Congress MLA Satish Sail & Karnataka HC 
ಸುದ್ದಿಗಳು

[ಬೇಲೆಕೇರಿ ಅದಿರು ಕಳವು] ಶಾಸಕ ಸತೀಶ್‌ ಸೈಲ್‌, ಮೂವರು ಉದ್ಯಮಿಗಳಿಂದ ಶಿಕ್ಷೆ ರದ್ದತಿಗೆ ಮನವಿ: ಸಿಬಿಐಗೆ ನೋಟಿಸ್‌

ಇದೇ ಪ್ರಕರಣಕ್ಕೆ ಸಂಬಂಧಿಸಿದ ಇತರೆ ಎರಡು ಪ್ರಕರಣಗಳನ್ನು ನವೆಂಬರ್‌ 13ಕ್ಕೆ ವಿಚಾರಣೆಗೆ ನಿಗದಿಪಡಿಸಲಾಗಿದೆ. ಹೀಗಾಗಿ, ಅಂದು ಎಲ್ಲಾ ಪ್ರಕರಣದಲ್ಲಿ ಆದೇಶ ಮಾಡಲಾಗುವುದು ಎಂದಿರುವ ನ್ಯಾಯಾಲಯ.

Bar & Bench

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿರುವ ಶಿಕ್ಷೆ ಮತ್ತು ದಂಡದ ತೀರ್ಪನ್ನು ಬದಿಗೆ ಸರಿಸುವಂತೆ ಕೋರಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌, ಉದ್ಯಮಿಗಳಾದ ಸ್ವಸ್ತಿಕ್‌ ನಾಗರಾಜ್‌, ಕೆ ವಿ ಎನ್‌ ಗೋವಿಂದರಾಜ್‌ ಮತ್ತು ಚೇತನ್‌ ಶಾ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಗುರುವಾರ ಕೇಂದ್ರೀಯ ತನಿಖಾ ದಳಕ್ಕೆ ನೋಟಿಸ್‌ ಜಾರಿ ಮಾಡಿದೆ.

ಮೆಸರ್ಸ್‌ ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಪ್ರೈ ಲಿಮಿಟೆಡ್‌ ಮತ್ತು ಅದರ ಮಾಲೀಕ ಸತೀಶ್‌ ಸೈಲ್‌ ಪ್ರತ್ಯೇಕವಾಗಿ ಸಲ್ಲಿಸಿರುವ ಆರು ಅರ್ಜಿಗಳು, ಉದ್ಯಮಿಗಳಾದ ಸ್ವಸ್ತಿಕ್‌ ನಾಗರಾಜ್‌, ಕೆ ವಿ ಎನ್‌ ಗೋವಿಂದರಾಜ್‌ ಮತ್ತು ಚೇತನ್‌ ಶಾ ಹಾಗೂ ಆಶಾಪುರ ಮೈನ್‌ಚೆಮ್‌ ಲಿಮಿಟೆಡ್‌, ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು “ಇಂದು ಒಟ್ಟು 10 ಅರ್ಜಿಗಳು ಸಲ್ಲಿಕೆಯಾಗಿವೆ. ನವೆಂಬರ್‌ 12ರ ಬದಲಿಗೆ ಎಲ್ಲಾ ಅರ್ಜಿಗಳ ವಿಚಾರಣೆಯನ್ನು 14ಕ್ಕೆ ನಡೆಸಬೇಕು. ಸಿಆರ್‌ಪಿಸಿ ಸೆಕ್ಷನ್‌ 389 ಶಿಕ್ಷೆಯನ್ನು ಸ್ವಯಂಚಾಲಿತವಾಗಿ ಅಮಾನತಿನಲ್ಲಿಡಬೇಕು ಎಂದು ಹೇಳುವುದಿಲ್ಲ. ನಾಗೇಶ್‌ ಸಾಹೇಬ್ರು ಬಳ್ಳಾರಿ, ಸಂಡೂರಿಗೆ ಹೋಗಿಲ್ಲ. ಅಲ್ಲಿಗೆ ಹೋದರೆ ಏನಾಗಿದೆ ಎಂಬುದು ತಿಳಿಯುತ್ತದೆ” ಎಂದರು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಸಿಆರ್‌ಪಿಸಿ ಸೆಕ್ಷನ್‌ 389 ಅಡಿ ಶಿಕ್ಷೆಯು ಹತ್ತು ವರ್ಷ ಅಥವಾ ಜೀವಾವಧಿ ಇಲ್ಲದ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೋಟಿಸ್‌ ನೀಡಲೇಬೇಕಿಲ್ಲ. ಅವರು ಆಕ್ಷೇಪಣೆ ಸಲ್ಲಿಸುವುದೇ ಬೇಕಿಲ್ಲ. ಹೀಗಿರುವಾಗ, ಸಿಬಿಐ ವಕೀಲರು ಆಕ್ಷೇಪಣೆ ಸಲ್ಲಿಸಲು ಸಮಯ ಕೇಳುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ? ಅಂತಿಮವಾಗಿ ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇವೆ. ಮೇಲ್ಮನವಿ ಸಲ್ಲಿಕೆ ಮಾಡಿದಾಗ ವಿಚಾರಣಾಧೀನ ನ್ಯಾಯಾಲಯದ ಶಿಕ್ಷೆಯು ಸ್ವಯಂಚಾಲಿತವಾಗಿ ಅಮಾನತಾಗುತ್ತದೆ. ಗರಿಷ್ಠ ಶಿಕ್ಷೆಯು ಮೂರು ವರ್ಷ ಮಾತ್ರ ಇದೆ. ಇದಕ್ಕೆ ಮ್ಯಾಜಿಸ್ಟ್ರೇಟ್‌, ಸತ್ರ ನ್ಯಾಯಾಲಯದಲ್ಲಿ ಜಾಮೀನಾಗುತ್ತದೆ. ಹೀಗಿರುವಾಗ ಹೈಕೋರ್ಟ್‌ನಲ್ಲಿ ಜಾಮೀನು ಮಂಜೂರಾಗುವುದಿಲ್ಲವೇ?" ಎಂದು ವಾದಿಸಿದರು.

ಮುಂದುವರೆದು "ಸಿಆರ್‌ಪಿಸಿ ಸೆಕ್ಷನ್‌ 212 ಅಡಿ ಆರೋಪ ನಿಗದಿ ಮಾಡುವಾಗ ಐಪಿಸಿ ಸೆಕ್ಷನ್‌ 420 ಮತ್ತು 379 ಅಡಿ ಮಾತ್ರ ಆರೋಪ ನಿಗದಿ ಮಾಡಲಾಗಿದೆ. ವಿಚಾರಣಾಧೀನ ನ್ಯಾಯಾಧೀಶರು ಐಪಿಸಿ ಸೆಕ್ಷನ್‌ 420 ಅಡಿಯೂ ಆರೋಪ ನಿಗದಿಗೆ ಅನುಮತಿಸಿದ್ದಾರೆ. ಪ್ರಸಕ್ತ ಪ್ರಕರಣದಲ್ಲಿ ಸೆಕ್ಷನ್‌ 379 ಅನ್ವಯಿಸಲು, ಆಕ್ಷೇಪಿತ ಕಬ್ಬಿಣದ ಅದಿರಿನ ಮಾಲೀಕತ್ವವನ್ನು ಯಾರಾದರೂ ಹೊಂದಿರಬೇಕು. ಕಾನೂನಾತ್ಮಕವಾಗಿ ಅದು ಯಾರಿಗಾದರೂ ಸೇರಿರಬೇಕು" ಎಂದು ವಾದಿಸಿದರು.

ಅಲ್ಲದೆ, “ವಿಚಾರಣಾಧೀನ ನ್ಯಾಯಾಲಯದ 400 ಪುಟಗಳ ತೀರ್ಪು ಹೇಗಿದೆ ಎಂದರೆ ಎಡ ಮತ್ತು ಬಲಗಡೆ ಎರಡು ಇಂಚು ಜಾಗ ಬಿಡಲಾಗಿದೆ. ರಿಪೋರ್ಟೆಡ್‌ ತೀರ್ಪುಗಳ 20 ಪುಟಗಳನ್ನು ತೆಗೆದು ಹಾಕಲಾಗಿದೆ ಅಷ್ಟೆ. ತೀರ್ಪೊಂದರ 36 ಪುಟಗಳನ್ನು ಅಡಕಗೊಳಿಸಲಾಗಿದೆ” ಎಂದು ವ್ಯಾಖ್ಯಾನಿಸಿದರು.

