Justice Jasti Chelameswar  
ಸುದ್ದಿಗಳು

ಸದುದ್ದೇಶದಿಂದ ಕೊಲಿಜಿಯಂ ರೂಪುತಳೆಯಿತು, ಆದರೆ ಆಧಿಕಾರದ ದುರ್ಬಳಕೆಯೂ ಸಹ ಭ್ರಷ್ಟತೆಯೇ ಅಗಿದೆ: ನ್ಯಾ. ಚಲಮೇಶ್ವರ್

ಕೊಲಿಜಿಯಂ ಅತ್ಯಂತ ಅಪಾರದರ್ಶಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನ್ಯಾಯಮೂರ್ತಿಗಳ ವಿರುದ್ಧ ಆರೋಪ ಕೇಳಿ ಬಂದಾಗ ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

Bar & Bench

ಸುಪ್ರೀಂ ಕೋರ್ಟ್‌ ದೇಶದ ಹಿತಾಸಕ್ತಿ ಗಮನಿಸಿ, ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ರೂಪಿಸಿದ್ದರೂ ಅಧಿಕಾರವೆನ್ನುವುದು ಕ್ರಮೇಣ ಭ್ರಷ್ಟತೆಗೆ ಎಡೆಮಾಡುತ್ತದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಸ್ತಿ  ಚಲಮೇಶ್ವರ್‌ ಅಭಿಪ್ರಾಯಪಟ್ಟರು. ಕೊಲಿಜಿಯಂ ಕೂಡ ಲೋಪದೋಷಗಳಿಂದ ಮುಕ್ತವಾಗಿಲ್ಲ ಎಂದು ಅವರು ಹೇಳಿದರು.

ಕೇರಳ ಹೈಕೋರ್ಟ್‌ನಲ್ಲಿ "ಸಂವಿಧಾನಕ್ಕೆ ಕೊಲಿಜಿಯಂ ಪರಕೀಯವೇ?" ಎಂಬ ವಿಷಯದ ಕುರಿತು ಭಾರತೀಯ ಅಭಿಭಾಷಕ ಪರಿಷತ್ತಿನ ಕೇರಳ ಘಟಕ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿದ್ದ ನ್ಯಾ. ಚಲಮೇಶ್ವರ್‌ ಕೊಲಿಜಿಯಂ ವ್ಯವಸ್ಥೆ ಬದಲಿಗೆ ಎನ್‌ಜೆಎಸಿ  ವ್ಯವಸ್ಥೆಯನ್ನು ಎತ್ತಿಹಿಡಿದಿದ್ದರು.

ನ್ಯಾ. ಚಲಮೇಶ್ವರ್‌ ಅವರ ಭಾಷಣದ ಪ್ರಮುಖಾಂಶಗಳು

  • ಎನ್‌ಜೆಎಸಿ ತೀರ್ಪು ಬರೆದ ನ್ಯಾಯಮೂರ್ತಿಗಳು ದೇಶಕ್ಕೆ ಒಳಿತನ್ನಷ್ಟೇ ಬಯಸಿದ್ದರು. ಆದರೆ ದುರದೃಷ್ಟವಶಾತ್ ಅಧಿಕಾರದಲ್ಲಿರುವವರು ಕೊಲಿಜಿಯಂ ಅನ್ನು ಭ್ರಷ್ಟಗೊಳಿಸಲು ಒಲವು ತೋರುತ್ತಾರೆ. ಅಧಿಕಾರದ ದುರ್ಬಳಕೆ ಎಂಬುದು ವ್ಯವಸ್ಥೆಯನ್ನು ಭ್ರಷ್ಟಗೊಳಿಸುವುದಾಗಿದೆ. ಅದು ಶಾಸಕಾಂಗ, ಕಾರ್ಯಾಂಗ ಇಲ್ಲವೇ ನ್ಯಾಯಾಂಗವೇ ಇರಲಿ ಅಧಿಕಾರ, ಅಧಿಕಾರವೇ ಆಗಿರುತ್ತದೆ. ಹೀಗಿರುವಾಗ ಕೊಲಿಜಿಯಂ ವ್ಯವಸ್ಥೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದ್ದು ಅದನ್ನು ಎನ್‌ಜೆಎಸಿ ತೀರ್ಪಿನಲ್ಲಿ ದಾಖಲಿಸಿದ್ದೇನೆ.

  • ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಲು ಅಸ್ತಿತ್ವಕ್ಕೆ ಬಂದ ವ್ಯವಸ್ಥೆ ಕೊಲಿಜಿಯಂ ಎಂದು ಹೆಸರಾಗಿದೆ. ಎರಡನೇ ನ್ಯಾಯಾಧೀಶರ ಪ್ರಕರಣದಲ್ಲಿ ಈ ವ್ಯವಸ್ಥೆ ಔಪಚಾರಿಕಗೊಂಡಿತು. ಎರಡನೇ ನ್ಯಾಯಾಧೀಶರ ಪ್ರಕರಣದಲ್ಲಿ ಬಂದ ತೀರ್ಪು ನ್ಯಾಯಮೂರ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಶಿಸ್ತು ತರಲು ಯತ್ನಿಸಿದೆ.

  • ಕೊಲಿಜಿಯಂ ಪದ ಸಂವಿಧಾನದಲ್ಲಿಲ್ಲ ಹಾಗಾಗಿ ಕೊಲಿಜಿಯಂ ವ್ಯವಸ್ಥೆ ಕಾನೂನುಬಾಹಿರ ಎಂಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರ (ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು!) ಇತ್ತೀಚಿನ ವಾದ ಸರಿಯಲ್ಲ. ಮಾಧ್ಯಮ ಸ್ವಾತಂತ್ರ್ಯವನ್ನು ಸಂವಿಧಾನದಲ್ಲಿ ಉಲ್ಲೇಖಿಸದಿದ್ದರೂ ಅದನ್ನು ಒದಗಿಸಲಾಗಿದೆ.

  • ಆದರೆ ಕೊಲಿಜಿಯಂ ಅತ್ಯಂತ ಅಪಾರದರ್ಶಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನ್ಯಾಯಮೂರ್ತಿಗಳ ವಿರುದ್ಧ ಆರೋಪ ಕೇಳಿ ಬಂದಾಗ ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ.

  • ಆರೋಪ ಗಂಭೀರವಾಗಿದ್ದಾಗ ಕ್ರಮ ಕೈಗೊಳ್ಳಬೇಕು.  ಅನೇಕ ನ್ಯಾಯಮೂರ್ತಿಗಳು ಸೋಮಾರಿಗಳು ಸಮಯಕ್ಕೆ ಸರಿಯಾಗಿ ತೀರ್ಪು ಬರೆಯುವುದಿಲ್ಲ. ಇನ್ನೂ ಅನೇಕರು ಅಸಮರ್ಥರು.

  • ನಿವೃತ್ತಿಯ ನಂತರ ಈ ವಿಚಾರ ಪ್ರಸ್ತಾಪಿಸಿದ್ದರಿಂದ ನಾನು ಟೀಕೆ ಮತ್ತು ಆನ್‌ಲೈನ್‌ ಟ್ರೋಲ್‌ಗೆ ಒಳಗಾಗಬಹುದು.

  •  ಆದರೂ ಪ್ರಜಾಪ್ರಭುತ್ವದ ಉಳಿವಿಗೆ ಸ್ವತಂತ್ರ ನ್ಯಾಯಾಂಗ ಅತ್ಯಗತ್ಯ.

  • ಸಂವಿಧಾನಕ್ಕೆ ಮಾಡಲಾದ 42ನೇ ತಿದ್ದುಪಡಿಯನ್ನು ಆಧರಿಸಿ ಈಗಿನ ಕಾನೂನು ಸಚಿವರು (ಕಿರೆನ್ ರಿಜಿಜು) ಹೇಳಿಕೆ ನೀಡಿದ್ದಾರೆ. ಈ ರೀತಿಯ ಮತ್ಸರ ಎಲ್ಲರಿಗೂ ಕೆಟ್ಟದ್ದು. ಜನ ಸಾಮಾನ್ಯರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಅವರ ಮೇಲೆ ಪರಿಣಾಮ ಬೀರುವಂತಹ ವ್ಯವಸ್ಥೆಯಲ್ಲಿ ಹೇಗೆ ಸುಧಾರಣೆ ತರಬೇಕು ಎಂಬುದನ್ನು ಧ್ಯಾನಿಸುತ್ತಿಲ್ಲ. ನಿಮ್ಮ ಸ್ವಂತ ಮಕ್ಕಳು ಮತ್ತು ಸಂತತಿಯ ಒಳಿತಿಗಾಗಿ ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳಿ.