾ ತಿಳಿಸಿದೆ.

ಮುಡಾದ ಹಕ್ಕು ಬದಲಾವಣೆ ಪತ್ರದಲ್ಲಿ ಪಾರ್ವತಿ ಅವರು ಹೇಗೆ ಭೂಮಿಯ ಮಾಲೀಕತ್ವ ಪಡೆದಿದ್ದರು ಎಂದು ಹೇಳಲಾಗಿದೆ. ಪಾರ್ವತಿ ಅವರಿಗೆ ಹಂಚಿಕೆಯಾದ 14 ನಿವೇಶನಗಳ ಮಾರ್ಗಸೂಚಿ ದರವು ₹8,24,000 ಆಗಿದ್ದು, ಮಾರುಕಟ್ಟೆ ಮೌಲ್ಯವು ₹55,80,00,000 ಆಗಿದೆ. ಅಂದರೆ 56 ಕೋಟಿ ರೂಪಾಯಿ ಆಗಿದೆ. ನಿಂಗ 1935ರಲ್ಲಿ ಭೂಮಿ ಖರೀದಿ ಮಾಡಿದ್ದಾಗ ಆಕ್ಷೇಪಾರ್ಹವಾದ ಭೂಮಿಯ ಮೇಲೆ ₹300. ಮುಡಾ 1997ರಲ್ಲಿ ಅದನ್ನು ವಶಕ್ಕೆ ಪಡೆದಾಗ ಪರಿಹಾರ ₹3,56,000. 2021ರಲ್ಲಿ ಅದರ ಬೆಲೆ ₹56 ಕೋಟಿ. ಈ ಎಲ್ಲಾ ಬೆಳವಣಿಗೆಗಳು 1996 ರಿಂದ 2022ರವರೆಗೆ ನಡೆದಿದೆ. ಈ ವೇಳೆ ಸಿದ್ದರಾಮಯ್ಯ ಅವರು ಒಮ್ಮೆ ಮುಖ್ಯಮಂತ್ರಿ, ಎರಡು ಬಾರಿ ಉಪಮುಖ್ಯಮಂತ್ರಿ ಮತ್ತು ಎರಡು ಶಾಸಕರಾಗಿದ್ದರು. ಇಡೀ ಪ್ರಕ್ರಿಯೆಯಲ್ಲಿ ಆಕ್ಷೇಪಾರ್ಹವಾದ ಭೂಮಿಯ ವರ್ಗಾವಣೆಯಿಂದಾಗಿ ₹3.56 ಲಕ್ಷದಿಂದ 56 ಕೋಟಿ ಆಗುವವರೆಗಿನ ಪರಿಹಾರದ ಮೊತ್ತದ ಫಲಾನುಭವಿಯು ಸಿದ್ದರಾಮಯ್ಯ ಅವರ ಕುಟುಂಬವಲ್ಲ ಎಂಬುದನ್ನು ಒಪ್ಪಲು ಕಷ್ಟವಾಗುತ್ತದೆ. ಇದೆಲ್ಲರ ಹಿಂದೆ ಸಿದ್ದರಾಮಯ್ಯ ಇಲ್ಲ, ಆದರೆ ಅವರು ಕೇವಲ ತೆರೆಯ ಹಿಂದೆ ಇದ್ದರು ಎನ್ನುವ ವಾದವನ್ನು ಮೇಲ್ನೋಟಕ್ಕೆ ಒಪ್ಪುವುದು ಕಷ್ಟವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪಾರ್ವತಿ ಅವರಿಗೆ ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಿದ ಬಳಿಕ ನಗರಾಭಿವೃದ್ಧಿ ಇಲಾಖೆಯು ಮಾರ್ಗಸೂಚಿ ರೂಪಿಸುವವರೆಗೆ ಪರಿಹಾರ ನಿವೇಶನ ಹಂಚಿಕೆ ನಿಲ್ಲಿಸುವಂತೆ ಮುಡಾ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಈ ಕಾನೂನನ್ನು ಪಾರ್ವತಿ ಅವರಿಗೆ ಅನುಕೂಲ ಮಾಡಿಕೊಡಲು ರೂಪಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಲಿದ್ದು, ಇದು ಭೂಸ್ವಾಧೀನ ನಿಯಮಗಳು 2009 ಮತ್ತು ಇನ್‌ಸೆಂಟೀವ್‌ ಸ್ಕೀಮ್‌ ಆಫ್‌ ವಾಲಂಟರಿ ಸರಂಡರ್‌ ಆಫ್‌ ಲ್ಯಾಂಡ್‌ ನಿಯಮಗಳು 1991ಕ್ಕೆ ವಿರುದ್ಧವಾಗಿವೆ. 2023ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮರಳಿದ್ದು, 14.09.2020ರಂದು ಮುಡಾ ನಿರ್ಣಯ ರದ್ದು ಮಾಡಿ 27.10.2023ರಂದು ಆದೇಶ ಮಾಡಲಾಗಿದೆ. 14.09.2020ರ ನಿರ್ಣಯ ರದ್ದುಪಡಿಸಿದ ಬಳಿಕ ಸರ್ಕಾರ ರಚಿಸಿರುವ ತಾಂತ್ರಿಕ ಸಮಿತಿಯು ಮುಡಾ ಅಕ್ರಮ ತನಿಖೆಗೆ ಕೈಹಾಕಿದೆ. ತಾಂತ್ರಿಕ ಸಮಿತಿಯು ಮುಡಾದಲ್ಲಿ ಅಧಿಕಾರಿಗಳು ಭಾರಿ ಭ್ರಷ್ಟಾಚಾರ ಮತ್ತು ವಂಚನೆ ನಡೆಸಿದ್ದಾರೆ ಎಂದು ವರದಿ ನೀಡಿತ್ತು. ಈ ತನಿಖೆ ನಡೆಯುತ್ತಿರುವಾಗಲೇ ಸಾಮಾಜಿಕ ಕಾರ್ಯಕರ್ತರಾದ ಟಿ ಜೆ ಅಬ್ರಹಾಂ ಮತ್ತು ಮೈಸೂರಿನ ಸ್ನೇಹಮಯಿ ಕೃಷ್ಣ ದೂರು ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಅಂತಿಮವಾಗಿ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಅಡಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿಸುವಂತೆ ರಾಜ್ಯಪಾಲರನ್ನು ಕೋರಿರುವುದು ಸಮಂಜಸವಾಗಿದೆ ಎಂದು ನ್ಯಾಯಾಲಯ ಹೇಳಿದೆ .

