Karnataka HC and COMED-K 
ಸುದ್ದಿಗಳು

ಕಾಮೆಡ್‌-ಕೆ ಪ್ರವೇಶಾತಿ ಮಾರ್ಗಸೂಚಿ ಕುರಿತು ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕೊನೆಯ ದಿನಾಂಕದೊಳಗೆ ಕಾಲೇಜಿಗೆ ವರದಿ ಮಾಡಿಕೊಂಡು ಅಧ್ಯಯನ ಮುಂದುವರಿಸದಿದ್ದರೆ,ಮೂಲ ದಾಖಲೆ ಒದಿಗಿಸದಿದ್ದರೆ, ಪ್ರವೇಶ ಪಡೆದ ಶುಲ್ಕ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ಶುಲ್ಕದ ಐದು ಪಟ್ಟು ದಂಡ ಪಾವತಿಸಬೇಕಾಗುತ್ತದೆ ಎಂಬುದಕ್ಕೆ ಆಕ್ಷೇಪ.

Bar & Bench

ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ) ಪ್ರವೇಶಾತಿ ಪರೀಕ್ಷೆಯಲ್ಲಿ ಕರ್ನಾಟಕದ ಖಾಸಗಿ ಎಂಜಿನಿಯರ್ ಕಾಲೇಜುಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದರೆ, ಪಾವತಿ ಮಾಡಲಾಗಿರುವ ಶುಲ್ಕ ಕಳೆದುಕೊಳ್ಳಬೇಕಾಗುತ್ತದೆ ಮತ್ತು ಶುಲ್ಕ ಮೊತ್ತದ ಐದು ಪಟ್ಟು ದಂಡ ವಿಧಿಸಲಾಗುತ್ತದೆ ಎಂಬ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಕಾಮೆಡ್-ಕೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರಿನ ವಕೀಲ ಎನ್ ಪಿ ಅಮೃತೇಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪ್ರವೇಶಾತಿ ಮೇಲ್ವಿಚಾರಣಾ ಸಮಿತಿ, ಕರ್ನಾಟಕ ಅನುದಾನ ರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ, ವಿಶ್ವವಿದ್ಯಾಲಯ ಅನುದಾನ ಆಯೋಗ, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಮತ್ತು ಕಾಮೆಡ್-ಕೆಗೆ ಪೀಠವು ನೋಟಿಸ್ ಜಾರಿ ಮಾಡಿತು.

2022-23ನೇ ಸಾಲಿನ ಕರ್ನಾಟಕದ ಎಲ್ಲಾ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿ ಕುರಿತಂತೆ ಕಾಮೆಡ್-ಕೆ ಮಾರ್ಗಸೂಚಿ ರಚನೆ ಮಾಡಿದೆ. ಈ ಪ್ರಕಾರ ಕಾಲೇಜಿಗೆ ಪ್ರವೇಶಾತಿ ಪಡೆದ ನಂತರ ನಿಗದಿಪಡಿಸಲಾದ ಕೊನೆಯ ದಿನಾಂಕದೊಳಗೆ ವಿದ್ಯಾರ್ಥಿಯು ಕಾಲೇಜಿಗೆ ವರದಿ ಮಾಡಿಕೊಂಡು ಅಧ್ಯಯನ ಮುಂದುವರಿಸದಿದ್ದರೆ ಮತ್ತು ಮೂಲ ದಾಖಲೆಗಳನ್ನು ಒದಗಿಸದಿದ್ದರೆ, ಪ್ರವೇಶಾತಿ ಪಡೆದ ಶುಲ್ಕವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ಶುಲ್ಕ ಮೊತ್ತದ ಐದು ಪಟ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ಮಾರ್ಗಸೂಚಿ ಹೇಳುತ್ತದೆ. ಇದು ಸಂಪೂರ್ಣ ಏಕಪಕ್ಷೀಯ ನಿರ್ಧಾರವಾಗಿದ್ದು, ಯುಜಿಸಿ ಮತ್ತು ಎಐಸಿಟಿಇ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ರೀತಿಯ ಮಾರ್ಗಸೂಚಿ ರೂಪಿಸಲು ಕಾಮೆಡ್-ಕೆಗೆ ಯಾವುದೇ ಅಧಿಕಾರ ಇಲ್ಲ. ಈ ನಿಯಮದಿಂದ ವಿದ್ಯಾರ್ಥಿಗಳು ಪೂರಕ ಸುತ್ತು ಸೇರಿದಂತೆ ಕೌನ್ಸಿಲಿಂಗ್‌ನ ಎಲ್ಲಾ ಸುತ್ತುಗಳಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಈ ನಿಯಮ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಒತ್ತಡ ಬೀರಲಿದೆ. ಈ ನಿಯಮವನ್ನು ಹಿಂಪಡೆಯುವಂತೆ ಕೋರಿ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿಗೆ ಆಗಸ್ಟ್‌ 1ರಂದು ಮನವಿ ಮಾಡಲಾಗಿದೆ. ಆಗಸ್ಟ್‌ 3ರಂದು ಕಾಮೆಡ್-ಕೆ ಮತ್ತು ಕರ್ನಾಟಕ ಅನುದಾನ ರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘಕ್ಕೆ ಮನವಿ ಮಾಡಲಾಗಿದೆ. ಆದರೆ, ಮನವಿಯನ್ನು ಪರಿಗಣಿಸಿಲ್ಲ ಎಂದು ತಿಳಿಸಿರುವ ಅರ್ಜಿದಾರರು, ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಒಂದೊಮ್ಮೆ ಮೂಲ ಅಂಕಪಟ್ಟಿ ಹಿಂದಿರುಗಿಸಲು ಮನವಿ ಮಾಡಿದರೆ, ಯಾವುದೇ ಹಣಕಾಸಿನ ಷರತ್ತಿಲ್ಲದೆ ಅಂಕಪಟ್ಟಿ ಮತ್ತು ಪ್ರವೇಶಾತಿಯನ್ನು ಹಿಂದಿರುಗಿಸಬೇಕು. ಕರ್ನಾಟಕದ ಎಲ್ಲಾ ಕಾಲೇಜಿಗಳಿಗೆ ಅನ್ವಯವಾಗುವಂತೆ ಪ್ರವೇಶ ದಿನಾಂಕವನ್ನು ವಿಸ್ತರಿಸಬೇಕು ಮತ್ತು ಕಾಲೇಜಿಗೆ ವರದಿ ಮಾಡಿಕೊಳ್ಳಲು ಒಂದೇ ದಿನಾಂಕ ನಿಗದಿಪಡಿಸಬೇಕು. ಪೂರಕ ಸುತ್ತು ಸೇರಿದಂತೆ ಕೌನ್ಸಿಲಿಂಗ್ ಎಲ್ಲಾ ಸುತ್ತುಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕಾಮೆಡ್-ಕೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.