ಸುದ್ದಿಗಳು

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಉಜ್ಜಲ್ ಭುಯಾನ್, ಎಸ್ ವಿ ಭಟ್ಟಿ ಅವರ ನೇಮಕಕ್ಕೆ ಕೊಲಿಜಿಯಂ ಶಿಫಾರಸು

Bar & Bench

ದೇಶದ ಎರಡು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಎಸ್‌ ವಿ ಭಟ್ಟಿ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಬುಧವಾರ ಶಿಫಾರಸು ಮಾಡಿದೆ.

ನ್ಯಾ. ಭುಯಾನ್ ಅವರು ಪ್ರಸ್ತುತ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ನ್ಯಾ. ಭಟ್ಟಿ ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.

ನ್ಯಾ. ಭುಯಾನ್‌ ಅವರ ಮಾತೃ ಹೈಕೋರ್ಟ್‌ ಗುವಾಹಟಿ ಉಚ್ಚ ನ್ಯಾಯಾಲಯ. ಅಕ್ಟೋಬರ್ 17, 2011ರಂದು ಅವರು ಆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅವರು ತಮ್ಮ ಮಾತೃ ಹೈಕೋರ್ಟ್‌ನ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಜೂನ್ 28, 2022ರಿಂದ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

“…ತಮ್ಮ ಸುದೀರ್ಘ ಅಧಿಕಾರಾವಧಿಯಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಭುಯಾನ್‌ ಕಾನೂನಿನ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಅನುಭವಗಳಿಸಿದ್ದಾರೆ. ಅವರಿಗೆ ತೆರಿಗೆ ಕಾನೂನಿನಲ್ಲಿ ವಿಶೇಷ ಕ್ಷೇತ್ರ ಜ್ಞಾನ ಇದೆ. ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾಗ ಅವರು ತೆರಿಗೆ ಸೇರಿದಂತೆ ವ್ಯಾಪಕ ಶ್ರೇಣಿಯ ಪ್ರಕರಣಗಳನ್ನು ಆಲಿಸಿದ್ದಾರೆ. ಅವರ ತೀರ್ಪುಗಳು ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ವ್ಯಾಪಕವಾದ ವಿಚಾರಗಳನ್ನು ಒಳಗೊಂಡಿವೆ. ನ್ಯಾ. ಭುಯಾನ್‌ ಅವರು ಪ್ರಾಮಾಣಿಕತೆ ಮತ್ತು ಸಾಮರ್ಥ್ಯಕ್ಕಾಗಿ ಉತ್ತಮ ಹೆಸರು ಗಳಿಸಿರುವ ನ್ಯಾಯಮೂರ್ತಿಗಳು” ಎಂದು ಕೊಲಿಜಿಯಂ ನಿರ್ಣಯ ಹೇಳಿದೆ.

ನ್ಯಾ. ಭಟ್ಟಿ ಅವರು ಏಪ್ರಿಲ್ 12, 2013 ರಂದು ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು ಅವರೀಗ ತಮ್ಮ ಮಾತೃ ಹೈಕೋರ್ಟ್‌ನ ಅತಿ ಹಿರಿಯ ನ್ಯಾಯಾಮೂರ್ತಿಗಳಾಗಿದ್ದಾರೆ. ಅವರನ್ನು ಮಾರ್ಚ್ 2019 ರಲ್ಲಿ ಕೇರಳ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಜೂನ್ 1, 2023ರಿಂದ ಈವರೆಗೆ ಅವರು ಅಲ್ಲಿನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2022ರ ಆಗಸ್ಟ್‌ನಿಂದ ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಯಾರೂ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿಲ್ಲ ಎನ್ನುವ ಅಂಶವನ್ನು ಕೊಲಿಜಿಯಂ ಪರಿಗಣಿಸಿರುವುದಾಗಿ ನಿರ್ಣಯದಲ್ಲಿ ತಿಳಿಸಲಾಗಿದೆ.

"ಆಂಧ್ರ ಹೈಕೋರ್ಟಿನ ನ್ಯಾಯಮೂರ್ತಿಯಾಗಿ, ನಂತರ ಕೇರಳದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ತಮ್ಮ ಸುದೀರ್ಘ ಅಧಿಕಾರಾವಧಿಯಲ್ಲಿ, ನ್ಯಾ. ಭಟ್ಟಿ ಅವರು ಕಾನೂನಿನ ವಿವಿಧ ಶಾಖೆಗಳಲ್ಲಿ ಗಣನೀಯ ಅನುಭವ ಗಳಿಸಿದ್ದಾರೆ. ಅವರು ಬರೆದ ತೀರ್ಪುಗಳು ಕಾನೂನಿನ ವಿವಿಧ ಶಾಖೆಗಳಲ್ಲಿನ ಸಮಸ್ಯೆಗಳೊಂದಿಗೆ ವ್ಯವಹರಿಸಿದ್ದು ಇದು ಅವರ ಕಾನೂನು ಚಾತುರ್ಯ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಅವರ ನೇಮಕಾತಿ ಮೂಲಕ ಆಂಧ್ರಪ್ರದೇಶ ರಾಜ್ಯಕ್ಕೆ ಪ್ರಾತಿನಿಧ್ಯ ದೊರೆಯುತ್ತದೆ ಎನ್ನುವುದನ್ನು ಹೊರತುಪಡಿಸಿದರೂ ನ್ಯಾ ಭಟ್ಟಿ ಅವರ ನೇಮಕವು ಅವರು ಪಡೆದ ಜ್ಞಾನ ಮತ್ತು ಅನುಭವದ ದೃಷ್ಟಿಯಿಂದ ಮೌಲ್ಯವರ್ಧನೆ  ಒದಗಿಸುತ್ತದೆ. ಉತ್ತಮ ವರ್ಚಸ್ಸು, ಪರಿಪೂರ್ಣತೆ ಹಾಗೂ ಸಾಮರ್ಥ್ಯ ಅವರಿಗೆ ಇದೆ" ಎಂದು ನಿರ್ಣಯ ಹೇಳಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಒಟ್ಟು ಸಂಖ್ಯಾ ಬಲ  34 ಪ್ರಸ್ತುತ 31 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದಾರೆ. ನ್ಯಾಯಮೂರ್ತಿ ಕೃಷ್ಣ ಮುರಾರಿ ಜುಲೈ 7 ಶುಕ್ರವಾರ ನಿವೃತ್ತರಾಗಲಿದ್ದು, ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 4ಕ್ಕೆ ಏರಿಕೆಯಾಗಲಿದೆ.