ಸುದ್ದಿಗಳು

ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕರ್ನಾಟಕ ಹೈಕೋರ್ಟ್‌ ನ್ಯಾ. ಕೆ ಸೋಮಶೇಖರ್‌ ಹೆಸರು ಶಿಫಾರಸ್ಸು

ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ಕೃಷ್ಣಕುಮಾರ್‌ ಅವರು ಮೇ 21ರಂದು ನಿವೃತ್ತರಾಗುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ನಿರ್ಧಾರ ಕೈಗೊಂಡಿದೆ.

Bar & Bench

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ್‌ ಅವರನ್ನು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಗುರುವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ಕೃಷ್ಣಕುಮಾರ್‌ ಅವರು ಮೇ 21ರಂದು ನಿವೃತ್ತರಾಗುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಈ ನಿರ್ಧಾರ ಕೈಗೊಂಡಿದೆ.

“ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ಕೃಷ್ಣಕುಮಾರ್‌ ಅವರು ಮೇ 21ರಂದು ನಿವೃತ್ತಿ ಹೊಂದುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೆ ಸೋಮಶೇಖರ್‌ ಅವರನ್ನು ಆ ಹುದ್ದೆಗೆ ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಿಂ ಮೇ 15ರಂದು ನಡೆದ ಸಭೆಯಲ್ಲಿ ನಿರ್ಧರಿಸಿದೆ” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ನ್ಯಾ. ಸೋಮಶೇಖರ್‌ ಅವರು 1990ರ ಜನವರಿ 27ರಂದು ವಕೀಲರಾಗಿ ನೋಂದಾಯಿಸಿದ್ದು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸಿವಿಲ್‌ ಮತ್ತು ಕ್ರಿಮಿನಲ್‌ ವಿಭಾಗದಲ್ಲಿ ಪ್ರಾಕ್ಟೀಸ್‌ ನಡೆಸಿದ್ದರು. 1998ರ ಜೂನ್‌ 17ರಂದು ನೇರವಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ವಿಜಯಪುರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಆನಂತರ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ನಲ್ಲೂ ನ್ಯಾ. ಸೋಮಶೇಖರ್‌ ಸೇವೆ ಸಲ್ಲಿಸಿದ್ದಾರೆ.

ಹೈಕೋರ್ಟ್‌ನ ನ್ಯಾಯಾಂಗ ಮತ್ತು ವಿಚಕ್ಷಣಾ ರಿಜಿಸ್ಟ್ರಾರ್‌ ಆಗಿಯೂ ಕೆಲಸ ಮಾಡಿರುವ ನ್ಯಾ. ಸೋಮಶೇಖರ್‌ ಅವರು 2016ರ ನವೆಂಬರ್‌ 14ರಂದು ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು, 2018ರ ನವೆಂಬರ್‌ 3ರಲ್ಲಿ ಕಾಯಂಗೊಂಡಿದ್ದರು.