ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಅನುಮತಿ ಪಡೆಯದೇ ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ವಿರುದ್ಧ ಪೊಲೀಸರು ಕ್ರಮ ಜರುಗಿಸದ ಪ್ರಕರಣ ಸಂಬಂಧ ರಾಜ್ಯ ಗೃಹ ಇಲಾಖೆ, ಪೊಲೀಸ್ ಮಹಾ ನಿರ್ದೇಶಕರು ಮತ್ತು ನಗರ ಪೊಲೀಸ್ ಆಯುಕ್ತರಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಪ್ರಕರಣ ಕುರಿತು ಹ್ಯಾರಿಸ್ ವಿರುದ್ಧ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಲು ರಾಜ್ಯ ಗೃಹ ಇಲಾಖೆ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶಿಸುವಂತೆ ಕೋರಿ ಜಯನಗರ ಮೊದಲನೇ ಬ್ಲಾಕ್ ನಿವಾಸಿಯಾದ ಭಜರಂಗದಳದ ನಿಕಟಪೂರ್ವ ಜಿಲ್ಲಾ ಸಂಯೋಜಕ ತೇಜಸ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯವು ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಖಮೇನಿ ಹತ್ಯೆ ಖಂಡಿಸಿ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಶಾಂತಿನಗರ ವಿಧಾನಸಭಾ ಕ್ಷೇತ್ರದ ಆನೆಪಾಳ್ಯ, ರಿಚ್ಮಂಡ್ ಸರ್ಕಲ್ ಮತ್ತಿತರ ಕಡೆ ಶಾಸಕ ಹ್ಯಾರಿಸ್ ನೇತೃತ್ವದಲ್ಲಿ ಮಾರ್ಚ್ 1ರಂದು ಸಂಜೆ 6.30ಕ್ಕೆ ನೂರಾರು ಜನ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸಲು ಪೊಲೀಸರಿಂದ ಪೂರ್ವಾನುಮತಿ ಪಡೆದಿಲ್ಲ. ಪ್ರತಿಭಟನೆಯಿಂದ ಸಂಚಾರ ದಟ್ಟಣೆ ಉಂಟಾಗಿ, ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲ ಆಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಅಲ್ಲದೇ, ಹ್ಯಾರಿಸ್ ವಿರುದ್ದ ಪೊಲೀಸ್ ಕಾನೂನು ಕ್ರಮ ಜರುಗಿಸಲು ಮಾರ್ಚ್ 2ರಂದು ಅಶೋಕ್ ನಗರ ಠಾಣೆ ಇನ್ಸ್‌ಪೆಕ್ಟರ್ ರವಿ ಅವರಿಗೆ ದೂರು ನೀಡಲಾಯಿತು. ಆದರೆ, ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಇನ್ಸ್‌ಪೆಕ್ಟರ್ ರವಿ ಹಾಗೂ ಹ್ಯಾರಿಸ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲು ಕೋರಿ 2026ರ ಮಾರ್ಚ್ 2ರಂದು ಸಲ್ಲಿಸಿದ ಮನವಿ ಪತ್ರ ಆಧರಿಸಿ ರಾಜ್ಯ ಗೃಹ ಇಲಾಖೆ ಮತ್ತು ಪೊಲೋಸ್ ಮಹಾ ನಿರ್ದೆಶಕರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ತಮ್ಮ ಮನವಿ ಪತ್ರ ಪರಿಗಣಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.