AAB office-bearers  
ಸುದ್ದಿಗಳು

[ನ್ಯಾಯಾಂಗದಲ್ಲಿನ ಭ್ರಷ್ಟಾಚಾರ] ಇಬ್ಬಗೆ ನೀತಿ ಬೇಡ; ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಿ: ಎಎಬಿ ಆಗ್ರಹ

ನ್ಯಾ. ನಟರಾಜನ್‌ ಅವರು ಎಲ್ಲಾ ಭಾಗಶಃ ಆಲಿಸಿದ ಅಥವಾ ಮುಂದುವರಿದ ವಿಚಾರಣೆ ಪ್ರಕರಣಗಳನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಅವರ ಕೋರ್ಟ್‌ ಅನ್ನು ಬಹಿಷ್ಕರಿಸಲಾಗುವುದು ಎಂದು ತನ್ನ ನಿರ್ಣಯದಲ್ಲಿ ತಿಳಿಸಿರುವ ಎಎಬಿ.

Bar & Bench

ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಮತ್ತು ನ್ಯಾಯಮೂರ್ತಿಗಳಲ್ಲಿ ಹೊಣೆಗಾರಿಕೆ ಉಂಟು ಮಾಡಲು ಕೊಲಿಜಿಯಂ ವ್ಯವಸ್ಥೆಯು ಸೂಕ್ತ ಮತ್ತು ಸಮರ್ಥ ವ್ಯವಸ್ಥೆ ಎನಿಸುತ್ತಿಲ್ಲ ಎಂದು ಬೆಂಗಳೂರು ವಕೀಲರ ಸಂಘದ (ಎಎಬಿ) ಸಾಮಾನ್ಯ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದ್ದು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಇಬ್ಬಗೆ ನೀತಿಯನ್ನು ಅನುಸರಿಸದೆ, ಸ್ವತಂತ್ರ ಸಂಸ್ಥೆಗಳಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಇದೇ ವೇಳೆ, ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೆ ನಟರಾಜನ್‌ ಅವರು ಭಾಗಶಃ ವಿಚಾರಣೆ ಮಾಡಿರುವ ಪ್ರಕರಣಗಳನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಲಾಗಿದ್ದು, ತಪ್ಪಿದಲ್ಲಿ ವಿಷಯವನ್ನು ಕೊಲಿಜಿಯಂಗೆ ಒಯ್ಯುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಗಿದೆ.

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ಮನೆಯಲ್ಲಿ ಪತ್ತೆಯಾಗಿರುವ ಅರೆಬೆಂದ ನೋಟಿನ ಕಂತೆಗಳ ಹಿನ್ನೆಲೆಯಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತು ಎಎಬಿಯು ಮಾರ್ಚ್‌ 24ರಂದು ಹೈಕೋರ್ಟ್‌ನ ಒಂದನೇ ಹಾಲ್‌ನಲ್ಲಿ ನಡೆಸಿದ ಸಾಮಾನ್ಯ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ:

ನ್ಯಾ.ವರ್ಮಾ ಅವರ ಪ್ರಕರಣವು ನ್ಯಾಯಾಂಗದ ಕುರಿತು ಜನರ ಮನಸ್ಸಿನಲ್ಲಿನ ನಂಬಿಕೆ ಮತ್ತು ಉತ್ಸಾಹಕ್ಕೆ ತಣ್ಣೀರೆರಚಿದೆ. ಈ ಘಟನೆಯಿಂದ ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಗೆ ಬಲವಾದ ಪೆಟ್ಟುಬಿದ್ದಿದ್ದು, ಇದು ದೇಶದಲ್ಲಿನ ಕಾನೂನಿನ ತಳಹದಿಗೆ ಭಾರಿ ಹೊಡೆತ ನೀಡಿದೆ ಎಂದು ಎಎಬಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭ್ರಷ್ಟಾಚಾರವು ಆಳವಾಗಿ ಬೇರೂರಿದ್ದು, ಇದು ಎಲ್ಲಾ ನ್ಯಾಯಾಲಯಗಳಲ್ಲಿ ಎಲ್ಲಾ ಹಂತದಲ್ಲೂ ಕರ್ನಾಟಕ ಹೈಕೋರ್ಟ್‌ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ವ್ಯಾಪಿಸುವ ಆತಂಕ ವ್ಯಕ್ತಪಡಿಸಲಾಗಿದೆ.

Justice K Natarajan

ಇಂಥ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮೂಕಪ್ರೇಕ್ಷಕನಾಗಿ ಬಹುಕಾಲ ಉಳಿಯಲಾಗದು. ನ್ಯಾಯಾಂಗದಲ್ಲಿನ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಠಿಣ ಕ್ರಮಕೈಗೊಳ್ಳಬೇಕಿದೆ. ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಸುಪ್ರೀಂ ಕೋರ್ಟ್‌ ತರಬೇಕಿದೆ ಎಂಬುದರ ಕುರಿತು ಸಾಮಾನ್ಯ ಸಭೆಯಲ್ಲಿ ವಿಸ್ತತವಾಗಿ ಚರ್ಚಿಸಲಾಗಿದೆ ಎಂದು ತಿಳಿಸಲಾಗಿದೆ.

ಎಎಬಿ ಕೈಗೊಂಡಿರುವ ನಿರ್ಣಯಗಳು ಇಂತಿವೆ:

  1. ನ್ಯಾ. ವರ್ಮಾ ಅವರನ್ನು ತನಿಖೆಗೆ ಒಳಪಡಿಸುವ ಬದಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅವರನ್ನು ಅಲಾಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವುದು ಆಘಾತ ಮತ್ತು ನೋವು ಉಂಟು ಮಾಡಿದೆ. ಇದು ಅನ್ಯಾಯವಾಗಿದ್ದು, ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಹೊಂದಿಲ್ಲ ಎಂಬುದನ್ನು ಬಿಂಬಿಸುತ್ತದೆ.

  2. ತನಿಖೆ ಮುಗಿಯುವವರೆಗೆ ನ್ಯಾ. ವರ್ಮಾ ಅವರಿಗೆ ನ್ಯಾಯಾಂಗ ಕೆಲಸ ನೀಡಬಾರದು.

  3. ಸಾಮಾನ್ಯ ಜನರಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತದೆ. ಆದರೆ, ನ್ಯಾಯಮೂರ್ತಿಗಳಿಗೆ ಮಾತ್ರ ಸಿವಿಲ್‌ ತನಿಖೆ ಹಾಗೂ ವರ್ಗಾವಣೆ. ಇದು ಇಬ್ಬಗೆ ನೀತಿಯಾಗಿದ್ದು, ಸುಪ್ರೀಂ ಕೋರ್ಟ್‌ ಸ್ವತಂತ್ರ ಸಂಸ್ಥೆಯಿಂದ ಸೂಕ್ತ ತನಿಖೆಗೆ ಆದೇಶಿಸಬೇಕು. ನ್ಯಾಯಮೂರ್ತಿಗಳು ಮತ್ತು ಸಾಮಾನ್ಯ ಜನರಿಗೆ ಕಾನೂನು ಒಂದೇ ಎಂಬುದನ್ನು ಸುಪ್ರೀಂ ಕೋರ್ಟ್‌ ಖಾತರಿಪಡಿಸಬೇಕಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಎತ್ತಿ ಹಿಡಿಯಬೇಕಿದೆ. ನ್ಯಾಯಮೂರ್ತಿಗಳೂ ಕಾನೂನಿನ ಮುಂದೆ ಸಮಾನರು ಎಂಬುದನ್ನು ಸುಪ್ರೀಂ ಕೋರ್ಟ್‌ ಖಾತರಿಪಡಿಸಬೇಕಿದೆ.

  4. ಭ್ರಷ್ಟಾಚಾರ ಆರೋಪ ಹೊತ್ತಿರುವ ಎಲ್ಲಾ ನ್ಯಾಯಮೂರ್ತಿಗಳನ್ನೂ ಮಾತೃ ಹೈಕೋರ್ಟ್‌ನಿಂದ ಬೇರೆ ಹೈಕೋರ್ಟ್‌ಗಳಿಗೆ ವರ್ಗಾಯಿಸಬೇಕು.

  5. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬದವರು ಪ್ರತಿ ವರ್ಷ ತಮ್ಮ ಆಸ್ತಿ ಘೋಷಣೆಯನ್ನು ಸರ್ವೋಚ್ಚ ನ್ಯಾಯಾಲಯ ಮತ್ತು ಸಂಬಂಧಿತ ಹೈಕೋರ್ಟ್‌ಗಳ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕಗೊಳಿಸಬೇಕು.

  6. ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೆ ನಟರಾಜನ್‌ ಅವರು ಬಹುತೇಕ ಪ್ರಕರಣಗಳನ್ನು ಭಾಗಶಃ ವಿಚಾರಣೆ ಮಾಡಿದ್ದಾರೆ. ನ್ಯಾ. ನಟರಾಜನ್‌ ಅವರು ಎಲ್ಲಾ ಭಾಗಶಃ ಆಲಿಸಿದ ಅಥವಾ ಮುಂದುವರಿದ ವಿಚಾರಣೆ ಪ್ರಕರಣಗಳನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಅವರ ಕೋರ್ಟ್‌ ಅನ್ನು ಬಹಿಷ್ಕರಿಸಲಾಗುವುದು. ನ್ಯಾ. ಕೆ ನಟರಾಜನ್‌ ಅವರ ಮುಂದಿರುವ ಪ್ರಕರಣಗಳನ್ನು ಬಿಡುಗಡೆಗೊಳಿಸಲು ಮುಖ್ಯ ನ್ಯಾಯಮೂರ್ತಿ ನಿರ್ದೇಶಿಸಬೇಕು. ಪ್ರಕರಣಗಳನ್ನು ಬಿಡುಗಡೆಗೊಳಿಸದಿದ್ದರೆ ಈ ವಿಚಾರವನ್ನು ಸಿಜೆಐ ಮತ್ತು ಕೊಲಿಜಿಯಂಗೆ ಕೊಂಡೊಯ್ಯಲು ಮುಂದಿನ ಕ್ರಮಕೈಗೊಳ್ಳಲಾಗುವುದು.

  7. ಹೈಕೋರ್ಟ್‌ನ ಗೋಲ್ಡನ್‌ ಗೇಟ್‌ ಮುಂದೆ ಅಪಾರ ಸಂಖ್ಯೆಯಲ್ಲಿ ವಕೀಲರು ನೆರೆದು ಮತ್ತು ನ್ಯಾಯಾಲಯದ ಎಲ್ಲೆಡೆ ಮೊಂಬತ್ತಿ ಹಚ್ಚುವ ಮೂಲಕ ನ್ಯಾಯಾಂಗದಲ್ಲಿ ಆವರಿಸಿರುವ ಕತ್ತಲೆಯನ್ನು ಬದಿಗೆ ಸರಿಸಿ ಬೆಳಕು ಹರಿಸಬೇಕಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗುವುದು. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ; ಪ್ರಕರಣಗಳನ್ನು ಪಟ್ಟಿ ಮಾಡಲು ಹೈಕೋರ್ಟ್‌ ರಿಜಿಸ್ಟ್ರಿಯಲ್ಲಿ ನಡೆಸಲಾಗುತ್ತಿರುವ ಭ್ರಷ್ಟಾಚಾರ; ವಿಚಾರಣಾಧೀನ ನ್ಯಾಯಾಲಯಗಳಲ್ಲಿನ ಭ್ರಷ್ಟಾಚಾರ ತಡೆಯಲು ಹೈಕೋರ್ಟ್‌ನ ವಿಚಕ್ಷಣಾ ಇಲಾಖೆ ವಿಫಲವಾಗಿರುವುದು ಮತ್ತು ಆರೋಪಿತ ವಿಚಾರಣಾಧೀನ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಲು ಹೈಕೋರ್ಟ್‌ ವಿಫಲವಾಗಿರುವುದನ್ನು ಮೊಂಬತ್ತಿ ಹಚ್ಚುವ ವೇಳೆಗೆ ವಿರೋಧಿಸಲಾಗುವುದು.

  8. ಕರ್ನಾಟಕ ನ್ಯಾಯಾಂಗದಲ್ಲಿನ ಆಡಳಿತ ಮತ್ತು ಹೊಣೆಗಾರಿಕೆ ಹೆಚ್ಚಿಸುವ ಮೂಲಕ ಆಡಳಿತದಲ್ಲಿ ಸುಧಾರಣೆ ತರಲು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಕೊಲಿಜಿಯಂ ನ್ಯಾಯಮೂರ್ತಿಗಳಿಗೆ ವಿಚಾರ ಮುಟ್ಟಿಸಲಾಗುವುದು. ಪ್ರಕರಣಗಳನ್ನು ಪಟ್ಟಿ ಮಾಡುವುದು, ರಿಜಿಸ್ಟ್ರಿಯಲ್ಲಿನ ಭ್ರಷ್ಟಾಚಾರ ಮತ್ತು ಹೈಕೋರ್ಟ್‌ ಆಡಳಿತದಲ್ಲಿನ ವಿಫಲತೆಗೆ ಸಂಬಂಧಿಸಿದಂತೆ ಸದಸ್ಯರು ಅಪಾರ ಬೇಸರ ವ್ಯಕ್ತಪಡಿಸಿದ್ದಾರೆ.

  9. ಸದನದಲ್ಲಿ ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ನ್ಯಾಯಮೂರ್ತಿಗಳನ್ನೂ ಹನಿಟ್ರ್ಯಾಪ್‌ ಮಾಡಲಾಗಿದೆ ಎಂದು ಹೇಳಿದ್ದು, ಇದರಿಂದ ಎಎಬಿಯು ತೀರ ಆತಂಕಗೊಂಡಿದೆ. ಈ ಆರೋಪದ ಕುರಿತು ಸತ್ಯಾಸತ್ಯತೆಯ ಸಂಬಂಧ ಮುಖ್ಯ ನ್ಯಾಯಮೂರ್ತಿಗಳು ವಿಧಾನಸಭಾ ಸ್ಪೀಕರ್‌ಗೆ ಪತ್ರ ಬರೆಯಬೇಕು. ಅದನ್ನು ಪೂರ್ಣ ನ್ಯಾಯಾಲಯದ ಮುಂದೆ ಇಡಬೇಕು.

  10. ವಿಚಾರಣಾಧೀನ ನ್ಯಾಯಾಲಯ ಮತ್ತು ಉನ್ನತ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತ ತನಿಖೆಗಾಗಿ ದೂರು ಅಥವಾ ಅಹವಾಲು ಸಮಿತಿ ರಚಿಸಬೇಕು. ಅದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ವರದಿ ಮಾಡುವಂತೆ ನಿರ್ಧರಿಸಬೇಕು.

  11. ಹೈಕೋರ್ಟ್‌ನ ವಿಚಕ್ಷಣಾ ಸಮಿತಿಯು ವಿಭಾಗವು ನಿಷ್ಪಲವಾಗಿದ್ದು, ಅದು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಭ್ರಷ್ಟಾಚಾರ ನಿಗ್ರಹಿಸಲು ವಿಫಲವಾಗಿದೆ. ವಿಚಕ್ಷಣಾ ವಿಭಾಗದ ರಿಜಿಸ್ಟ್ರಾರ್‌ ಮತ್ತು ಸಿಬ್ಬಂದಿ ಹಾಗೂ ಭ್ರಷ್ಟ ಹಾಗೂ ವಿಚಾರಣಾಧೀನ ನ್ಯಾಯಾಲಯದಲ್ಲಿನ ಅಪ್ರಾಮಾಣಿಕ ನ್ಯಾಯಮೂರ್ತಿಗಳನ್ನು ಪತ್ತೆ ಹಚ್ಚಿ ಅದನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ಸ್ಥಳೀಯ ವಕೀಲರ ಸಂಘ ತರಬೇಕು. ವಿಚಕ್ಷಣಾ ವಿಭಾಗವು ಕಾರ್ಯಪ್ರವೃತ್ತವಾಗಿ, ಅಂಥ ನ್ಯಾಯಮೂರ್ತಿಗಳನ್ನು ಹೈಕೋರ್ಟ್‌ ಗಮನಕ್ಕೆ ತರಬೇಕು. ಅಂಥವರನ್ನು ಸೇವೆಯಿಂದ ವಜಾಗೊಳಿಸಬೇಕು.

  12. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ನಿಗ್ರಹಿಸುವ ಮೂಲಕ ನ್ಯಾಯಮೂರ್ತಿಗಳಲ್ಲಿ ಹೊಣೆಗಾರಿಕೆ ಉಂಟು ಮಾಡಲು ಕೊಲಿಜಿಯಂ ವ್ಯವಸ್ಥೆಯು ವಿಫಲವಾಗಿದೆ. ಕೊಲಿಜಿಯಂ ಮಾಡುವ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತಕ್ಕೆ ಹಲವು ನಿದರ್ಶನಗಳಿದ್ದು, ಇದರಿಂದ ವಕೀಲರು ಮತ್ತು ಸಾರ್ವಜನಿಕರ ದೃಷ್ಟಿಯಲ್ಲಿ ವ್ಯವಸ್ಥೆಯ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಪಾರದರ್ಶಕತೆ ಉಂಟು ಮಾಡಲು ಮತ್ತು ನ್ಯಾಯಮೂರ್ತಿಗಳಲ್ಲಿ ಹೊಣೆಗಾರಿಕೆ ಉಂಟು ಮಾಡಲು ಕಠಿಣ ಮಾರ್ಪಾಡುಗಳು ಅಗತ್ಯವಾಗಿದೆ.

  13. ಹೈಕೋರ್ಟ್‌ ಕೊಲಿಜಿಯಂನಲ್ಲಿ ಕರ್ನಾಟಕ ರಾಜ್ಯದ ಪ್ರಾತಿನಿಧಿಕತ್ವ ಖಾತರಿಪಡಿಸಲು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಒಳಗೊಳ್ಳಬೇಕು ಎಂಬ ಸರ್ವಾನುಮತದ ನಿರ್ಧಾರವನ್ನು ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ.

AAB GENERAL BODY MEETING RESOLUTION.pdf
Preview