ಸುದ್ದಿಗಳು

[ಕಲ್ಲಿದ್ದಲು ಹಗರಣ] ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗೆ ಜೈಲು ಶಿಕ್ಷೆ

Bar & Bench

ಲೋಹರಾ ಈಸ್ಟ್ ಕಲ್ಲಿದ್ದಲು ಬ್ಲಾಕ್ ಅನ್ನು ಗ್ರೇಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ (ಜಿಐಎಲ್‌) ಹಂಚಿಕೆ ಮಾಡುವ ಸಲುವಾಗಿ ಸರ್ಕಾರವನ್ನು ವಂಚಿಸಲು ಸಂಚು ರೂಪಿಸಿದ್ದಕ್ಕಾಗಿ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್‌ ಸಿ ಗುಪ್ತಾ ಮತ್ತು ಮಾಜಿ ಜಂಟಿ ಕಾರ್ಯದರ್ಶಿ ಕೆ ಎಸ್ ಕ್ರೋಫಾ ಅವರಿಗೆ ಕ್ರಮವಾಗಿ ಮೂರು ಹಾಗೂ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ದೆಹಲಿಯ ವಿಶೇಷ ನ್ಯಾಯಾಲಯ ವಿಧಿಸಿದೆ. [ಸಿಬಿಐ ಮತ್ತು ಗ್ರೇಸ್ ಇಂಡಸ್ಟ್ರೀಸ್ ಲಿಮಿಟೆಡ್‌ ನಡುವಣ ಪ್ರಕರಣ].

ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಸ್ಥಾಪಿಸಲಾದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರು ಎಚ್‌ಸಿ ಗುಪ್ತಾಗೆ ₹ 1 ಲಕ್ಷ ಮತ್ತು ಕ್ರೋಫಾಗೆ ₹ 50,000 ದಂಡ ವಿಧಿಸಿದರು. ಜಿಐಎಲ್‌ಗೆ ₹ 2 ಲಕ್ಷ ಮತ್ತು ಮೂರನೇ ಆರೋಪಿ ಮುಖೇಶ್ ಗುಪ್ತಾಗೆ ₹ 2 ಲಕ್ಷ ದಂಡದೊಂದಿಗೆ 4 ವರ್ಷಗಳ ಸೆರೆವಾಸ ವಿಧಿಸಲಾಯಿತು.

ಜಿಐಎಲ್‌ನ ಮಾಜಿ ನಿರ್ದೇಶಕಿ ಸೀಮಾ ಗುಪ್ತಾ ಮತ್ತು ಮಹಾರಾಷ್ಟ್ರದ ಭೂವಿಜ್ಞಾನ ಮತ್ತು ಗಣಿಗಾರಿಕೆಯ ಮಾಜಿ ನಿರ್ದೇಶಕ ವಿಶ್ವಾಸ್ ಸಾವಖಂಡೆ ಅವರನ್ನು ಖುಲಾಸೆಗೊಳಿಸಲಾಗಿದೆ. ಆಗಸ್ಟ್ 4, 2022ರಂದು ಶಿಕ್ಷೆಯ ಪ್ರಮಾಣದ ಕುರಿತ ವಾದಗಳನ್ನು ನ್ಯಾಯಾಲಯ ಆಲಿಸಿತ್ತು.

ಅಂದಿನ ಸಂಸದರಾದ ಪ್ರಕಾಶ್ ಜಾವಡೇಕರ್, ಹನ್ಸ್ ರಾಜ್ ಅಹಿರ್ ಹಾಗೂ ರಾಜಕೀಯ ನಾಯಕ ಮತ್ತು ವಕೀಲ ಭೂಪೇಂದ್ರ ಯಾದವ್ ಅವರು 2006ರಿಂದ 2009ರ ಅವಧಿಯಲ್ಲಿ ಕಲ್ಲಿದ್ದಲು ಉಚಿತ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾರ್ಚ್ 2012ರಲ್ಲಿ ವಿಜಿಲೆನ್ಸ್‌ ಕಮಿಷನರ್‌ಗೆ ದೂರು ನೀಡಿದ್ದರು.