ಛತ್ತೀಸ್‌ಗಢದಲ್ಲಿ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿನ ಅಕ್ರಮ ಪ್ರಕರಣದಲ್ಲಿ ದೋಷಿಗಳು ಎಂದು ಘೋಷಿತವಾಗಿರುವ ರಾಜ್ಯಸಭಾ ಮಾಜಿ ಸದಸ್ಯ ವಿಜಯ್ ದರ್ಡ, ಅವರ ಪುತ್ರ ದೇವೇಂದರ್ ದರ್ಡ ಮತ್ತು ಜೆಎಲ್‌ಡಿ ಯವತ್ಮಾಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಮನೋಜ್ ಕುಮಾರ್ ಜಯಸ್ವಾಲ್ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಅಮಾನತು ಮಾಡುವಂತೆ ಕೋರಿ ವಿಜಯ್ ದರ್ಡ ಮತ್ತು ದೇವೇಂದರ್ ಹಾಗೂ ಜಯಸ್ವಾಲ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರ ನೇತೃತ್ವದ ಏಕಸದಸ್ಯ ಪೀಠವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ತಲಾ ₹10 ಲಕ್ಷದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯವು ಅರ್ಜಿದಾರರಿಗೆ ಷರತ್ತು ವಿಧಿಸಿದೆ. ಸಿಬಿಐಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ಎರಡು ತಿಂಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಆದೇಶ ಮಾಡಿದೆ.
ಜುಲೈ 26ರಂದು ವಿಚಾರಣಾಧೀನ ನ್ಯಾಯಾಲಯವು ವಿಜಯ್ ದರ್ಡ ಮತ್ತು ಅವರ ಪುತ್ರ ದೇವೇಂದರ್ ದರ್ಡ ಹಾಗೂ ಜಯಸ್ವಾಲ್ ಅವರಿಗೆ ನಾಲ್ಕು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್ ಸಿ ಗುಪ್ತಾ, ಹಿರಿಯ ಅಧಿಕಾರಿಗಳಾದ ಕೆ ಸಿ ಕ್ರೊಫಾ ಮತ್ತು ಕೆ ಸಿ ಸಮರಿಯಾ ಅವರಿಗೂ ಮೂರು ವರ್ಷಗಳ ಶಿಕ್ಷೆ ವಿಧಿಸಿದೆ.
2006ರಲ್ಲಿ ಜಾಹೀರಾತು ನೀಡಲಾಗಿದ್ದ ಕಲ್ಲಿದ್ದಲು ಗಣಿ ಹಂಚಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಜೆಎಲ್‌ಡಿ ಯವತ್ಮಾಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಹಲವು ವಿಚಾರಗಳನ್ನು ಬಚ್ಚಿಟ್ಟು, ಅಕ್ರಮವಾಗಿ ಕಲ್ಲಿದ್ದಲು ಗಣಿ ಪಡೆದುಕೊಂಡಿತ್ತು ಎಂಬುದು ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) ಜೊತೆಗೆ ಸೆಕ್ಷನ್ 420 ಅಡಿ (ವಂಚನೆ) ಹಾಗೂ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್ 13(1)(ಡಿ)(iii) ಎಲ್ಲಾ ಆರೋಪಿಗಳು ದೋಷಿಗಳು ಎಂದು ವಿಚಾರಣಾಧೀನ ನ್ಯಾಯಾಲಯ ತೀರ್ಪು ನೀಡಿತ್ತು. ಕಲ್ಲಿದ್ದಲು ಹಗರಣದಲ್ಲಿ ಇದು 13ನೇ ಆದೇಶವಾಗಿದೆ.