ವಾಸ್ತವಿಕ ಅಂಶಗಳನ್ನು ನೋಡಿದರೆ ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್‌ 17ಎ ಅಡಿ ಅನುಮತಿಯ ಕಡ್ಡಾಯವೇ? ಮತ್ತು ಪಿಸಿ ಕಾಯಿದೆ ಸೆಕ್ಷನ್‌ 17ಎ ಅಡಿ ಪೊಲೀಸ್‌ ಅಧಿಕಾರಿ ಮಾತ್ರವೇ ಸಕ್ಷಮ ಪ್ರಾಧಿಕಾರದ ಮುಂದೆ ಅನುಮತಿ ಕೋರಬೇಕೆ?

ಸಿಆರ್‌ಪಿಸಿ ಸೆಕ್ಷನ್‌ 156(3) ಅಥವಾ ಬಿಎನ್‌ಎಸ್‌ಎಸ್‌ ಸೆಕ್ಷನ್‌ 175 ಅಡಿ ನ್ಯಾಯಾಲಯವು ತನಿಖೆಗೆ  ಆದೇಶಿಸುವುದಕ್ಕೂ ಮುನ್ನ ಸರ್ಕಾರಿ ಅಧಿಕಾರಿ ವಿರುದ್ಧ ಖಾಸಗಿ ದೂರು ದಾಖಲಿಸಿದರೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕೋರುವ ಹೊಣೆಯು ದೂರುದಾರರ ಮೇಲಿರುತ್ತದೆ. ಇಲ್ಲವಾದಲ್ಲಿ ಸರ್ಕಾರಿ ಅಧಿಕಾರಿಗೆ ರಕ್ಷಣಾ ಹೊದಿಕೆ ನೀಡಿರುವುದಕ್ಕೆ ಅರ್ಥವಿಲ್ಲವಾಗುತ್ತದೆ. ಈ ನೆಲೆಯಲ್ಲಿ ಡಾ. ಅಶೋಕ್‌ ವಿ ವರ್ಸಸ್‌ ರಾಜ್ಯ ಸರ್ಕಾರ ಪ್ರಕರಣದಲ್ಲಿ ಈ ನ್ಯಾಯಾಲಯ ಪೂರ್ವಾನುಮತಿ ಕುರಿತು ಆದೇಶ ಮಾಡಿದೆ. ಹೀಗಾಗಿ, ವಿಶೇಷ ನ್ಯಾಯಾಲಯವು ತನಿಖೆಗೆ ಆದೇಶಿಸುವುದಕ್ಕೂ ಮುನ್ನ ಸೆಕ್ಷನ್‌ 17ಎ ಅಡಿ ತನಿಖೆಗೆ ಅನುಮತಿ ಕೋರಿ ದೂರುದಾರರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

ಸೆಕ್ಷನ್‌ 17ಎ ಅಡಿ ತನಿಖೆಗೆ ಅನುಮತಿ ಕಡ್ಡಾಯವಾಗಿರುವುದರಿಂದ ಸಕ್ಷಮ ಪ್ರಾಧಿಕಾರದಿಂದ ಪೊಲೀಸ್‌ ಅಧಿಕಾರಿಯೇ ಅನುಮತಿ ಕೋರುವ ಅಗತ್ಯವಿಲ್ಲ. ಖಾಸಗಿ ದೂರಿನಲ್ಲಿ ದೂರುದಾರರು ಯಾರೇ ಆಗಿದ್ದರೂ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕೋರುವ ಕರ್ತವ್ಯ ನಿಭಾಯಿಸಬೇಕು. ಸಿಆರ್‌ಪಿಸಿ ಸೆಕ್ಷನ್‌ 200 ಅಥವಾ ಬಿಎನ್‌ಎಸ್‌ಎಸ್‌ ಸೆಕ್ಷನ್‌ 223ರ ಅಡಿ ಸಲ್ಲಿಕೆಯಾಗುವ ಖಾಸಗಿ ದೂರುಗಳು ಇದಕ್ಕೆ ಅಪವಾದ.

ರಾಜ್ಯಪಾಲರ ಆದೇಶದಲ್ಲಿ ವಿವೇಚನೆ ಬಳಸಿಲ್ಲ ಎಂಬುದು ಕಾಣುತ್ತದೆಯೇ? ಮತ್ತು ಸಕ್ಷಮ ಪ್ರಾಧಿಕಾರವು ಕಡತದಲ್ಲಿ ಕಾರಣಗಳನ್ನು ಉಲ್ಲೇಖಿಸಿ, ಆಕ್ಷೇಪಿತ ಆದೇಶದಲ್ಲಿ ಒಂದು ಭಾಗವನ್ನು ಉಲ್ಲೇಖಿಸುವುದು ಸಾಕೇ?

