Supreme Court
Supreme Court 
ಸುದ್ದಿಗಳು

ಅನುಕಂಪಾಧಾರಿತ ನೇಮಕಾತಿಯನ್ನು ಗಣನೀಯ ಕಾಲಾವಧಿ ಸಂದ ಬಳಿಕ ಕೋರಲಾಗದು: ಸುಪ್ರೀಂ ಕೋರ್ಟ್‌

Bar & Bench

ಉದ್ಯೋಗಿಯು ಮೃತ ಪಟ್ಟು ಗಣನೀಯ ಕಾಲಾವಧಿ ಸಂದ ನಂತರ ಆ ಉದ್ಯೋಗಿಯ ಹತ್ತಿರದ ಸಂಬಂಧಿಯು ಅನುಕಂಪದ ಆಧಾರದಲ್ಲಿ ನೇಮಕಾತಿಯನ್ನು ಕೋರಲಾಗದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಪುನರುಚ್ಚರಿಸಿದೆ (ಭಾರತೀಯ ಸ್ಟೀಲ್‌ ಪ್ರಾಧಿಕಾರ ವರ್ಸಸ್ ಗೌರಿ ದೇವಿ).

ಭಾರತೀಯ ಸ್ಟೀಲ್‌ ಪ್ರಾಧಿಕಾರದ (ಸೈಲ್) ಉದ್ಯೋಗಿಯೊಬ್ಬರು ಮೃತಪಟ್ಟು ಹದಿನೆಂಟು ವರ್ಷಗಳು ಸಂದ ನಂತರ ಅವರ ಎರಡನೆಯ ಮಗ ಅನುಕಂಪದ ಆಧಾರದಲ್ಲಿ ಉದ್ಯೋಗವನ್ನು ಕೋರಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಆಲಿಸಿತು.

ಈ ಹಿಂದೆ ಉದ್ಯೋಗಿ ಮೃತರಾದ ಎರಡು ವರ್ಷದ ನಂತರ ಮೊದಲನೇ ಮಗನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗವನ್ನು ನೀಡುವ ಸಂಬಂಧ ಸೆಪ್ಟೆಂಬರ್ 1,‌ 1975ರ ನಿಯಮಗಳಿಗೆ ಅನುಗುಣವಾಗಿ ಸಾರ್ವಜನಿಕ ವಲಯ ಉದ್ದಿಮೆಯಾದ ಸೈಲ್‌ ನಿರಾಕರಿಸಿತ್ತು. ಇದಾದ ಹದಿನೆಂಟು ವರ್ಷಗಳ ನಂತರ ಎರಡನೆಯ ಮಗನಿಗೆ ಉದ್ಯೋಗವನ್ನು ನೀಡುವಂತೆ ಕೋರಿ ಮೃತರ ಪತ್ನಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಎರಡನೇ ಮಗನಿಗೆ ಉದ್ಯೋಗವನ್ನು ನೀಡುವ ವಿಚಾರವನ್ನು ಮರುಪರಿಶೀಲಿಸುವಂತೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಒಡಿಶಾ ಹೈಕೋರ್ಟ್‌ ಸಹ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸೈಲ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಪ್ರಕರಣವನ್ನು ಆಲಿಸಿದ ನ್ಯಾ. ಎಂ ಆರ್‌ ಶಾ ಮತ್ತು ನ್ಯಾ. ಸಂಜೀವ್‌ ಖನ್ನಾ ಅವರಿದ್ದ ಪೀಠವು ಪ್ರಕರಣವು ಸೀಮಿತವಾಗಿದೆ. ಹದಿನೆಂಟು ವರ್ಷ ಸಂದ ಬಳಿಕವೂ ಅನುಕಂಪದ ಆಧಾರದಲ್ಲಿ ಎರಡನೆಯ ಮಗನಿಗೆ ಉದ್ಯೋಗ ನೀಡಲು ನಿರ್ದೇಶಿಸಿರುವ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿರುವುದು “ದುರದೃಷ್ಟಕರ” ಎಂದು ಅಭಿಪ್ರಾಯಪಟ್ಟಿತು. ಹೀಗೆ ಎತ್ತಿ ಹಿಡಿಯಲು ಯಾವುದೇ ನಿರ್ದಿಷ್ಟ ಸ್ವತಂತ್ರ ಅಂಶಗಳನ್ನು ಹೈಕೋರ್ಟ್‌ ಉಲ್ಲೇಖಿಸಿಲ್ಲ ಎಂದು ದಾಖಲಿಸಿತು.

ಪಕ್ಷಕಾರರ ಪರವಾಗಿ ಸಲ್ಲಿಸಲಾಗಿರುವ ಹೇಳಿಕೆಗಳನ್ನು ಉದ್ಧರಿಸಿರುವುದರ ಹೊರತಾಗಿ, ಪ್ರಕರಣದ ಅರ್ಹತೆಯ ಬಗ್ಗೆಯಾಗಲಿ, ಅರ್ಜಿ ಸಲ್ಲಿಕೆಯಲ್ಲಿನ ವಿಳಂಬದ ಬಗ್ಗೆಯಾಗಲಿ ಯಾವುದೇ ಚರ್ಚೆಯನ್ನು ನ್ಯಾಯಾಲಯ ಮಾಡಿಲ್ಲದೆ ಇರುವ ಬಗ್ಗೆ ಪೀಠವು ಅಚ್ಚರಿ ವ್ಯಕ್ತಪಡಿಸಿತು.

ಪಂಜಾಬ್‌ ವಿದ್ಯುಚ್ಛಕ್ತಿ ಮಂಡಳಿ ನಿಯಮಿತ ಮತ್ತು ಇತರರು ವರ್ಸಸ್‌ ನಿರ್ವಲ್‌ ಸಿಂಗ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ಮತ್ತು ಇತರರು ವರ್ಸಸ್‌ ಸಜ್ಜದ್‌ ಅಹಮದ್‌ ಮೀರ್‌ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದ ಪೀಠವು ಈ ಆಧಾರದಲ್ಲಿ ಅನುಕಂಪಾಧಾರಿತ ನೇಮಕಾತಿಯನ್ನು ಪಡೆಯಲು ಅರ್ಜಿದಾರರು ಅರ್ಹರಲ್ಲ ಎಂದಿತು. ಆ ಮೂಲಕ ಒಡಿಶಾ ಹೈಕೋರ್ಟ್‌ ಹಾಗೂ ಕೇಂದ್ರೀಯ ಆಡಳಿತ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಬದಿಗೆ ಸರಿಸಿತು.