City civil court, Bengaluru 
ಸುದ್ದಿಗಳು

ಕೊಕೇನ್‌ ಸೇವನೆ: ಉದ್ಯಮಿ ಆದಿಕೇಶವುಲು ಪುತ್ರ ಶ್ರೀನಿವಾಸ್‌ಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರು

ಜಾಮೀನಿಗೆ ಇಬ್ಬರ ಭದ್ರತೆ ಒದಗಿಸಬೇಕು ಮತ್ತು ಕೆಲ ಕಾಲ ಪುನರ್‌ ವಸತಿ ಕೇಂದ್ರಕ್ಕೆ ತೆರಳಬೇಕು ಎಂದು ನ್ಯಾಯಾಲಯವು ಜಾಮೀನು ನೀಡುವಾಗ ಆರೋಪಿಗಳಾದ ಶ್ರೀನಿವಾಸ ದಳವಾಯಿ ಮತ್ತು ಗಿರೀಶ್‌ ಅವರಿಗೆ ನಿರ್ದೇಶಿಸಿದೆ.

Bar & Bench

ಮಾದಕ ವಸ್ತು ಸಂಗ್ರಹ ಮತ್ತು ಸೇವನೆ ಆರೋಪದಲ್ಲಿ ಬಂಧಿತರಾಗಿರುವ ಉದ್ಯಮಿ, ರಾಜಕಾರಣಿ ಡಾ. ಡಿ ಕೆ ಆದಿಕೇಶವಲು ದಳವಾಯಿ ಅವರ ಪುತ್ರ 49 ವರ್ಷದ ಶ್ರೀನಿವಾಸ ದಳವಾಯಿ ಮತ್ತು ಅವರ ಒಬ್ಬ ಸಿಬ್ಬಂದಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳಾದ ಶ್ರೀನಿವಾಸ ದಳವಾಯಿ ಮತ್ತು ಗಿರೀಶ್‌ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿ ಶುಕ್ರವಾರ ಕಾಯ್ದಿರಿಸಿದ್ದ ತೀರ್ಪುನ್ನು ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್‌) ಕಾಯಿದೆ ಅಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯ ಹಾಗೂ 33ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ ಎಸ್‌ ಜಯಶ್ರೀ ಅವರು ಪ್ರಕಟಿಸಿದರು.

ಜಾಮೀನು ಪಡೆಯಲು ಇಬ್ಬರ ಭದ್ರತೆ ಒದಗಿಸಬೇಕು ಮತ್ತು ಕೆಲ ಕಾಲ ಪುನರ್‌ ವಸತಿ ಕೇಂದ್ರಕ್ಕೆ ತೆರಳಬೇಕು ಎಂದು ನ್ಯಾಯಾಲಯವು ಜಾಮೀನು ನೀಡುವಾಗ ಆರೋಪಿಗಳಿಗೆ ಷರತ್ತು ವಿಧಿಸಿದೆ.

ಅರ್ಜಿದಾರರ ಪರ ವಕೀಲೆ ವಂದನಾ ಪಿ ಎಲ್‌ ಅವರು “ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್‌ 8 (ಸಿ) ಜೊತೆಗೆ 21(ಎ), 27 ಮತ್ತು 29ರ ಅಡಿ ಶ್ರೀನಿವಾಸ ದಳವಾಯಿ ಮತ್ತು ಗಿರೀಶ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಆರೋಪಿಗಳು 1.08 ಗ್ರಾಂನಷ್ಟು ಕೊಕೇನ್‌ ಹೊಂದಿದ್ದರು ಎಂದು ಹೇಳಲಾಗಿದೆ. ಇದು ವಾಣಿಜ್ಯ ಉದ್ದೇಶಕ್ಕಾಗಿ ಸಂಗ್ರಹಿಸಿದ್ದಲ್ಲ. ಹೀಗಾಗಿ ಅವರಿಗೆ ಜಾಮೀನು ನೀಡಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಮೇ 23ರಂದು ರಾತ್ರಿ 10 ಗಂಟೆ ಸುಮಾರಿಗೆ ರಾಜಮಂಡ್ರಿಯಿಂದ ವಿಮಾನದಲ್ಲಿ ಬಂದಿಳಿದಿದ್ದ ಶ್ರೀನಿವಾಸ ದಳವಾಯಿ ಅವರು ಬೆಂಗಳೂರಿನ ಸಾದಹಳ್ಳಿ ಗೇಟ್‌ ಬಳಿ ಇರುವ ಮ್ಯಾಕ್‌ಡೊನಾಲ್ಡ್‌ ತಲುಪಿದಿದ್ದರು. ಶ್ರೀನಿವಾಸ್‌ ಅವರ ಗೆಸ್ಟ್‌ಹೌಸ್‌ ಸಿಬ್ಬಂದಿಯಾದ ಗಿರೀಶ್‌ ಅವರನ್ನು ಕೊಕೇನ್‌ ಜೊತೆಗೆ ಅಲ್ಲಿಗೆ ಬರುವಂತೆ ತಿಳಿಸಿದ್ದರು. ಮ್ಯಾಕ್‌ಡೊನಾಲ್ಡ್‌ನಲ್ಲಿ ಆಹಾರ ಖರೀದಿಸಿ ಸಮೀಪದಲ್ಲಿದ್ದ ಖಾಲಿ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಗೌಪ್ಯ ಮಾಹಿತಿ ಆಧರಿಸಿ ಅಲ್ಲಿಗೆ ಬಂದ ಎನ್‌ಸಿಬಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು ಎಂದು ಶ್ರೀನಿವಾಸ್‌ ಹೇಳಿಕೆ ನೀಡಿದ್ದರು.

ಉದ್ಯಮಿಯಾದ ನಾನು ಲಿಕ್ವಿಡ್‌ ಕೊಕೇನ್‌ ಅನ್ನು ನೈಜೀರಿಯಾ ಮತ್ತು ರಷ್ಯಾದವರಿಂದ ಗೋವಾ ಸಮುದ್ರ ತಟದಲ್ಲಿ ಖರೀದಿಸಿದ್ದು, ಅದನ್ನು ನಮ್ಮ ಗೆಸ್ಟ್‌ ಹೌಸ್‌ನಲ್ಲಿ ಇಟ್ಟುಕೊಂಡಿದ್ದೇನೆ. ಇದನ್ನು ನಮ್ಮ ಸಿಬ್ಬಂದಿ ಇಮ್ದಾದ್‌ ಅವರಿಗೆ ನೀಡಿದ್ದೇನೆ. ಕೊಕೇನ್‌ ಖರೀದಿಸುವುದಕ್ಕಾಗಿಯೇ ಎರಡು-ಮೂರು ವಾರಗಳ ಹಿಂದೆ ಗೋವಾಕ್ಕೆ ತೆರಳಿದ್ದೆ. ಕೊಕೇನ್‌ ತೆಗೆದುಕೊಳ್ಳುವುದು ಚಟವಾಗಿದ್ದು, ಒಂದರಿಂದ ಎರಡು ಗ್ರಾಂ ಕೊಕೇನ್‌ ಅನ್ನು ತೆಗೆದುಕೊಳ್ಳುತ್ತೇನೆ ಎಂದು ಶ್ರೀನಿವಾಸ್‌ ಅವರು ಸ್ವಯಂಪ್ರೇರಿತ ಹೇಳಿಕೆಯನ್ನು ಎನ್‌ಸಿಬಿ ಅಧಿಕಾರಿಗಳಿಗೆ ನೀಡಿದ್ದರು.