A1
ಸುದ್ದಿಗಳು

ಕಲ್ಲಿದ್ದಲು ಹಗರಣ: ಭಾರತ ಸರ್ಕಾರವನ್ನು ವಂಚಿಸಲು ಸಂಚು ರೂಪಿಸಿದ ಕಾರಣಕ್ಕೆ ಕಂಪೆನಿ ಮತ್ತು ನಿರ್ದೇಶಕರಿಗೆ ಶಿಕ್ಷೆ

ಒಡಿಶಾದಲ್ಲಿ ಕಲ್ಲಿದ್ದಲು ನಿಕ್ಷೇಪವನ್ನು ಪಡೆಯುವ ಸಲುವಾಗಿ ಸುಳ್ಳು ಮಾಹಿತಿ ನೀಡಿದ್ದರು ಎಂದು ಸಿಬಿಐ ಆರೋಪಿಸಿತ್ತು. ಶಿಕ್ಷೆಯ ಪ್ರಮಾಣವನ್ನು ನಾಳೆ ಅಂದರೆ ಏಪ್ರಿಲ್ 25ರಂದು ನ್ಯಾಯಾಲಯ ಘೋಷಿಸಲಿದೆ.

Bar & Bench

ಒಡಿಶಾದಲ್ಲಿ ಕಲ್ಲಿದ್ದಲು ನಿಕ್ಷೇಪವನ್ನು ಪಡೆಯುವ ಸಲುವಾಗಿ ಭಾರತ ಸರ್ಕಾರವನ್ನು ವಂಚಿಸಲು ಸಂಚು ರೂಪಿಸಿದ ಆರೋಪದ ಮೇಲೆ ಸಿಬಿಐ ವಿಶೇಷ ನ್ಯಾಯಾಲಯ ಆಧುನಿಕ್‌ ಕಾರ್ಪೊರೇಷನ್‌ ಲಿಮಿಟೆಡ್‌ ಮತ್ತದರ ನಿರ್ದೇಶಕರನ್ನು ದೋಷಿಗಳು ಎಂದು ಪರಿಗಣಿಸಿ ತೀರ್ಪು ನೀಡಿದೆ.

ಕಂಪನಿಯು ಪಶ್ಚಿಮ ಬಂಗಾಳದ ದುರ್ಗಾಪುರ ಮತ್ತು ಒಡಿಶಾದ ಸುಂದರ್‌ಘರ್‌ನಲ್ಲಿ ತನ್ನ ಕಬ್ಬಿಣದ ಸ್ಥಾವರಗಳಿಗೆ ಮಂಜೂರಾಗಿದ್ದ ʼಪತ್ರಪರ ಕಲ್ಲಿದ್ದಲು ಬ್ಲಾಕ್‌ನ ಹಂಚಿಕೆ ಪಡೆಯುವಲ್ಲಿ ಕಂಪೆನಿ ಯಶಸ್ವಿಯಾಗಿತ್ತು.

ಉಕ್ಕು ಸಚಿವಾಲಯ. ಸರ್ಕಾರದ ಪರಿಶೀಲನಾ ಸಮಿತಿ ಹಾಗೂ ಕಲ್ಲಿದ್ದಲು ಸಚಿವಾಲಯವನ್ನು ವಂಚಿಸಲು ಕಂಪೆನಿ ಕ್ರಿಮಿನಲ್‌ ಪಿತೂರಿ ನಡೆಸಿದೆ ಎಂಬುದನ್ನು ಸಂದರ್ಭ ಸನ್ನಿವೇಶಗಳು ತಪ್ಪದೇ ಸಾಬೀತುಪಡಿಸುತ್ತಿವೆ ಎಂದು ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅಭಿಪ್ರಾಯಪಟ್ಟರು.

ಆಧುನಿಕ್ ಕಾರ್ಪೊರೇಷನ್ ಲಿಮಿಟೆಡ್ ಮತ್ತದರ ನಿರ್ದೇಶಕರಾದ ನಿರ್ಮಲ್ ಕುಮಾರ್ ಅಗರ್‌ವಾಲ್‌ ಮತ್ತು ಮಹೇಶ್ ಕುಮಾರ್ ಅಗರ್‌ವಾಲ್‌ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಫೋರ್ಜರಿ ಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್‌ 120 ಬಿ, 420 ಹಾಗೂ 471ರ ಅಡಿ ಯಲ್ಲಿ ಕಂಪೆನಿ ಹಾಗೂ ಈ ಇಬ್ಬರೂ ನಿರ್ದೇಶಕರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಅಂದರೆ ಏಪ್ರಿಲ್‌ 25ರಂದು ನ್ಯಾಯಾಲಯ ಘೋಷಿಸಲಿದೆ.