Supreme Court, CBSE Exams 
ಸುದ್ದಿಗಳು

ಸಿಬಿಎಸ್‌ಇ ಆಫ್‌ಲೈನ್‌ ಪರೀಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ 1,152 ಖಾಸಗಿ ವಿದ್ಯಾರ್ಥಿಗಳು

ತಮಗೆ 1,149 ವಿದ್ಯಾರ್ಥಿಗಳ ಬೆಂಬಲವಿದೆ ಎಂದಿರುವ ಮೂವರು ಅರ್ಜಿದಾರ ವಿದ್ಯಾರ್ಥಿಗಳು ಎಲ್ಲರ ಹೆಸರುಗಳನ್ನೂ ಮನವಿಯಲ್ಲಿ ನಮೂದಿಸಿದ್ದಾರೆ.

Bar & Bench

ಕೋವಿಡ್‌ ಹಿನ್ನೆಲೆಯಲ್ಲಿ ಆಫ್‌ಲೈನ್‌ ಮೂಲಕ ಪರೀಕ್ಷೆಗಳನ್ನು ನಡೆಸುವ ಸಿಬಿಎಸ್‌ಇ ನಿರ್ಧಾರವನ್ನು ಪ್ರಶ್ನಿಸಿ 12ನೇ ತರಗತಿಯ ಖಾಸಗಿ ಮತ್ತು ಕಂಪಾರ್ಟ್‌ಮೆಂಟ್‌ (ಪೂರಕ ಪರೀಕ್ಷೆ) ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

10 ಮತ್ತು 12ನೇ ತರಗತಿಯ ಸಾಮಾನ್ಯ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪರೀಕ್ಷೆಗಳನ್ನು ರದ್ದುಗೊಳಿಸಿದ್ದು, ಖಾಸಗಿ/ಪತ್ರಚಾರ್‌/ಎರಡನೇ ಪ್ರಯತ್ನದ ಕಂಪಾರ್ಟ್‌ಮೆಂಟ್‌ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಮೂಲಕ ಪರೀಕ್ಷೆ ನಡೆಸುವ ಕ್ರಮವು ಅಸಮಾನತೆಯಿಂದ ಕೂಡಿದೆ ಎಂದು ವಕೀಲರಾದ ಮಂಜು ಜೆಟ್ಲೆ ಮೂಲಕ ಮೂವರು ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಖಾಸಗಿ/ಪತ್ರಚಾರ್‌/ಎರಡನೇ ಪ್ರಯತ್ನದ ಕಂಪಾರ್ಟ್‌ಮೆಂಟ್‌ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವಂತೆ ಒತ್ತಾಯಿಸುವ ಮೂಲಕ ಸಿಬಿಎಸ್‌ಇ, ವಿದ್ಯಾರ್ಥಿಗಳ ಜೀವವನ್ನು ಒತ್ತಡಕ್ಕೆ ಸಿಲುಕಿಸಿದೆ ಎಂದು ವಾದಿಸಲಾಗಿದೆ. ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಈ ಮಧ್ಯಪ್ರವೇಶ ಮನವಿ ಸಲ್ಲಿಸಲಾಗಿದೆ.

ತಮಗೆ 1,149 ವಿದ್ಯಾರ್ಥಿಗಳ ಬೆಂಬಲವಿದೆ ಎಂದಿರುವ ಮೂವರು ಅರ್ಜಿದಾರ ವಿದ್ಯಾರ್ಥಿಗಳು ಎಲ್ಲರ ಹೆಸರುಗಳನ್ನೂ ಮನವಿಯಲ್ಲಿ ನಮೂದಿಸಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭೌತಿಕ ಪರೀಕ್ಷೆ ನಡೆಸುವುದು ಸರಿಯಲ್ಲ. ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳು ಹೊರಗಿನ ವಾತಾವರಣಕ್ಕೆ ತೆರೆದುಕೊಳ್ಳುವುದರಿಂದ ರೋಗಕ್ಕೆ ತುತ್ತಾಗಿ, ಅವರ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಹೇಳಲಾಗಿದೆ. ಹೀಗಾಗಿ, ಸಿಬಿಎಸ್‌ಇ ನಿರ್ಧಾರವು ಮೇಲ್ನೋಟಕ್ಕೆ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸಲಿದ್ದು, ಸ್ವೇಚ್ಛೆಯಿಂದ ಕೂಡಿದೆ ಎಂದು ವಿವರಿಸಲಾಗಿದೆ.

ಸಿಎಲ್‌ಎಟಿ, ನೀಟ್‌ ಇತ್ಯಾದಿ ಪ್ರವೇಶ ಪರೀಕ್ಷೆಗಳ ದಿನಾಂಕ ಪ್ರಕಟಿಸಲಾಗಿದೆ. ಮಂಡಳಿ ಪರೀಕ್ಷೆಗಳ ದಿನಾಂಕವನ್ನು ತಡೆಹಿಡಿಯುವುದರಿಂದ ರಾಷ್ಟ್ರೀಯ ಮಟ್ಟದಲ್ಲಿ ಇತರೆ ವಿದ್ಯಾರ್ಥಿಗಳೊಂದಿಗೆ ಪ್ರವೇಶ ಪರೀಕ್ಷೆಯಲ್ಲಿ ಸ್ಪರ್ಧೆ ಮಾಡುವ ಸಮಾನ ಅವಕಾಶವನ್ನು 12ನೇ ತರಗತಿಯ ಖಾಸಗಿ/ಪತ್ರಚಾರ್‌/ಎರಡನೇ ಪ್ರಯತ್ನದ ಕಂಪಾರ್ಟ್‌ಮೆಂಟ್‌ ವಿದ್ಯಾರ್ಥಿಗಳಿಂದ ಕಸಿದುಕೊಂಡಂತಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ವಿಭಾಗದ ವಿದ್ಯಾರ್ಥಿಗಳ ವಿಚಾರಣೆ ಆಲಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಸುಪ್ರೀಂ ಕೋರ್ಟ್‌ ಸೋಮವಾರ ಪ್ರಕರಣದ ವಿಚಾರಣೆ ನಡೆಸಲಿದೆ.