ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸಿಲು ವಿಕ್ಟೋರಿಯಾ ಗೌರಿ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದ ನಂತರ ಅವರಿಗೆ ಸಂಬಂಧಿಸಿದ ಕೆಲವು ವಿಚಾರಗಳು ನ್ಯಾಯಾಲಯದ ಗಮನಕ್ಕೆ ಬಂದಿವೆ ಎಂದು ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ.
ಈ ವಿಚಾರದ ಕುರಿತು ಕೊಲಿಜಿಯಂ ಸಂಜ್ಞೇಯ ಪರಿಗಣಿಸಿದ್ದು, ಗೌರಿ ನೇಮಕಾತಿ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಮದ್ರಾಸ್ ಹೈಕೋರ್ಟ್ ವಕೀಲರ ಮನವಿಯ ವಿಚಾರಣೆಯನ್ನು ನಾಳೆ ನಡೆಸಲಾಗುವುದು ಎಂದು ಪೀಠ ಹೇಳಿದೆ.
“ಅರ್ಜಿಯನ್ನು ನೋಡಿದ್ದು, ಅದನ್ನು ಓದಿದ್ದೇವೆ. ಕೆಲವು ಬೆಳವಣಿಗೆಗಳು ನಡೆದಿವೆ. ನಮ್ಮ ಗಮನಕ್ಕೆ ಬಂದಿರುವುದನ್ನು ಕೊಲಿಜಿಯಂ ಸಂಜ್ಞೇಯ ಪರಿಗಣಿಸಿದೆ. ಆದರೆ, ಇದು ನಾವು ಶಿಫಾರಸು ಮಾಡಿದ ಬಳಿಕದ ಬೆಳವಣಿಗೆಗಳಾಗಿವೆ” ಎಂದು ಸಿಜೆಐ ಹೇಳಿದ್ದಾರೆ.
ಗೌರಿ ಅವರನ್ನು ನ್ಯಾಯಮೂರ್ತಿಯನ್ನಾಗಿ ಕೇಂದ್ರ ಸರ್ಕಾರವು ಈಗಾಗಲೇ ನೇಮಕ ಮಾಡಿ ಅಧಿಸೂಚನೆ ಪ್ರಕಟಿಸಿರುವುದರಿಂದ ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು ಎಂದು ಸಿಜೆಐ ಪೀಠದ ಮುಂದೆ ಹಿರಿಯ ವಕೀಲ ರಾಜು ರಾಮಚಂದ್ರನ್ ಅವರು ಉಲ್ಲೇಖಿಸಿದರು.
ಇದಕ್ಕೆ ಸಿಜೆಐ ಅವರು “ಈ ಅರ್ಜಿ ವಿಚಾರಣೆ ನಡೆಸಲು ಪೀಠ ರಚಿಸಿ, ಅದರ ಮುಂದೆ ಅರ್ಜಿ ಪಟ್ಟಿ ಮಾಡಲಾಗುವುದು. ಸೂಕ್ತ ಪೀಠದ ಮುಂದೆ ಫೆಬ್ರವರಿ 7ರಂದು ಪ್ರಕರಣ ಪಟ್ಟಿ ಮಾಡಬೇಕು” ಎಂದು ರಿಜಿಸ್ಟ್ರಿಗೆ ಸೂಚಿಸಿದರು.
ಜನವರಿ 17ರಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಕೊಲಿಜಿಯಂ ಗೌರಿ ಅವರ ಹೆಸರು ಶಿಫಾರಸು ಮಾಡಿದಾಗಿನಿಂದ ಅವರ ಬಗ್ಗೆ ತೀವ್ರ ಪರ-ವಿರೋಧದ ಅಭಿಪ್ರಾಯಗಳು ನ್ಯಾಯಿಕ ವಲಯದಲ್ಲಿ ಕೇಳಿ ಬರುತ್ತಿವೆ. ಕಾನೂನು ಕ್ಷೇತ್ರ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಗೌರಿ ಅವರು ಬಿಜೆಪಿಯ ಜೊತೆಗಿನ ಸಂಪರ್ಕದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.