ಪೊಲೀಸರು, ಆಯುಕ್ತರನ್ನು ಅಬ್ರಹಾಂ ದೂರಿಗೆ ಸ್ಪಂದಿಸದಿದ್ದಾಗ ಆನಂತರ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಮಧ್ಯೆ, ವಿಶೇಷ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 200ರ ಅಡಿ ಖಾಸಗಿ ದೂರು ದಾಖಲಿಸಿದ್ದಾರೆ. 26-07- 2024ರಂದು ತನಿಖೆಗೆ ಅನುಮತಿ ಕೋರಿ ಅಬ್ರಹಾಂ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್‌ ನೋಟಿಸ್‌ ನೀಡಿದ್ದರು. ಇದಕ್ಕೆ ಸಿದ್ದರಾಮಯ್ಯ ಸೂಚನೆಯಂತೆ, ಉಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ನೇತೃತ್ವದ ರಾಜ್ಯ ಸಚಿವ ಸಂಪುಟವು ಮುಖ್ಯ ಕಾರ್ಯದರ್ಶಿ ಮೂಲಕ 1-08-2024ರಂದು ಸುದೀರ್ಘವಾಗಿ ಉತ್ತರಿಸಿದ್ದು, ಶೋಕಾಸ್‌ ನೋಟಿಸ್‌ ಹಿಂಪಡೆಯಲು ಸಲಹೆ ನೀಡಿದೆ. 3-08-2024ರಂದು ರಾಜ್ಯಪಾಲರಿಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಸಲ್ಲಿಸಿದ್ದರು. ಸಂಪುಟದ ನಿರ್ಧಾರ ಮತ್ತು ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಯನ್ನು ರಾಜ್ಯಪಾಲರ ಮುಂದೆ 6-08-2024ರಂದು ಇಡಲಾಗಿತ್ತು. ಇವುಗಳನ್ನು ಪರಿಶೀಲಿಸಿದ್ದ ರಾಜ್ಯಪಾಲರು ಮುಖ್ಯಮಂತ್ರಿ ಆಕ್ಷೇಪ ಮತ್ತು ಸಂಪುಟದ ನಿರ್ಧಾರದ ತುಲನಾತ್ಮಕ ಹೇಳಿಕೆಗಳನ್ನು ಮುಂದಿಡಲು ಆದೇಶಿಸಿದ್ದರು. 14-08-2024ರಂದು ಇದನ್ನು ರಾಜ್ಯಪಾಲರ ಮುಂದಿಡಲಾಗಿತ್ತು. 16-08-2024ರಂದು ಇಡೀ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದ ರಾಜ್ಯಪಾಲರು ಆಕ್ಷೇಪಾರ್ಹವಾದ ಆದೇಶ ಮಾಡಿದ್ದರು. 17-08-2024ರಂದು ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿರುವ ಆದೇಶವನ್ನು ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದರು.

1,200 ಪುಟಗಳ ರಾಜ್ಯಪಾಲರ ಕಡತದಲ್ಲಿರುವ ದಾಖಲೆಯನ್ನು ಪರಿಶೀಲಿಸಿದ್ದು, ದೂರಿನ ತುಲನಾತ್ಮಕ ಚಾರ್ಟ್‌, ಪ್ರತಿಕ್ರಿಯೆ ಮತ್ತು ವಿಸ್ತೃತ ವಿಶ್ಲೇಷಣೆಯನ್ನು ಪರಿಶೀಲಿಸ್ದದೇನೆ. ರಾಜ್ಯಪಾಲರ ಆದೇಶದಲ್ಲಿ ವಿವೇಚನೆ ಬಳಸಿಲ್ಲ ಎಂದು ಹೇಳಲಾಗದು. ರಾಜ್ಯಪಾಲರ ಆದೇಶದಲ್ಲಿ ಸುದೀರ್ಘ ಕಾರಣಗಳಿದ್ದು, ರಾಜ್ಯಪಾಲರು ಸಲ್ಲಿಸಿರುವ ಕಡತದಲ್ಲಿ ವಿಸ್ತೃತವಾದ ಕಾರಣಗಳನ್ನು ನೀಡಲಾಗಿದೆ. ರಾಜ್ಯಪಾಲರ ಆಕ್ಷೇಪಾರ್ಹವಾದ ಆದೇಶ ಮತ್ತು ಕಡತದಲ್ಲಿ ಹೇರಳವಾದ ಕಾರಣಗಳನ್ನು ಉಲ್ಲೇಖಿಸಲಾಗಿದ್ದು, ವಿವೇಚನೆ ಬಳಸಲಾಗಿದೆ ಎಂದು ಹೇಳಲು ನ್ಯಾಯಾಲಯಕ್ಕೆ ಯಾವುದೇ ಅಳುಕಿಲ್ಲ.

