High Court of Karnataka 
ಸುದ್ದಿಗಳು

ಹೈಕೋರ್ಟ್‌ ಕಾನೂನು ಘಟಕದ ಜಂಟಿ ರಿಜಿಸ್ಟ್ರಾರ್‌ರಿಂದ ದೂರು, ವಕೀಲೆ ದಯೀನಾ ಬಾನು ವಿರುದ್ದ ಎಫ್‌ಐಆರ್‌

ಜಾಮೀನು ಮಂಜೂರು ಮಾಡಲು ನ್ಯಾಯಮೂರ್ತಿ ಸಂದೇಶ್‌ ಅವರು ₹50 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ವಕೀಲೆ ದಯೀನಾ ಬಾನು ಅವರು ಕೊಲೆ ಆರೋಪಿ ವಿಷ್ಣು ಅಲಿಯಾಸ್‌ ವಿಷ್ಣುದೇವನ್‌ ತಾಯಿ ಥೆರೆಸಾ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ.

Bar & Bench

ಕೊಲೆ ಆರೋಪಿಗೆ ಜಾಮೀನು ಮಂಜೂರು ಮಾಡಲು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರು ₹50 ಲಕ್ಷ ಲಂಚ ನಿರೀಕ್ಷಿಸುತ್ತಿದ್ದಾರೆ ಎಂದು ಕೊಲೆ ಆರೋಪಿಯ ತಾಯಿಗೆ ತಿಳಿಸಿದ್ದ ವಕೀಲೆ ಬಿ ಎಂ ದಯೀನಾ ಬಾನು ವಿರುದ್ದ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ವಂಚನೆ ಆರೋಪದ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಜಾಮೀನು ಮಂಜೂರು ಮಾಡಲು ನ್ಯಾಯಮೂರ್ತಿ ಸಂದೇಶ್‌ ಅವರು ₹50 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ವಕೀಲೆ ದಯೀನಾ ಬಾನು ಅವರು ಕೊಲೆ ಆರೋಪಿ ವಿಷ್ಣು ಅಲಿಯಾಸ್‌ ವಿಷ್ಣುದೇವನ್‌ರ ತಾಯಿ ಥೆರೆಸಾ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಕ್ರಮಕೈಗೊಳ್ಳುವಂತೆ ಕೋರಿ ಥೆರೆಸಾ ಅವರು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ಗೆ ದೂರು ನೀಡಿದ್ದರು. ಈ ಸಂಬಂಧ ಜಾಮೀನು ಕೋರಿರುವ ಅರ್ಜಿಯ ದಾಖಲೆ ಪಡೆದು ದಯೀನಾ ಬಾನು ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನ್ಯಾಯಮೂರ್ತಿಗಳು ಆದೇಶಿಸಿದ್ದರು. ಇದರ ಬೆನ್ನಿಗೇ ದಯೀನಾ ಬಾನು ವಿರುದ್ಧ ಮುಂದಿನ ಕ್ರಮಕ್ಕಾಗಿ ಹೈಕೋರ್ಟ್‌ನ ಕಾನೂನು ಘಟಕದ ಜಂಟಿ ರಿಜಿಸ್ಟ್ರಾರ್‌ ರಾಜೇಶ್ವರಿ ಅವರು ದೂರು ನೀಡಿದ್ದರು.

ಎಫ್‌ಐಆರ್‌ನಲ್ಲಿ ಏನಿದೆ: ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಿಳಿಸಿರುವಂತೆ ಥೆರೆಸಾ ಅವರ ಪುತ್ರ 24 ವರ್ಷದ ವಿಷ್ಣು ಅಲಿಯಾಸ್‌ ವಿಷ್ಣುದೇವನ್‌ ಅವರು ಮೂರು ವರ್ಷಗಳಿಂದ (ಕೊಲೆ ಆರೋಪದಲ್ಲಿ) ಜೈಲಿನಲ್ಲಿದ್ದು, ಆತನಿಗೆ ಜಾಮೀನು ದೊರಕಿಸಲು ವಕೀಲೆ ಮರೀನಾ ಫರ್ನಾಂಡೀಸ್‌ ₹10 ಲಕ್ಷ ಪಡೆದಿದ್ದರು. ಜಾಮೀನು ಸಿಗದೇ ಇದ್ದುದರಿಂದ ಮರೀನಾ ಫರ್ನಾಂಡೀಸ್‌ ಅವರು ₹9 ಲಕ್ಷಕ್ಕೆ ಮೂರು ಚೆಕ್‌ಗಳನ್ನು ನೀಡಿದ್ದಾರೆ. ಆದರೆ, ಇದುವರೆಗೂ ಹಣ ಹಿಂದಿರುಗಿಸಿಲ್ಲ.

ಮರೀನಾ ಫರ್ನಾಂಡೀಸ್‌ ಅವರು ಆರತಿ ಎಂಬಾಕೆಯನನ್ನು ಪರಿಚಿಸಿದ್ದರು. ಆರತಿಯು ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರು ಪರಿಚಯಿವಿದೆ ಎಂದು ಹೇಳಿಕೊಂಡು ₹72 ಸಾವಿರವನ್ನು ತನ್ನಿಂದ ಪಡೆದುಕೊಂಡಿದ್ದು, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದಯೀನಾಬಾನು ಅವರು ನ್ಯಾಯಾಧೀಶರು ₹50 ಲಕ್ಷ ನಿರೀಕ್ಷಿಸಿರುತ್ತಾರೆ. ಇಲ್ಲವಾದಲ್ಲಿ ಜಾಮೀನು ಪ್ರಕ್ರಿಯೆಯನ್ನು ಬೇರೆ ವಕೀಲರಲ್ಲಿ ಮಾಡಿಸಿಕೊಳ್ಳುವಂತೆ ಸೂಚಿಸಿರುತ್ತಾರೆ ಎಂದಿದ್ದರು. ಈ ಸಂಬಂಧ ಥೆರೆಸಾ ಅವರು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ಗೆ ಡಿಸೆಂಬರ್‌ 18ರಂದು ದೂರು ನೀಡಿದ್ದರು.

ಸದರಿ ವಿಷಯದ ಕುರಿತು ಸಿಆರ್‌ಎಲ್‌ಪಿ 11259/2024 ದಾಖಲೆಗಳನ್ನು ಪಡೆದು ದಯೀನಾ ಬಾನು ವಿರುದ್ದ ಕ್ರಮಕೈಗೊಳ್ಳುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಹೈಕೋರ್ಟ್‌ ಕಾನೂನು ಘಟಕದ ಜಂಟಿ ರಿಜಿಸ್ಟ್ರಾರ್‌ ಎಂ ರಾಜೇಶ್ವರಿ ರವರು ವಕೀಲೆ ದಯೀನ್‌ ಬಾನು ಅವರ ಕ್ರಮಕೈಗೊಳ್ಳಲು ವಿಧಾನಸೌಧ ಠಾಣೆಯ ಪೊಲೀಸರಿಗೆ ಡಿಸೆಂಬರ್‌ 20ರಂದು ದೂರು ನೀಡಿದ್ದರು.

ಇದರ ಅನ್ವಯ ದಯೀನಾ ಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 318(4) (ವಂಚನೆ) ಪ್ರಕರಣ ದಾಖಲಿಸಲಾಗಿದೆ.