ಗೌರಿ ಅವರಿಗೆ ಸೇರಿದೆ ಎನ್ನಲಾದ, ಪರಿಶೀಲನೆಗೆ ಒಳಪಟ್ಟಿರದ ಟ್ವಿಟರ್ ಖಾತೆಯಲ್ಲಿ ಆಕೆ ಬಿಜೆಪಿಯ ಮಹಿಳಾ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದು ಉಲ್ಲೇಖಿಸಲಾಗಿದೆ. 2019ರ ಆಗಸ್ಟ್ 31ರಂದು ಇದೇ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದ್ದು, “ಈಗಷ್ಟೇ ನಾನು ಬಿಜೆಪಿ ಸೇರಿದೆ. ನೀವು ಸಹ ಬಿಜೆಪಿ ಸೇರಬಹುದು. ಆ ಮೂಲಕ ಹೊಸ ಭಾರತ ಸೃಷ್ಟಿಗೆ ಕೈಜೋಡಿಸಬಹುದು” ಎಂದು ಹೇಳಲಾಗಿದೆ.
ಗೌರಿ ಅವರ ಪ್ರಶ್ನೋತ್ತರದ ಯೂಟ್ಯೂಬ್ ವಿಡಿಯೋ ಒಂದರಲ್ಲಿ ಅವರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮೀಯರ ಬಗ್ಗೆ ಮಾಡಿರುವ ಟೀಕೆಗಳು ಸಹ ವೈರಲ್ ಆಗಿವೆ. ಇದರಲ್ಲಿ ಅವರು "ಮುಸಲ್ಮಾನರದ್ದು ಹಸಿರು ಭಯೋತ್ಪಾದನೆಯಾದರೆ, ಕ್ರಿಶ್ಚಿಯನ್ನರದ್ದು ಬಿಳಿ ಭಯೋತ್ಪಾದನೆ" ಎಂದಿದ್ದರು. ಮುಂದುವರೆದು, "ಕ್ರಿಶ್ಚಿಯನ್ ಗುಂಪುಗಳು ಮುಸಲ್ಮಾನ ಗುಂಪುಗಳಿಗಿಂತ ಹೆಚ್ಚು ಅಪಾಯಕಾರಿ. ಲವ್ ಜಿಹಾದ್ ವಿಷಯದಲ್ಲಿ ಇವೆರಡೂ ಗುಂಪುಗಳು ಸಮಾನ ಅಪಾಯಕಾರಿ" ಎಂದಿದ್ದರು.
ಗೌರಿ ಅವರ ಪ್ರಸ್ತಾವಿತ ಪದೋನ್ನತಿ ವಿರೋಧಿಸಿ ವಕೀಲರ ಸಮೂಹವೊಂದು ರಾಷ್ಟ್ರಪತಿಗೆ ಪತ್ರ ಬರೆದಿತ್ತು. ಈ ಮಧ್ಯೆ, ಗೌರಿ ಅವರನ್ನು ಬೆಂಬಲಿಸಿ ಮಧುರೈನ ಕೆಲವು ವಕೀಲರು ಸಿಜೆಐಗೆ ಪತ್ರ ಬರೆದಿದ್ದರು.
ಪ್ರಮಾಣ ಸ್ವೀಕಾರ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಮದ್ರಾಸ್ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕವಾಗಿರುವ ಎಲ್ ವಿಕ್ಟೋರಿಯಾ ಗೌರಿ ಸೇರಿದಂತೆ ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ ಸಮಾರಂಭವು ಬೆಳಗ್ಗೆ 10.30ಕ್ಕೆ ನಿಗದಿಯಾಗಿದೆ. ಇತ್ತ ಸುಪ್ರೀಂ ಕೋರ್ಟ್‌ನಲ್ಲಿ ಗೌರಿ ಅವರ ನೇಮಕಾತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯು ನಾಳಿನ ವಿಚಾರಣಾ ಪಟ್ಟಿಯಲ್ಲಿ 38ನೇ ಸ್ಥಾನದಲ್ಲಿದೆ.
ರಾಷ್ಟ್ರಪತಿಯವರು ನ್ಯಾಯಮೂರ್ತಿಗಳ ನೇಮಕಾತಿಯ ಆದೇಶಕ್ಕೆ ಸಹಿ ಹಾಕಿದ ನಂತರ ಅವರ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಈಗ ಚರ್ಚೆಯ ಕೇಂದ್ರದಲ್ಲಿದೆ.