ಅಂತಿಮವಾಗಿ ಪೀಠವು “ಇದೇ ಪ್ರಕರಣಕ್ಕೆ ಸಂಬಂಧಿಸಿದ ಇತರೆ ಎರಡು ಪ್ರಕರಣಗಳನ್ನು ನವೆಂಬರ್‌ 13ಕ್ಕೆ ವಿಚಾರಣೆಗೆ ನಿಗದಿಪಡಿಸಲಾಗಿದೆ. ಹೀಗಾಗಿ, ಅಂದು ಎಲ್ಲಾ ಪ್ರಕರಣದಲ್ಲಿ ಆದೇಶ ಮಾಡಲಾಗುವುದು” ಎಂದಿತು.

ಪ್ರಕರಣದ ಹಿನ್ನೆಲೆ: ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ಅಕ್ರಮ ರಫ್ತು ಮಾಡಿದ ಪ್ರಕರಣದಲ್ಲಿ ಆಶಾಪುರ ಮೈನ್‌ಕೆಮ್ ಲಿಮಿಟೆಡ್‌, ಅದರ ವ್ಯವಸ್ಥಾಪಕ ನಿರ್ದೇಶಕ ಚೇತನ್‌ ಶಾ ಅವರನ್ನು ದೋಷಿಗಳು ತೀರ್ಮಾನಿಸಿದ್ದ ನ್ಯಾಯಾಲಯವು ಎಲ್ಲಾ ದೋಷಿಗಳಿಗೆ ₹9.06 ಕೋಟಿ ದಂಡ ಪಾವತಿಸಲು ಆದೇಶಿಸಿದೆ.

ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಪ್ರೈ ಲಿಮಿಟೆಡ್‌ ಮತ್ತು ಸತೀಶ್‌ ಸೈಲ್‌ಗೆ ಒಟ್ಟು ಆರು ಪ್ರಕರಣಗಳಲ್ಲಿ ಕ್ರಮವಾಗಿ ₹90 ಲಕ್ಷ, ₹6 ಕೋಟಿ, ₹9.52 ಕೋಟಿ, ₹9.36 ಕೋಟಿ, ₹9.06 ಕೋಟಿ, ₹9.25 ಕೋಟಿ ದಂಡ ವಿಧಿಸಿದೆ. ತಮ್ಮ ವಿರುದ್ಧದ ಆರು ಪ್ರಕರಣಗಳಲ್ಲಿ ದಂಡದ ಮೊತ್ತವನ್ನು ಸೈಲ್‌ ಮತ್ತು ಇತರೆ ಅಪರಾಧಿಗಳು ಒಟ್ಟಾಗಿ ಪಾವತಿಸಬೇಕು.

ಮೆಸರ್ಸ್‌ ಸ್ವಸ್ತಿಕ್‌ ಸ್ಟೀಲ್‌ (ಹೊಸಪೇಟೆ) ಪ್ರೈ ಲಿ ಮತ್ತು ಅದರ ನಿರ್ದೇಶಕ ಕೆ ವಿ ನಾಗರಾಜ ಅಲಿಯಾಸ್‌ ಸ್ವಸ್ತಿಕ್‌ ನಾಗರಾಜ್‌ ಮತ್ತು ಕೆ ವಿ ಎನ್‌ ಗೋವಿಂದರಾಜ್‌ಗೆ ₹9.52 ಕೋಟಿ ದಂಡ ವಿಧಿಸಿದೆ. ಇಲ್ಲಿ ಸೈಲ್‌ ಸಹ ದಂಡದ ಮೊತ್ತ ಹಂಚಿಕೆಯಾಗಲಿದೆ.

ಮೆಸರ್ಸ್‌ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ ಸಹ ಶಿಕ್ಷೆ ಮತ್ತು ದಂಡ ಬದಿಗೆ ಸರಿಸುವಂತೆ ಕೋರಿದೆ. ಎಲ್ಲಾ ಪ್ರಕರಣಗಳಲ್ಲಿ ಕ್ರಮವಾಗಿ ಐಪಿಸಿ ಸೆಕ್ಷನ್‌ 120 ಬಿ ಮತ್ತು ಸೆಕ್ಷನ್‌ 379 ಅಡಿ ಅಪರಾಧಕ್ಕೆ ಮೂರು ಮತ್ತು ಐದು ವರ್ಷ ಶಿಕ್ಷೆ ಹಾಗೂ ₹20 ಸಾವಿರ ದಂಡ, ಐಪಿಸಿ ಸೆಕ್ಷನ್‌ 420 ಅಡಿ ಅಪರಾಧಕ್ಕೆ ಏಳು ವರ್ಷ ಶಿಕ್ಷೆ ಮತ್ತು ಭಿನ್ನ ರೂಪದಲ್ಲಿ ದಂಡ ವಿಧಿಸಲಾಗಿದೆ.