Calcutta High Court 
ಸುದ್ದಿಗಳು

ತ್ರಿಶೂಲಕ್ಕೊಂದು ಕಾಂಡೋಮ್: ವಿವಾದಿತ ಕಾವ್ಯದ ಬಗ್ಗೆ ವರದಿ ಸಲ್ಲಿಸಲು ಡಿಸಿಪಿಗೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶನ

ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದ ಕುರಿತು ನಡೆಸುತ್ತಿರುವ ತನಿಖೆಯ ಸಮಗ್ರ ವರದಿ ಸಲ್ಲಿಸುವಂತೆ ಗುಪ್ತಚರ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ.

Bar & Bench

ತ್ರಿಶೂಲಕ್ಕೆ ಕಾಂಡೋಮ್‌ ಹಾಕಬೇಕು ಎಂಬ ಬಂಗಾಳಿ ಕವಿ ಶ್ರೀಜಾತೋ ಬಂಡೋಪಾಧ್ಯಾಯ ಅವರ ವಿವಾದಾತ್ಮಕ ಕವಿತೆಗೆ ಸಂಬಂಧಿಸಿದಂತೆ ನಡೆದಿರುವ ತನಿಖೆಯ ಸಮಗ್ರ ವರದಿ ಸಲ್ಲಿಸುವಂತೆ ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶಿಸಿದೆ [ಬಿಪ್ಲಬ್ ಕುಮಾರ್ ಚೌಧರಿ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದ ಕುರಿತು ನಡೆಸುತ್ತಿರುವ ತನಿಖೆಯ ಸಮಗ್ರ ವರದಿ ಸಲ್ಲಿಸುವಂತೆ ಗುಪ್ತಚರ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ನ್ಯಾಯಮೂರ್ತಿ ರಾಜಶೇಖರ್ ಮಂಥಾ ಸೂಚಿಸಿದ್ದಾರೆ.

ವರದಿಯನ್ನು ಕೊಲ್ಕತ್ತಾ ಪೊಲೀಸ್ ಆಯುಕ್ತರು ಸರಿಯಾಗಿ ಪರಿಶೀಲಿಸಿ ಮುಂದಿನ ವಿಚಾರಣೆ ನಡೆಯಲಿರುವ ನವೆಂಬರ್ 17ರೊಳಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಈ ಹಿಂದೆ ಪ್ರಕರಣವನ್ನು ತನಿಖಾ ವಿಭಾಗದ ಡಿಸಿಪಿಗೆ, ಬಿಧಾನನಗರ ಪೊಲೀಸ್ ಆಯುಕ್ತರು ವರ್ಗಾಯಿಸಿದ್ದರು.   

ಕವಿ ಬಂಡೋಪಾಧ್ಯಾಯ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರೆನ್ನಲಾದ ಪ್ರಕರಣದ ಬಗ್ಗೆ 2017ರಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಸುವಂತೆ ಬಾರಕ್‌ಪೋರ್‌ನ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಈಗಾಗಲೇ ಸೂಚಿಸಿದ್ದರೂ ಅದನ್ನು ಪಾಲಿಸಲಾಗಿಲ್ಲ. ಪಶ್ಚಿಮ ಬಂಗಾಳ ಪೊಲೀಸರ ವಿಳಂಬದಿಂದಾಗಿ ನ್ಯಾಯಿಕ ಪ್ರಕ್ರಿಯೆಯಲ್ಲಿ ಹತಾಶತೆ ಮೂಡಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದು ಪ್ರತಿವಾದಿಯ ಪರವಾಗಿದ್ದಾರೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅರ್ಜಿದಾರ ಬಿಪ್ಲಬ್ ಕುಮಾರ್ ಚೌಧರಿ ದೂರಿದ್ದರು.

ತ್ರಿಶೂಲದ ಮಹತ್ವವನ್ನು ಮತ್ತು ಹಿಂದೂಗಳ ದೈವ ಶಿವ ಅದನ್ನ ಬಳಸುವ ಸಂದರ್ಭವನ್ನು ಅರ್ಜಿ ವಿವರಿಸಿದೆ. ತ್ರಿಶೂಲಕ್ಕೆ ಕಾಂಡೋಮ್ ಹಾಕಬೇಕು ಎಂಬ ಸಾಲು ಮಾನಹಾನಿಕರ ಮಾತ್ರವಲ್ಲ ಹಿಂದೂ ಸಮುದಾಯದ ಭಾವನೆಗೆ ಧಕ್ಕೆ ತರುತ್ತದೆ. ಹೀಗಾಗಿ ಬಾರಕ್‌ಪೋರ್‌ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.