ಮುಖ್ಯ ಕಾರ್ಯದರ್ಶಿ ವಿವರಣೆ ನೀಡಿದ ದಿನವೇ ಮುಖ್ಯಮಂತ್ರಿಗೆ ತರಾತುರಿಯಲ್ಲಿ ಶೋಕಾಸ್‌ ನೋಟಿಸ್‌ ನೀಡಿರುವ ರಾಜ್ಯಪಾಲರ ನಿಲುವು ಇಡೀ ನಿರ್ಧಾರವನ್ನು ದುರ್ಬಲಗೊಳಿಸಲಿದೆಯೇ?

ಅಬ್ರಹಾಂ ಅವರು 26-06-2024ರಂದು ರಾಜ್ಯಪಾಲರಿಗೆ ದೂರು ನೀಡಿದ್ದು, ಅಂದೇ ಮುಖ್ಯಮಂತ್ರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಈ ಮೂಲಕ ತರಾತುರಿಯ ನಿರ್ಧಾರ ಮಾಡಿರುವುದರಿಂದ ಇದು ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎನ್ನಲಾಗಿದೆ. ವಿವೇಚನೆ ಬಳಸಿಲ್ಲ ಎಂದಾದರೆ ತರಾತುರಿಯಲ್ಲಿ ಕೈಗೊಂಡಿರುವ ನಿರ್ಧಾರ ದುರ್ಬಲವಾಗುತ್ತದೆ. ದೂರುದಾರ ಅಬ್ರಹಾಂ ಅವರನ್ನು ಆಲಿಸಲಾಗಿದೆ. ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಆನಂತರ ಮುಖ್ಯಮಂತ್ರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಕಾನೂನಿನ ಅಡಿ ಇನ್ನೇನು ಅಗತ್ಯ ಎಂಬುದೇ ಅರ್ಥವಾಗುತ್ತಿಲ್ಲ. ದೂರಿನಲ್ಲಿ ಆರೋಪವು ಗಂಭೀರವಾಗಿರುವುದರಿಂದ ರಾಜ್ಯಪಾಲರು ಶೋಕಾಸ್‌ ನೋಟಿಸ್‌ ನೀಡುವ ಮೂಲಕ ರಾಜ್ಯಪಾಲರು ತಕ್ಷಣಕ್ಕೆ ಕ್ರಮಕೈಗೊಂಡಿದ್ದಾರೆ. ಇದು ಇಡೀ ಆದೇಶವನ್ನು ದುರ್ಬಲ ಗೊಳಿಸುತ್ತದೆ ಎಂದು ಕಲ್ಪಿಸಿಕೊಳ್ಳಲಾಗದು.

ಆಕ್ಷೇಪಾರ್ಹವಾದ ಆದೇಶದಲ್ಲಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 218ರ ಅಡಿ ಉಲ್ಲೇಖ ಮಾಡಿರುವುದು ಇಡೀ ಆದೇಶವನ್ನು ದುರ್ಬಲಗೊಳಿಸಲಿದೆಯೇ?

ಪ್ರಕರಣದಲ್ಲಿ ತನಿಖೆಯೇ ಇನ್ನೂ ಆರಂಭವಾಗಿಲ್ಲವಾದ್ದರಿಂದ ಬಿಎನ್‌ಎಸ್‌ಎಸ್‌ ಸೆಕ್ಷನ್‌ 218ರ ಅಡಿ ಅಭಿಯೋಜನಾ ಮಂಜುರಾತಿ ಸಂದರ್ಭ ಈಗ ಉದ್ಭವವಾಗಿಲ್ಲ. ಸಾಲಿಸಿಟರ್‌ ಜನರಲ್‌ ಅವರು ಈ ಹಂತದಲ್ಲಿ ಸೆಕ್ಷನ್‌ 218ರ ಅಡಿ ಅನುಮತಿ ನೀಡಿರುವುದು ದೋಷಪೂರಿತ ಎಂದ್ದಿದ್ದು ಆದೇಶವನ್ನು 17ಎ ಅಡಿ ಪರಿಗಣಿಸಬಹುದು ಎಂದಿದ್ದಾರೆ. ಹಾಗಾಗಿ ಯಾವುದೇ ಪಕ್ಷಕಾರರು ಸೆಕ್ಷನ್‌ 218 ಬಗ್ಗೆ ವಾದಿಸಿಲ್ಲ. ಹೀಗಾಗಿ, ರಾಜ್ಯಪಾಲರ ಆದೇಶವನ್ನು ಪಿಸಿ ಕಾಯಿದೆ ಸೆಕ್ಷನ್‌ 17ಎಕ್ಕೆ ಸೀಮಿತವಾಗಿ ಪರಿಗಣಿಸಲಾಗಿದೆ.

