ಸುದ್ದಿಗಳು

ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಂಸದ ಶಶಿಕಾಂತ್‌ ಸೆಂಥಿಲ್‌ ಹೂಡಿರುವ ಮಾನಹಾನಿ ದಾವೆ ವಿಚಾರಣೆಗೆ ಅಂಗೀಕಾರ

ಮಾಜಿ ಐಎಎಸ್ ಅಧಿಕಾರಿಯೂ ಆದ ಶಶಿಕಾಂತ‌ ಸೆಂಥಿಲ್ ಸಲ್ಲಿಸಿದ್ದ ದೂರಿನ ಸಂಬಂಧ ಸಂಜ್ಞೇಯ ತೆಗೆದುಕೊಳ್ಳುವ ಕುರಿತು ವಾದ ಆಲಿಸಿ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಿತು.

Bar & Bench

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡಿ ಮಾನಹಾನಿಯುಂಟು ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ತಮಿಳುನಾಡಿನ ತಿರುವಳ್ಳೂರು ಸಂಸದ ಶಶಿಕಾಂತ ಸೆಂಥಿಲ್ ಸಲ್ಲಿಸಿರುವ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ವಿಚಾರಣೆಗೆ ಅಂಗೀಕರಿಸಿದೆ.

ಮಾಜಿ ಐಎಎಸ್ ಅಧಿಕಾರಿಯೂ ಆದ ಶಶಿಕಾಂತ‌ ಸೆಂಥಿಲ್ ಸಲ್ಲಿಸಿದ್ದ ದೂರಿನ ಸಂಬಂಧ ಸಂಜ್ಞೇ ತೆಗೆದುಕೊಳ್ಳುವ ಕುರಿತು ವಾದ ಆಲಿಸಿ ಕಾಯ್ದಿರಿಸಿದ್ದ ಆದೇಶವನ್ನು ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೆ ಎನ್ ಶಿವಕುಮಾರ್ ಅವರು ಇಂದು ಪ್ರಕಟಿಸಿದರು.

ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿರುವುದಾಗಿ ತಿಳಿಸಿದ ನ್ಯಾಯಾಲಯ, ದೂರುದಾರರ ಸ್ವಯಂ ಹೇಳಿಕೆ ದಾಖಲಿಸಲು ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಿತು. ಶಶಿಕಾಂತ ಸೆಂಥಿಲ್ ಪರ ವಕೀಲರಾದ ಸೂರ್ಯ ಮುಕುಂದರಾಜ್‌ ಮತ್ತು ಸಂಜಯ ಯಾದವ್‌ ಹಾಜರಿದ್ದರು.

ಸೆಂಥಿಲ್‌ ಅವರು ದಾಖಲಿಸಿರುವ ದೂರಿನಲ್ಲಿ, ಗಾಲಿ ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ತನ್ನ ಹೆಸರನ್ನು ಉಲ್ಲೇಖಿಸಿ ಆಧಾರಹಿತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನಾನು ಈ ಹಿಂದೆ ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಶಾಸಕರಾಗಿದ್ದರು. ಬಳ್ಳಾರಿಯಲ್ಲಿ ರೆಡ್ಡಿ ಎಸಗಿದ್ದ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಇಸಿ ಮತ್ತು ಸಿಬಿಐಗೆ ನೆರವು ನೀಡಿದ್ದೆ. ಹಲವು ಅಕ್ರಮಗಳನ್ನು ಬಯಲು ಮಾಡಿದ್ದೆ. ಇದರಿಂದ, ಜನಾರ್ದನ ರೆಡ್ಡಿ ದ್ವೇಷ ಸಾಧಿಸುತ್ತಿದ್ದರು. 2025ರ ಆಗಸ್ಟ್ 18ರಿಂದ 21ರ ನಡುವೆ ರಾಜ್ಯದ ಹಲವು ಪ್ರಾದೇಶಿಕ ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡಿರುವ ರೆಡ್ಡಿ, ನನ್ನನ್ನು (ಸೆಂಥಿಲ್) 'ಹಿಂದೂ ವಿರೋಧಿ', ಧರ್ಮಸ್ಥಳ ಪ್ರಕರಣದ ಹಿಂದಿನ 'ಮಾಸ್ಟರ್ ಮೈಂಡ್' ಹಾಗೂ "ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಕೆಲ ವ್ಯಕ್ತಿಗಳ ಮೂಲಕ 'ಪ್ರಚೋದನೆ' ನೀಡುತ್ತಿದ್ದಾರೆ" ಎಂದು ಆಧಾರರಹಿತ ಆರೋಪ ಮಾಡಿದ್ದಾರೆ. ಈ ಹೇಳಿಕೆಗಳನ್ನು ಕೆಲ ಮುದ್ರಣ ಮಾಧ್ಯಮಗಳೂ ವರದಿ ಮಾಡಿವೆ ಎಂದು ಉಲ್ಲೇಖಿಸಿದ್ದಾರೆ.

ಆರೋಪಿಯ ದುರುದ್ದೇಶಪೂರಿತ ಹೇಳಿಕೆಗಳಿಂದ ದೂರುದಾರರ ಖ್ಯಾತಿಗೆ ಹಾಗೂ ಸಮಾಜದಲ್ಲಿ ಅವರ ಸ್ಥಾನಮಾನಕ್ಕೆ ತೀವ್ರ ಹಾನಿಯುಂಟಾಗಿದೆ. ಜನರು ಅವರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದು, ಇದರಿಂದ, ದೂರುದಾರರು ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ಸಂಸತ್ ಸದಸ್ಯರಾಗಿರುವ ಅವರ ಕೆಲಸದ ಮೇಲೂ ಪರಿಣಾಮ ಬೀರಿದೆ. ಆದ್ದರಿಂದ, ದೂರು ದಾಖಲಿಸಿಕೊಂಡು ಆರೋಪಿಯ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 356 (1) ಮತ್ತು 356(2) ರ ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ಸಂಸದ ಶಶಿಕಾಂತ ಸೆಂಥಿಲ್ ಮನವಿ ಮಾಡಿದ್ದಾರೆ.