Justice Suraj Govindraj 
ಸುದ್ದಿಗಳು

ವಿಧಾನ ಮಂಡಲದ ಕಾಗದ ಪತ್ರ ಸಮಿತಿಗೆ ಮಾಹಿತಿ ತರಿಸಿಕೊಳ್ಳುವ, ಅಧಿಕಾರಿಗಳನ್ನು ಕರೆಸುವ ಅಧಿಕಾರವಿಲ್ಲ: ಹೈಕೋರ್ಟ್‌

ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿಯು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಕಳೆದ 5 ವರ್ಷಗಳ ಲಾಭ, ಸಾಲ ನೀಡಿಕೆ, ಸಾಲ ವಸೂಲಾತಿ, ಠೇವಣಿ ಮತ್ತಿತರ ವಹಿವಾಟಿನ ವಿವರ ಒದಗಿಸುವಂತೆ ಸಹಕಾರ ಸಂಘಗಳ ನಿಬಂಧಕರಿಗೆ ಸೂಚಿಸಲಾಗಿತ್ತು.

Bar & Bench

ವಿಧಾನ ಮಂಡಲದ ಕಾಗದ ಪತ್ರ ಸಮಿತಿಗೆ ಮಾಹಿತಿ ಹಾಗೂ ದಾಖಲೆಗಳನ್ನು ತರಿಸಿಕೊಳ್ಳುವ ಅಥವಾ ಅಧಿಕಾರಿಗಳನ್ನು ಕರೆಸಿ ಸಾಕ್ಷಿ ಪಡೆಯುವ ಅಧಿಕಾರ ವ್ಯಾಪ್ತಿ ಇಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್, ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಸಹಕಾರ ಸಂಘಗಳ ನಿಬಂಧಕರು ಬರೆದಿದ್ದ ಪತ್ರವನ್ನು ರದ್ದುಪಡಿಸಿದೆ.

ವಿಧಾನ ಮಂಡಲದ ಕಾಗದ ಪತ್ರ ಸಮಿತಿಗೆ ಮಾಹಿತಿ ಒದಗಿಸಬೇಕಿರುವುದರಿಂದ ಕಳೆದ 5 ವರ್ಷಗಳ ಲಾಭ ಗಳಿಕೆ, ಸಾಲ ನೀಡಿಕೆ, ಸಾಲ ವಸೂಲಾತಿ, ಠೇವಣಿ ಮೊತ್ತ ಮತ್ತಿತರ ವಹಿವಾಟಿನ ವಿವರಗಳನ್ನು ಒದಗಿಸುವಂತೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದ ಬಂದಿದ್ದ ಪತ್ರ ಪ್ರಶ್ನಿಸಿ ದಕ್ಷಿಣ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಕೆ ಗೋಪಾಲಕೃಷ್ಣ ಭಟ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಕಾಗದ ಪತ್ರಗಳ ಸಮಿತಿಯ ರಚನೆ ಮತ್ತು ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 290 ಮತ್ತು 291ರ ಪ್ರಕಾರ ಸಭೆಯಲ್ಲಿ (ಸದನದಲ್ಲಿ) ಮಂಡಿಸಲಾದ ಕಾಗದಪ್ರಗಳನ್ನು ಪರಿಶೀಲಿಸಿ ಸಮಿತಿ ವರದಿ ಸಲ್ಲಿಸಬೇಕು. ಅದನ್ನು ಹೊರತುಪಡಿಸಿ ಯಾರಿಂದಲಾದರೂ ದಾಖಲೆ ಅಥವಾ ಮಾಹಿತಿಗಳನ್ನು ಸ್ವತಃ ತರಿಸಿಕೊಳ್ಳುವುದು, ಅಧಿಕಾರಿಗಳನ್ನು ಕರೆಸಿಕೊಂಡು ಸಾಕ್ಷಿ ಹೇಳಿಸಿಕೊಳ್ಳುವುದು ಕಾಗದಪತ್ರ ಸಮಿತಿಯ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ‘ಸಭೆಯಲ್ಲಿ ಮಂಡಿಸಲಾದ ಕಾಗದ ಪತ್ರಗಳು’ ಅನ್ನುವುದು ಭೂತಕಾಲ ಸೂಚಕವಾಗಿದೆ. ದಾಖಲೆಗಳನ್ನು ತರಿಸಿಕೊಳ್ಳುವುದು ಅಂದರೆ ಭವಿಷ್ಯಕಾಲ ಸೂಚಕವಾಗಿದೆ. ಸಭೆಯ ಮುಂದೆ ಮಂಡಿಸಲಾದ ಕಾಗದ ಪತ್ರಗಳಷ್ಟೇ ಸಮಿತಿಯ ಪರಿಶೀಲನಾ ವ್ಯಾಪ್ತಿ ಹೊಂದಿರುತ್ತವೆ, ಹೊರತು, ತರಿಸಿಕೊಂಡು ಅಥವಾ ತರಿಸಿಕೊಳ್ಳಬಹುದಾದ ಕಾಗದ ಪತ್ರಗಳು ಸಮಿತಿಯ ಪರಿಶೀಲನಾ ವ್ಯಾಪ್ತಿಗೆ ಬರುವುದಿಲ್ಲ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅದೇ ರೀತಿ ಈ ಸಂಬಂಧ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಪತ್ರ ಹಾಗೂ ಇಮೇಲ್ ರದ್ದುಪಡಿಸಿ ಆದೇಶಿಸಿದೆ.

ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿಯ 2025ರ ಏಪ್ರಿಲ್ 4ರಂದು ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಕಳೆದ 5 ವರ್ಷಗಳ ಲಾಭ ಗಳಿಕೆ, ಸಾಲ ನೀಡಿಕೆ, ಸಾಲ ವಸೂಲಾತಿ, ಠೇವಣಿ ಮೊತ್ತ ಮತ್ತಿತರ ವಹಿವಾಟಿನ ವಿವರಗಳನ್ನು 2025ರ ಏಪ್ರಿಲ್ 15ರೊಳಗೆ ಒದಗಿಸುವಂತೆ ಸಹಕಾರ ಸಂಘಗಳ ನಿಬಂಧಿಕರಿಗೆ ಸೂಚಿಸಲಾಗಿತ್ತು. ಅದರಂತೆ ಅದೇ ದಿನ ಸಹಕಾರ ಸಂಘಗಳ ನಿಬಂಧಕರು, ಸಹಕಾರ ಸಂಘಗಳ ಮೈಸೂರು ವಲಯದ ಜಂಟಿ ನಿರ್ದೇಶಕರಿಗೆ ಪತ್ರ ಬರೆದು ಬ್ಯಾಂಕಿನಿಂದ ಮಾಹಿತಿ ತರಿಸಿಕೊಡುವಂತೆ ಸೂಚಿಸಿದ್ದರು.

ಇದನ್ನು ಆಧರಿಸಿ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರು ಏಪ್ರಿಲ್ 5ರಂದು ಬ್ಯಾಂಕಿಗೆ ಇಮೇಲ್ ಕಳಿಸಿ ಮಾಹಿತಿ ಒದಗಿಸಲು ಸೂಚಿಸಿದ್ದರು. ಅದನ್ನು ಪ್ರಶ್ನಿಸಿದ ಅರ್ಜಿದಾರರು, ಮಾಹಿತಿ ಕೇಳುವ ಮತ್ತು ದಾಖಲೆಗಳನ್ನು ತರಿಸಿಕೊಳ್ಳುವ ಅಧಿಕಾರ ಕಾಗದ ಪತ್ರ  ಸಮಿತಿಗೆ ಇಲ್ಲ. ಆದ್ದರಿಂದ, ಸಹಕಾರ ಸಂಘಗಳು ನಿಬಂಧಕರು ಜಂಟಿ ನಿಬಂಧಕರಿಗೆ ಮೇ 4ರಂದು ಬರೆದ ಪತ್ರ, ಹೆಚ್ಚುವರಿ ಸಹಕಾರಿ ನಿಬಂಧಕರು ಏಪ್ರಿಲ್ 5ರಂದು ಕಳಿಸಿರುವ ಇಮೇಲ್ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಪತ್ರ ಹಾಗೂ ಇಮೇಲ್‌ಗೆ ಈ ಹಿಂದೆ ನ್ಯಾಯಾಲಯ ತಡೆ ನೀಡಿತ್ತು. ಇದೀಗ ಅಂತಿಮವಾಗಿ ಅದನ್ನು ರದ್ದುಪಡಿಸಿ ಆದೇಶಿಸಿದೆ. ಅರ್ಜಿದಾರರ ಪರ ವಕೀಲ ರಕ್ಷಿತ್ ಕುಮಾರ್ ವಾದಿಸಿದ್ದರು.