ಪ್ರಕರಣದಲ್ಲಿ ಮೇಲ್ನೋಟಕ್ಕೆ ಅರ್ಜಿದಾರರ ಪಾತ್ರವಿದೆಯೇ?

ಈ ಪ್ರಶ್ನೆಗೆ ಉತ್ತರವಾಗಿ ನ್ಯಾಯಾಲಯವು 1996ರಿಂದ 2023ರ ವರೆಗೆ ಸಿದ್ದರಾಮಯ್ಯನವರ ವಿರುದ್ಧ ಕೇಳಿಬಂದಿರುವ ಮುಡಾ ಪ್ರಕರಣದ ಆರೋಪದ ಅವಧಿಯೇನಿದೆ ಈ ಅವಧಿಯಲ್ಲಿ ಅವರು ರಾಜಕೀಯವಾಗಿ ಹೊಂದಿದ್ದ ಸ್ಥಾನಮಾನಗಳನ್ನು ದಾಖಲಿಸಿದೆ.

ಸಿದ್ದರಾಮಯ್ಯ ಅವರು 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಪಾರ್ವತಿ ಅವರು 23.06.2014ರಂದು 50:50ರ ಅನುಪಾತದಲ್ಲಿ ಮುಡಾಗೆ ಪರಿಹಾರ ಕೋರಿ ಮನವಿ ಸಲ್ಲಿಸುತ್ತಾರೆ. 2015ರಲ್ಲಿ 50:50ರ ಅನುಪಾತದಲ್ಲಿ ನಿವೇಶನ ಹಂಚುವ ಸಂಬಂಧ ನಿಯಮಕ್ಕೆ ತಿದ್ದುಪಡಿ ಮಾಡಲಾಗುತ್ತದೆ. 2017ರಲ್ಲಿ ಮುಡಾ ನಿರ್ಣಯ ಕೈಗೊಂಡಿದ್ದು, 50:50ರ ಅನುಪಾತದಲ್ಲಿ ಪಾರ್ವತಿ ಅವರಿಗೆ ಬದಲಿ ನಿವೇಶನ ಕೈಗೊಳ್ಳುವ ನಿರ್ಧಾರ ಮಾಡುತ್ತದೆ. ಈ ಸಭೆಯಲ್ಲಿ ಅಂದಿನ ವರುಣಾ ಶಾಸಕ ಯತೀಂದ್ರ ಭಾಗವಹಿಸಿದ್ದರು. ಮುಖ್ಯಮಂತ್ರಿ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಿಯಮಗಳನ್ನು ಬದಲಿಸಿರುವುದನ್ನು ತನಿಖೆ ನಡೆಸಬೇಕಿದೆ. ಇದು ತನಿಖೆಯಾಗಬೇಕಿಲ್ಲ ಎಂದರೆ ಇನ್ನು ಯಾವ ಪ್ರಕರಣ ತನಿಖೆಗೆ ಅರ್ಹ ಎಂದು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. 2004ರಲ್ಲಿ ಮಲ್ಲಿಕಾರ್ಜುನಯ್ಯ ಕೆಸರೆ ಗ್ರಾಮದ 3.16 ಎಕರೆ ಭೂಮಿ ಖರೀದಿಸಿದ್ದಾಗಿನಿಂದ 2010ರಲ್ಲಿ ಪಾರ್ವತಿ ಅವರಿಗೆ ದಾನ ಮಾಡಿರುವುದು ಸೇರಿರುವುದು ಒಳಗೊಂಡು 2010ರಿಂದ ಆರೋಪಗಳು ಎಂದುಕೊಂಡರೂ ತನಿಖೆ ಆಗತ್ಯವಾಗಿದೆ ಎಂದಿದೆ.

