ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ 
ಸುದ್ದಿಗಳು

ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಹೊರಗೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕರು

ಅನೂಪ್ ಬರನ್ವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಕಾಯಿದೆ- 2023 ರ ನಿಯಮಾವಳಿಗಳು ಉಲ್ಲಂಘಿಸಿವೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

Bar & Bench

ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವುದಕ್ಕಾಗಿ ಇತ್ತೀಚೆಗೆ ಜಾರಿಗೆ ತಂದ ಕಾಯಿದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕಾಯಿದೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ತತ್ವವನ್ನು ಉಲ್ಲಂಘಿಸುತ್ತದೆ. ಏಕೆಂದರೆ ಇದು ಚುನಾವಣಾ ಆಯೋಗದ ಸದಸ್ಯರ ನೇಮಕಾತಿಗೆ "ಸ್ವತಂತ್ರ ಕಾರ್ಯವಿಧಾನವನ್ನು" ಒದಗಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರಾದ ಡಾ. ಜಯಾ ಠಾಕೂರ್ ಮತ್ತು ಸಂಜಯ್ ನಾರಾಯಣರಾವ್ ಮೆಶ್ರಮ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಲಾಗಿದೆ.

ಭಾರತದ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಯ ಪ್ರಕ್ರಿಯೆಯನ್ನು ವಿವರಿಸುವ ಕಾಯಿದೆಯ ಸೆಕ್ಷನ್‌ 7 ಮತ್ತು 8ಅನ್ನು ಅರ್ಜಿಯು ನಿರ್ದಿಷ್ಟವಾಗಿ ಪ್ರಶ್ನಿಸಿದೆ.

ಅರ್ಜಿಯ ಪ್ರಮುಖಾಂಶಗಳು

  • ಸಿಜೆಐ ಅವರನ್ನು ಹೊರಗಿಡುವುದರಿಂದ, ಅನೂಪ್ ಬರನ್ವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಕಾಯಿದೆ- 2023 ರ ನಿಯಮಾವಳಿಗಳು ಉಲ್ಲಂಘಿಸಿವೆ. ತೀರ್ಪಿನಲ್ಲಿ, ನೇಮಕಾತಿಯನ್ನು ಪ್ರಧಾನಿ, ಸಿಜೆಐ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಮಾಡಬೇಕು ಎಂದು ಆದೇಶಿಸಲಾಗಿತ್ತು.

  • ಸಿಜೆಐ ಅವರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡುವುದರಿಂದ ಸುಪ್ರೀಂ ಕೋರ್ಟ್‌ ತೀರ್ಪು ದುರ್ಬಲವಾಗಲಿದೆ. ಪ್ರಧಾನಿ ಮತ್ತು ಅವರ ನಾಮನಿರ್ದೇಶಿತರು ಯಾವಾಗಲೂ ನಿರ್ಣಾಯಕರಾಗುತ್ತಾರೆ.

  • ಡಾ. ಜಯಾ ಠಾಕೂರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಶಾಸಕಾಂಗವು ಉಲ್ಲಂಘಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅಧಿಕಾರ ಪ್ರತ್ಯೇಕತೆ ಎಂಬುದು ಸಂವಿಧಾನದ ಮೂಲ ರಚನೆಯ ಭಾಗವಾಗಿದೆ.

  • ಡಳಿತದ ಗುಣಮಟ್ಟ ಮತ್ತು ಪ್ರಜಾಪ್ರಭುತ್ವದ ಶಕ್ತಿಯನ್ನು ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಬಹುವಾಗಿ ನಿರ್ಧರಿಸುತ್ತದೆ.

  • ಚುನಾವಣಾ ಆಯೋಗದ ಹೆಚ್ಚಿನ ಸಾಂವಿಧಾನಿಕ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡರೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಅದರ ಸದಸ್ಯರ ನೇಮಕಾತಿ ಕಾರ್ಯವಿಧಾನದಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆ ಬಹಳ ನಿರ್ಣಾಯಕವಾಗುತ್ತದೆ.

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ (ನೇಮಕಾತಿ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ- 2023ರ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಹುದ್ದೆಗಳನ್ನು ಪ್ರಧಾನಿ, ಕೇಂದ್ರ ಕ್ಯಾಬಿನೆಟ್ ಸಚಿವರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿ ನೇಮಕ ಮಾಡಬಹುದಾಗಿದೆ.

ಮಸೂದೆಯನ್ನು ಕಳೆದ ತಿಂಗಳು ಸಂಸತ್ತು ಅಂಗೀಕರಿಸಿತ್ತು. ಡಿಸೆಂಬರ್ 29, 2023ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು.