Asaduddin Owaisi and Akhilesh Yadav with Varanasi court
Asaduddin Owaisi and Akhilesh Yadav with Varanasi court  Facebook
ಸುದ್ದಿಗಳು

ಜ್ಞಾನವಾಪಿ ಮಸೀದಿ ಪ್ರಕರಣ: ಅಖಿಲೇಶ್, ಓವೈಸಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿಕೆ, ವಾರಾಣಸಿ ನ್ಯಾಯಾಲಯದ ನೋಟಿಸ್

Bar & Bench

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಕುರಿತಾದ ಘಟನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ವಾರಾಣಸಿ ನ್ಯಾಯಾಲಯ ಇತ್ತೀಚೆಗೆ ಈ ಇಬ್ಬರು ನಾಯಕರಿಗೆ ನೋಟಿಸ್‌ ನೀಡಿದೆ.

ಇಬ್ಬರೂ ನಾಯಕರು ಯಾವುದೇ ಸಂಜ್ಞೇಯ ಅಪರಾಧ ಎಸಗಿಲ್ಲ ಎಂದು ತಿಳಿಸಿ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ವಕೀಲ ಹರಿಶಂಕರ್ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನುನ್ಯಾಯಾಲಯ ವಜಾಗೊಳಿಸಿತ್ತು. ಆದೇಶ ಪ್ರಶ್ನಿಸಿ ಪಾಂಡೆ ಬಳಿಕ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ಓವೈಸಿ ಮತ್ತು ಯಾದವ್ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲು ಕೋರಿ ಸಲ್ಲಿಸಲಾದ ಆರಂಭಿಕ ಮನವಿಯ ವಿಚಾರಣೆಗೆ ಕಳೆದ ವರ್ಷ ನವೆಂಬರ್ 15 ರಂದು ಸಮ್ಮತಿ ಸೂಚಿಸಲಾಗಿತ್ತು. ಜನವರಿ 31 ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಕಳೆದ ತಿಂಗಳು ಪಾಂಡೆ ಅವರ ಮನವಿಯನ್ನು ವಜಾಗೊಳಿಸಿತ್ತು.

ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾದ ಶಿವಲಿಂಗದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿರುವ ಇಬ್ಬರೂ ನಾಯಕರು ವಾರಣಾಸಿಯ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಬಗ್ಗೆ ಸುಪ್ರೀಂ ಕೋರ್ಟ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಈ ನಾಯಕರು ಮತಗಳನ್ನು ಪಡೆಯುವುದಕ್ಕಾಗಿ ಜನರ ಭಾವನೆ ಕೆರಳಿಸಲು  ಯತ್ನಿಸುತ್ತಿದ್ದಾರೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪಾಂಡೆ ವಾದಿಸಿದ್ದರು.