Justice Krishna Murari, CJI NV Ramana and Justice Hima Kohli
Justice Krishna Murari, CJI NV Ramana and Justice Hima Kohli 
ಸುದ್ದಿಗಳು

ಕಲ್ಲಿದ್ದಲು ಹಗರಣ: ಕಳಂಕಿತರ ಪಟ್ಟಿಯಲ್ಲಿ ವಿನಾಕಾರಣ ಕಂಪನಿಯೊಂದರ ಹೆಸರು ಸೇರಿಸಿದ್ದ ಕೇಂದ್ರಕ್ಕೆ ಸುಪ್ರೀಂ ದಂಡ

Bar & Bench

ಬಿಎಲ್‌ಎ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಪರವಾಗಿ ನೀಡಲಾಗಿದ್ದ ಕಲ್ಲಿದ್ದಲು ಗಣಿಗಾರಿಕೆ ಗುತ್ತಿಗೆ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ "ನಿರ್ದಯ, ಅಜಾಗರೂಕ ಹಾಗೂ ನಿರ್ಲಕ್ಷ್ಯ”ದಿಂದ ಕೂಡಿದೆ ಎಂದಿರುವ ಸುಪ್ರೀಂ ಕೋರ್ಟ್‌ ಅದಕ್ಕಾಗಿ ಸರ್ಕಾರಕ್ಕೆ ₹1 ಲಕ್ಷ ದಂಡ ವಿಧಿಸಿದೆ [ಬಿಎಲ್‌ಎ ಇಂಡಸ್ಟ್ರೀಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಗಣಿಗಾರಿಕೆ ಗುತ್ತಿಗೆಗೆ ಕೋರಿ ಬಿಎಲ್‌ಎ ಇಂಡಸ್ಟ್ರೀಸ್ ರಾಜ್ಯ ಸರ್ಕಾರಕ್ಕೆ ಈ ಹಿಂದೆ ಸಲ್ಲಿಸಿದ್ದ ಅರ್ಜಿ ಸೂಕ್ತ ವಿಧಾನಗಳನ್ನು ಅನುಸರಿಸಿತ್ತು. ಅದು ಗಣಿ ಮತ್ತು ಖನಿಜ ಕಾಯಿದೆ- 1957ಕ್ಕೆ (ಎಂಎಂಡಿಆರ್‌ ಆಕ್ಟ್‌) ಅನುಗುಣವಾಗಿ ಇದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಹೇಳಿತು.

2014ರಲ್ಲಿ ಎಂ ಎಲ್ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸೂಚಿಸಿದಂತೆ 46 ಕಲ್ಲಿದ್ದಲು ಬ್ಲಾಕ್ ಹಂಚಿಕೆದಾರರ ಪಟ್ಟಿಯನ್ನು ಕೇಂದ್ರ ಸರ್ಕಾರ ನೀಡಿತ್ತು. ಅದರಲ್ಲಿ ತನ್ನ ಹೆಸರನ್ನು ತಪ್ಪಾಗಿ ಸೇರಿಸಲಾಗಿತ್ತು ಎಂದು ಬಿಎಲ್‌ಎ ಇಂಡಸ್ಟ್ರೀಸ್ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿದಾರರ ಪರವಾಗಿ ನೀಡಲಾದ ಗಣಿಗಾರಿಕೆ ಗುತ್ತಿಗೆ ದುರುದ್ದೇಶದಿಂದ ಕೂಡಿರಲಿಲ್ಲ. ಅರ್ಜಿದಾರರಿಗೆ ಮಾಡಿದ ಕಲ್ಲಿದ್ದಲು ನಿಕ್ಷೇಪದ ಹಂಚಿಕೆ ಎಂಎಂಡಿಆರ್ ಕಾಯಿದೆ ಮತ್ತು ಖನಿಜ ರಿಯಾಯಿತಿ ನಿಯಮಾವಳಿ 1960ರಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಉಲ್ಲಂಘಿಸಿಲ್ಲ. ಆದರೂ, ಅರ್ಜಿದಾರರಿಗೆ ಕಾನೂನು ಪ್ರಕ್ರಿಯೆಯ ಮೂಲಕ ಗಣಿ ಮಂಜೂರು ಮಾಡಲಾಗಿದೆಯೇ ಎಂಬುದನ್ನು ನಿರ್ಧರಿಸಲು ಕೇಂದ್ರ ಸರ್ಕಾರ ಅಗತ್ಯ ಶ್ರದ್ಧೆವಹಿಸಲಿಲ್ಲ ಎಂದು ನ್ಯಾಯಾಲಯ ಕಿಡಿಕಾರಿತು.

ಹೀಗಾಗಿ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಕಂಪೆನಿ ಹೊರತೆಗೆದಿರುವ ಕಲ್ಲಿದ್ದಲಿಗೆ ಹೆಚ್ಚುವರಿ ಲೆವಿ ಪಡೆಯುವ ಅರ್ಹತೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

BLA_Industries_vs_Union_of_India.pdf
Preview