Karnataka High Court 
ಸುದ್ದಿಗಳು

“ದೂರುದಾರೆಗೆ 27 ವರ್ಷ, ಸಂಬಂಧವು ಮೇಲ್ನೋಟಕ್ಕೆ ಒಪ್ಪಿತ:” ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌

ಮಹಿಳೆಗೆ 27 ವರ್ಷವಾಗಿದ್ದು, ಆರೋಪಿಯ ಜೊತೆ ಲೈಂಗಿಕ ಸಂಬಂಧ ಹೊಂದುವುದರ ಪರಿಣಾಮ ಏನಾಗುತ್ತದೆ ಎಂದು ಅವರಿಗೆ ತಿಳಿದಿತ್ತು ಎಂದು ಪೀಠ ಹೇಳಿದೆ.

Bar & Bench

ದೂರುದಾರೆ ಸಂತ್ರಸ್ತೆ ಮತ್ತು ಆರೋಪಿಯ ನಡುವಿನ ದೈಹಿಕ ಸಂಬಂಧವು ಒಪ್ಪಿತವಾಗಿತ್ತು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದಿರುವ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಅತ್ಯಾಚಾರ ಪ್ರಕರಣವೊಂದರ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

ದೂರುದಾರೆಯ ಮೇಲೆ ಅತ್ಯಾಚಾರ ಎಸಗಿ, ಆಕೆ ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ವಿವಾಹವಾಗಲಾಗದು ಎಂದು ನಿರಾಕರಿಸಿದ ಹಾಗೂ ಸಂತ್ರಸ್ತೆಯ ಕತ್ತು ಇಸುಕಿ ಕೊಲೆ ಮಾಡಲು ಯತ್ನಿಸಿದ್ದ ಆರೋಪ ಎದುರಿಸುತ್ತಿರುವ ಮೇಲ್ಮನವಿದಾರನಿಗೆ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ.

“ಮಹಿಳೆಗೆ 27 ವರ್ಷವಾಗಿದ್ದು, ಎರಡನೇ ಬಾರಿಗೆ ಅವರು ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಮೇಲ್ಮನವಿದಾರನ ಜೊತೆ ದೈಹಿಕ ಸಂಬಂಧ ಹೊಂದಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದು ಆಕೆಗೆ ತಿಳಿದಿದೆ. ಮೇಲ್ಮನವಿದಾರ ಸಂತ್ರಸ್ತೆಯ ಜೊತೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ ಎಂಬುದನ್ನು ಈ ಹಂತದಲ್ಲಿ ನಂಬಲು ಕಷ್ಟವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಬಜಾಜ್‌ ಫೈನಾನ್ಸ್‌ ಲಿಮಿಟೆಡ್‌ನಲ್ಲಿ ಮೇಲ್ಮನವಿದಾರನು ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದು, ಸಂತ್ರಸ್ತೆಯು ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮೇಲ್ಮನವಿದಾರ ಒತ್ತಾಯದಿಂದ ಆಕೆಯ ಜೊತೆ ಸಂಭೋಗ ನಡೆಸಿದ್ದ. ಆಕೆಯ ಜೊತೆ ಖಾಸಗಿಯಾಗಿ ಕಳೆದಿದ್ದ ಕ್ಷಣಗಳನ್ನು ವಿಡಿಯೊ ಮಾಡಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತೆ ಆರೋಸಿದ್ದಾರೆ.

ಸಂತ್ರಸ್ತೆಯು ಎರಡು ಬಾರಿ ಗರ್ಭ ಧರಿಸಿದ್ದು, ಮೇಲ್ಮನವಿದಾರರ ಒತ್ತಾಯದ ಮೇರೆಗೆ ಗರ್ಭಪಾತ ಮಾಡಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. 2021ರ ಜುಲೈ 10ರಂದು ಆಕೆಯು ಮಾದಿಗ ಜಾತಿಗೆ ಸೇರಿದ್ದರಿಂದ ಮದುವೆಯಾಗಲು ಮೇಲ್ಮನವಿದಾರ ನಿರಾಕರಿಸಿ, ಕತ್ತು ಇಸುಕಿ ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆಯು ಆತ್ಮಹತ್ಯೆಗೆ ಯತ್ನಿಸಿದ್ದು, 2021ರ ಸೆಪ್ಟೆಂಬರ್ 6ರಂದು‌ ಆಕೆ ಪೊಲೀಸರಿಗೆ ದೂರು ನೀಡಿದ್ದರು.