ಪಾರ್ವತಿಯವರಾಗದಿದ್ದರೆ ಅಷ್ಟು ವೇಗದಲ್ಲಿ ಕಡತಗಳು ಮುಂದೆ ಹೋಗುತ್ತಿರಲಿಲ್ಲ. ಮೈಸೂರಿನಿಂದ 15 ಕಿ ಮೀ ದೂರದಲ್ಲಿರುವ ಆಕ್ಷೇಪಾರ್ಹವಾದ ಭೂಮಿಗೆ ಪರಿಹಾರದ ನಿವೇಶನಗಳನ್ನು ಮೈಸೂರಿನ ಹೃದಯ ಭಾಗದಲ್ಲಿ ನೀಡಲಾಗುತ್ತಿರಲಿಲ್ಲ. ಆದ್ದರಿಂದ, ಸಿದ್ದರಾಮಯ್ಯನವರು ಅಧಿಕಾರದಲ್ಲಿರದಿದ್ದರೆ, ಅತ್ಯುನ್ನತ ಸ್ಥಾನದಲ್ಲಿ ಕೂರದಿದ್ದರೆ ಇಷ್ಟು ದೊಡ್ಡಮಟ್ಟದ ಲಾಭ ದೊರೆಯುತ್ತಿರಲಿಲ್ಲ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಈ ಪ್ರಕರಣವು ತನಿಖೆಗೆ ಅರ್ಹವಾಗಿದೆ ಎನ್ನುವುದು ನ್ಯಾಯಾಲಯದ ಅಭಿಪ್ರಾಯವಾಗಿದೆ. ಸಾಮಾನ್ಯ ಮನುಷ್ಯನಿಗಾದರೆ ಇದಾವುದೂ ಇಷ್ಟು ಶೀಘ್ರವಾಗಿ ಸಾಧ್ಯವಾಗುತ್ತಿರಲಿಲ್ಲ. ಸಿದ್ದರಾಮಯ್ಯನವರು ಹಾಲಿ ಪ್ರಕರಣದಲ್ಲಿ ಯಾವುದೇ ದಾಖಲೆಗೆ ಸಹಿ ಮಾಡದಿರಬಹುದು, ಶಿಫಾರಸ್ಸು ಮಾಡದಿರಬಹುದು ಅಥವಾ ನಿರ್ಧಾರ ಕೈಗೊಳ್ಳದಿರಬಹುದು. ಇದರಿಂದ ಅವರು ಕಾಯಿದೆ ಅಡಿ ವ್ಯಾಪ್ತಿಗೆ ತರಲು ಅಪರಾಧ ಎಸಗದಿರಬಹುದು. ಆದರೆ, ಫಲಾನುಭವಿ ಅನಾಮಿಕರಲ್ಲ, ಬದಲಿಗೆ ಮುಖ್ಯಮಂತ್ರಿಯ ಪತ್ನಿಯಾಗಿದ್ದಾರೆ. ಸಾರ್ವಜನಿಕವಾಗಿ ಸಿದ್ದರಾಮಯ್ಯ ಅವರು 62 ಕೋಟಿ ಕೊಟ್ಟರೆ ಮುಡಾ ನಿವೇಶನಗಳನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ. ಆದ್ದರಿಂದ, ಪತ್ನಿ ಈ ಎಲ್ಲಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಆಕೆಯ ಬದುಕಿನಲ್ಲಿ ಏನಾಗುತ್ತಿದೆ ಎಂಬುದು ತಮಗೆ ಗೊತ್ತಿಲ್ಲ ಎನ್ನಲಾಗದು. ಇಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅಥವಾ ಬೇರಾವುದೇ ಹುದ್ದೆಯ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ನ್ಯಾಯಾಲಯ ಹೇಳಿದೆ.

Siddaramaiah Vs State of Karnataka.pdf
Preview