Supreme Court 
ಸುದ್ದಿಗಳು

ಲೈಂಗಿಕ ಕಿರುಕುಳ ದೂರುಗಳ ವಿಚಾರಣೆ ನಡೆಸುತ್ತಿರುವ ದೂರು ಸಮಿತಿ ಸಾಕ್ಷಿಗಳಿಗೆ ಪ್ರಶ್ನೆ ಕೇಳಬಹುದು: ಸುಪ್ರೀಂ ಕೋರ್ಟ್

ಗುವಾಹಟಿ ಹೈಕೋರ್ಟ್ ನೀಡಿದ್ದ ಆದೇಶ ರದ್ದುಗೊಳಿಸಿದ ಪೀಠ “ನ್ಯಾಯಾಂಗ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರಿಗೆ ಹೋಲಿಸಲಾಗುವ ದೂರು ಸಮಿತಿಗೆ ಈ ಅವಕಾಶ ಹೇಗೆ ನಿರಾಕರಿಸಲಾಗಿದೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ” ಎಂದಿತು.

Bar & Bench

ಔದ್ಯೋಗಿಕ ಸ್ಥಳದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಪರಿಶೀಲಿಸುವ ದೂರು ಸಮಿತಿಗಳಿಗೆ ತನಿಖೆ ವೇಳೆ ಸಾಕ್ಷಿಗಳನ್ನು ಪ್ರಶ್ನಿಸುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ [ಭಾರತದ ಒಕ್ಕೂಟ ಮತ್ತು ಅಥವಾ ದಿಲೀಪ್ ಪಾಲ್ ನಡುವಣ ಪ್ರಕರಣ].

ಅಂತಹ ಪ್ರಕ್ರಿಯೆಗಳು ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಮಾನವಾಗಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಒತ್ತಿ ಹೇಳಿತು.

"ಸಾಕ್ಷಿಗಳಿಗೆ ಪ್ರಶ್ನೆ ಕೇಳುವ ದೂರು ಸಮಿತಿಯ ಅಧಿಕಾರ ನಿರ್ಬಂಧಿಸಲು ಯಾವುದೇ ಶಾಸನಬದ್ಧ ನಿರ್ಬಂಧವಾಗಲೀ ಇಲ್ಲವೇ  ತರ್ಕವಾಗಲೀ ಇಲ್ಲ ಎಂದು ತೋರುತ್ತಿದೆ. ತನಿಖಾ ಪ್ರಾಧಿಕಾರವಾಗಿರುವ ದೂರು ಸಮಿತಿ ಒಂದರ್ಥದಲ್ಲಿ ನ್ಯಾಯಾಧೀಶರಿಗೆ ಸಮನಾಗಿರುತ್ತದೆ... ಸರಿಯಾದ, ನ್ಯಾಯೋಚಿತ ಮತ್ತು ಸಂಪೂರ್ಣ ವಿಚಾರಣೆ ನಡೆಯಬೇಕಾದರೆ ಪ್ರಶ್ನೆ ಕೇಳಲು ಅದಕ್ಕೆ ಅವಕಾಶ ನೀಡಬೇಕು” ಎಂದು ಪೀಠ ಹೇಳಿತು.

ದೂರು ಸಮಿತಿ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಪ್ರಶ್ನೆ ಕೇಳಿದ್ದರಿಂದ ಕೆಲವು ತನಿಖಾ ಪ್ರಕ್ರಿಯೆಗಳಿಗೆ ಭಂಗ ಬಂದಿತು ಎಂದು ಗುವಾಹಟಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸುವಾಗ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.

"ಹೈಕೋರ್ಟ್‌ ಅವಲೋಕನಗಳನ್ನು ಒಪ್ಪಿದರೆ, ಅದು ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗುತ್ತದೆ, ಆ ಮೂಲಕ ತನಿಖಾ ಪ್ರಾಧಿಕಾರವೆಂದು ಪರಿಗಣಿಸಲಾದ ದೂರುಗಳ ಸಮಿತಿಯು ಕೇವಲ ದಾಖಲಿಸಿಕೊಳ್ಳುವ ಯಂತ್ರವಾಗಿಬಿಡುತ್ತದೆ… ದೂರು ಸಮಿತಿ ಸಾಕ್ಷಿಗಳಿಗೆ ಪ್ರಶ್ನೆ ಕೇಳಲು ಸಾಧ್ಯವಿಲ್ಲ ಎನ್ನುವುದಾದರೆ ವಿಚಾರಣಾ ಪ್ರಾಧಿಕಾರ ಎಂದು ಪರಿಗಣಿಸಲಾದ ದೂರು ಸಮಿತಿ ಏತಕ್ಕಾಗಿ ಇದೆ ಎಂಬುದು ಅರ್ಥವಾಗುವುದಿಲ್ಲ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

"ಲೈಂಗಿಕ ಕಿರುಕುಳ"ದ ಸೋಗಿನಲ್ಲಿ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದು ನ್ಯಾಯ ವ್ಯವಸ್ಥೆಯನ್ನು ಅಣಕಿಸುವುದರಿಂದ ಅಂತಹ ದುರುಪಯೋಗದ ವಿರುದ್ಧ ಸುಪ್ರೀಂ ಕೋರ್ಟ್  ಎಚ್ಚರಿಕೆಯನ್ನೂ ನೀಡಿತು.

ಅಸ್ಸಾಂ ಸರ್ವೀಸ್‌ ಸೆಲೆಕ್ಷನ್‌ ಬೋರ್ಡ್‌ನ ಹಿರಿಯ ಅಧಿಕಾರಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರಿ ಆತನ ಮಹಿಳಾ ಸಹೋದ್ಯೋಗಿಯೊಬ್ಬರು ದೂರು ನೀಡಿದ್ದರು. ಆರೋಪಿ ತಪ್ಪಿತಸ್ಥ ಎಂದು ಪರಿಗಣಿಸಿದ ಕೇಂದ್ರೀಯ ದೂರು ಸಮಿತಿ ವಿಚಾರಣೆ ಪ್ರಕ್ರಿಯೆಯಲ್ಲಿ ನಿವೃತ್ತನಾಗಿದ್ದ ಅಧಿಕಾರಿಯ  ಪಿಂಚಣಿ, ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯುವಂತೆ ಶಿಫಾರಸು ಮಾಡಿತ್ತು.

ಇದನ್ನು ಪ್ರಶ್ನಿಸಿ ಆರೋಪಿ ಅಧಿಕಾರಿ ಗುವಾಹಟಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆತನ ಪರವಾಗಿ ತೀರ್ಪು ನೀಡಿದ ಹೈಕೋರ್ಟ್‌ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಪ್ರಕರಣದಲ್ಲಿ ಸಮಿತಿಯು ಪ್ರಾಸಿಕ್ಯೂಟರ್ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟಿತ್ತು. ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಅರ್ಜಿಯನ್ನು ಇದೀಗ ಸುಪ್ರೀಂ ಕೋರ್ಟ್‌ ಪುರಸ್ಕರಿಸಿದೆ.

ಶಿಸ್ತು ಸಮಿತಿಯ ವಿಚಾರಣೆ ವೇಳೆ, ಪುರಾವೆಯ ಮಾನದಂಡ ಎಂಬುದು "ಸಂಭವನೀಯತೆಗಳ ಪ್ರಾಶಸ್ತ್ಯ"ವಾಗಿರುತ್ತದೆ ಎಂದ ಸುಪ್ರೀಂ ಕೋರ್ಟ್ ನ್ಯಾಯಾಲಯಗಳು ಶಿಸ್ತು ಪ್ರಾಧಿಕಾರದ ತನಿಖೆ ಸರಿ ಇಲ್ಲದಿದ್ದಾಗ ಮತ್ತು ಯಾವುದೇ ಸಾಕ್ಷ್ಯ ಇಲ್ಲದಿದ್ದಾಗ ಮಾತ್ರ ಹಸ್ತಕ್ಷೇಪ ಮಾಡಲು ಸಾಧ್ಯ ಎಂಬುದಾಗಿ ತಿಳಿಸಿದೆ.

ಯಾವುದೇ ಪುರಾವೆಗಳಿಲ್ಲದ ಪ್ರಕರಣ ಇದಲ್ಲ ಎಂದು ನಿರ್ಧರಿಸಿರುವ ನ್ಯಾಯಾಲಯ ದೂರುದಾರರ ಆರೋಪಗಳನ್ನು ಸಾಕ್ಷಿಗಳು ರುಜುವಾತುಪಡಿಸಿದ್ದಾರೆ ಎಂದಿದೆ. ಹೀಗಾಗಿ ಕೇಂದ್ರ ಸರ್ಕಾರದ ಮೇಲ್ಮನವಿ ಪುರಸ್ಕರಿಸಿದ ಅದು ಆರೋಪಿಗಡೆ ದಂಡ ವಿಧಿಸಲು ಶಿಫಾರಸು ಮಾಡಿದ್ದ ದೂರು ಸಮಿತಿಯ ಆದೇಶವನ್ನು ಎತ್ತಿಹಿಡಿಯಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Union_of_India_and_ors_vs_Dilip_Paul.pdf
Preview