Justice KG Balakrishnan
Justice KG Balakrishnan 
ಸುದ್ದಿಗಳು

ಮತಾಂತರಗೊಂಡವರ ಎಸ್‌ಸಿ ಸ್ಥಾನಮಾನದ ಪರಿಶೀಲನೆಗೆ ನಿವೃತ್ತ ಸಿಜೆಐ ಬಾಲಕೃಷ್ಣನ್ ನೇತೃತ್ವದ ಆಯೋಗ ರಚಿಸಿದ ಕೇಂದ್ರ

Bar & Bench

ತಾವು ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದು ಆನಂತರದಲ್ಲಿ ಬೇರೆ ಧರ್ಮಕ್ಕೆ ಮತಾಂತರ ಹೊಂದಿರುವುದಾಗಿ ಹೇಳುವ ಹೊಸ ವ್ಯಕ್ತಿಗಳಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ನೀಡಬಹುದೇ ಎನ್ನುವುದನ್ನು ಪರಿಶೀಲಿಸಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕೆ ಜಿ ಬಾಲಕೃಷ್ಣನ್‌ ಅವರ ನೇತೃತ್ವದ ಮೂವರು ಸದಸ್ಯರ ಆಯೋಗವನ್ನು ಕೇಂದ್ರ ಸರ್ಕಾರವು ರಚಿಸಿದೆ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆಯೋಗಗಳ ವಿಚಾರಣಾ ಕಾಯಿದೆಯಡಿಯ ಸೆಕ್ಷನ್‌ 3ರಲ್ಲಿ ದತ್ತವಾದ ಅಧಿಕಾರವನ್ನು ಬಳಸಿ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ.

ನ್ಯಾ. ಬಾಲಕೃಷ್ಣನ್ ಅವರು ಅಧ್ಯಕ್ಷರಾಗಿರುವ ಆಯೋಗದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಕ ಡಾ. ರವೀಂದರ್‌ ಕುಮಾರ್‌ ಜೈನ್‌ ಹಾಗೂ ಪ್ರೊ. ಸುಷ್ಮಾ ಯಾದವ್‌ ಅವರು ಸದಸ್ಯರಾಗಿರಲಿದ್ದಾರೆ.

ಆಯೋಗವು ಪ್ರಮುಖವಾಗಿ, ತಾವು ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದು ಆನಂತರದಲ್ಲಿ ಬೇರೆ ಧರ್ಮಕ್ಕೆ ಮತಾಂತರ ಹೊಂದಿರುವುದಾಗಿ ಹೇಳುವ, ಕಾಲದಿಂದ ಕಾಲಕ್ಕೆ ಸಂವಿಧಾನದ 341ರ ಅಡಿ ರಾಷ್ಟ್ರಪತಿಯವರು ಪರಿಶಿಷ್ಟ ಜಾತಿಗಳ ಕುರಿತು ಹೊರಡಿಸುವ ಅದೇಶಗಳ ವ್ಯಾಪ್ತಿಗೆ ಒಳಪಡದ ಹೊಸ ವ್ಯಕ್ತಿಗಳಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ನೀಡಬಹುದೇ ಎನ್ನುವುದನ್ನು ಪರಿಶೀಲಿಸಲಿದೆ.

ಅಲ್ಲದೆ ಅಂತಹ ವ್ಯಕ್ತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಒಳಪಡಿಸಿದರೆ ಉಂಟಾಗಬಹುದಾದ ಸಂಭಾವ್ಯ ಪರಿಣಾಮಗಳ ಬಗ್ಗೆ ಗಮನಿಸಲಿದೆ. ಮುಂದುವರೆದು ಹೀಗೆ ಮತಾಂತರಗೊಂಡವರು ತಮ್ಮ ಆಚಾರ, ಪರಂಪರೆಗಳಲ್ಲಿ ಸಾಮಾಜಿಕ ಮತ್ತಿತರ ಸ್ಥಾನಮಾನಗಳಲ್ಲಿ ಹೊಂದುವ ಪರಿವರ್ತನೆಯನ್ನು, ಇದರಿಂದ ಪರಿಶಿಷ್ಟ ಜಾತಿಗೆ ಅವರನ್ನು ಸೇರಿಸುವ ಪ್ರಶ್ನೆಯ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ಅಭ್ಯಸಿಸಲಿದೆ. ಅಷ್ಟೇ ಅಲ್ಲದೆ, ಈ ವಿಚಾರವಾಗಿ ಏಳಬಹುದಾದ ಇನ್ನೂ ಹಲವು ಪ್ರಶ್ನೆಗಳನ್ನು ಆಯೋಗವು ಪರಿಶೀಲಿಸಲಿದೆ.