ಸುದ್ದಿಗಳು

ಬೈಕ್‌ ಟ್ಯಾಕ್ಸಿ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಾದಿಸಲು ಎಸ್‌ಜಿ ತುಷಾರ್ ಮೆಹ್ತಾ ನೇಮಕ

“ಕೇಂದ್ರ ಸರ್ಕಾರವು ನಮ್ಮ ಪರ ನಿಲುವು ತೆಗೆದುಕೊಂಡಿದೆ. ನಮ್ಮ ಪರವಾಗಿರುವ ಸುತ್ತೋಲೆಗಳೂ ಇವೆ” ಎಂದು ವಕೀಲರು.

Bar & Bench

ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡಿರುವ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರವು, ತನ್ನ ಪರ ವಾದಿಸಲು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನೇಮಿಸಿದೆ.

ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠದ ಮುಂದೆ ಸೋಮವಾರ ಹಾಜರಾದ ಮೆಹ್ತಾ, ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದರು.

Justice Satish Chandra Sharma and Justice NK Singh

ಮನವಿಯನ್ನು ಪುರಸ್ಕರಿಸಿದ ಪೀಠವು, ನವೆಂಬರ್‌ 16ರಿಂದ ಆರಂಭವಾಗುವ ವಾರದಲ್ಲಿ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ನಿರ್ದೇಶಿಸಿತು.

ವಿಚಾರಣೆ ವೇಳೆ ಕರ್ನಾಟಕ ಸರ್ಕಾರದ ಮೇಲ್ಮನವಿಯನ್ನು ವಿರೋಧಿಸಿದ ಬೈಕ್‌ ಟ್ಯಾಕ್ಸಿ ಅಗ್ರಿಗೇಟರ್‌ಗಳ ಪರ ವಕೀಲರು, ಕೇಂದ್ರ ಸರ್ಕಾರವು ತಮ್ಮ ವಾದಕ್ಕೆ ಪೂರಕವಾದ ಸುತ್ತೋಲೆಗಳನ್ನು ಹೊರಡಿಸಿದೆ ಎಂದು ನ್ಯಾಯಾಲಯದ ಗಮನ ಸೆಳೆದರು.

“ಕೇಂದ್ರ ಸರ್ಕಾರವು ನಮ್ಮ ಪರ ನಿಲುವು ತೆಗೆದುಕೊಂಡಿದೆ. ನಮ್ಮ ಪರವಾಗಿರುವ ಸುತ್ತೋಲೆಗಳೂ ಇವೆ” ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ಮೆಹ್ತಾ ಅವರು ಕೇಂದ್ರ ಸರ್ಕಾರದ ಪರವಾಗಿಯೂ ಹಾಜರಾಗಲಿದ್ದಾರೆ ಎಂದು ಹೇಳಿತು.

“ಕೇಂದ್ರ ಸರ್ಕಾರದ ಪರವಾಗಿಯೂ ಸಾಲಿಸಿಟರ್ ಜನರಲ್ ಹಾಜರಾಗುತ್ತಾರೆ. ಚಿಂತಿಸಬೇಡಿ. ವಿಷಯದ ಕುರಿತು ಸರಿಯಾದ ನಿಲುವು ಏನು ಎಂಬುದನ್ನು ಅವರು ಖಂಡಿತವಾಗಿಯೂ ನ್ಯಾಯಾಲಯಕ್ಕೆ ತಿಳಿಸುತ್ತಾರೆ ಎಂಬ ವಿಶ್ವಾಸ ನಮಗಿದೆ” ಎಂದು ಪೀಠ ಹೇಳಿತು.

ಈ ವೇಳೆ ಉಬರ್‌ ಪರ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು “ಮೆಹ್ತಾ ಅವರು ಖಂಡಿತವಾಗಿಯೂ ಕರ್ನಾಟಕ ಸರ್ಕಾರದ ಪರವಾಗಿಯೇ ಹಾಜರಾಗುತ್ತಾರೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಲು ಸಾಧ್ಯವಿಲ್ಲ. ಏಕೆಂದರೆ ಕೇಂದ್ರ ಸರ್ಕಾರ ಹೊರಡಿಸಿರುವ ದಾಖಲೆಗಳು ನಮ್ಮ ಪರವಾಗಿವೆ. ಮೆಹ್ತಾ ಅವರು ಕರ್ನಾಟಕ ಸರ್ಕಾರದ ಪರವಾಗಿ ಹಾಜರಾಗುವುದಕ್ಕೆ ತಮ್ಮ ಆಕ್ಷೇಪವಿಲ್ಲ” ಎಂದರು.

ಇದಕ್ಕೂ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ತನ್ನ ಪರ ವಾದಿಸಲು ನೇಮಿಸಿತ್ತು. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಪಿಡೊ ಸಂಸ್ಥೆಗೆ ಸಿಬಲ್ ಅವರು ಕಾನೂನು ಅಭಿಪ್ರಾಯ ನೀಡಿದ್ದರು ಎಂಬುದನ್ನು ಸಂಸ್ಥೆಯು ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅವರು ಪ್ರಕರಣದಿಂದ ಹಿಂದೆ ಸರಿದಿದ್ದರು.

ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ನ ತೀರ್ಪಿನಿಂದ ವಿವಾದ ಆರಂಭವಾಗಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು, ಬೈಕ್‌ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಹಿಂದಿನ ಆದೇಶವನ್ನು ಪ್ರಶ್ನಿಸಿ ಓಲಾ, ಉಬರ್ ಮತ್ತು ರಾಪಿಡೊ ಸೇರಿದಂತೆ ಅಗ್ರಿಗೇಟರ್‌ಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿತ್ತು.

ರಾಜ್ಯ ಸರ್ಕಾರವು ಬೈಕ್‌ ಟ್ಯಾಕ್ಸಿ ಸೇವೆಗಳಿಗೆ ನಿಯಂತ್ರಣ ನೀತಿಯನ್ನು ರೂಪಿಸುವವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಬೇಕೆಂಬ ಹಿಂದಿನ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.

ಮೋಟಾರು ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಿ, ಒಪ್ಪಂದದ ಆಧಾರದಲ್ಲಿ ಪ್ರಯಾಣಿಕರನ್ನು ಸಾಗಿಸುವ ವಾಹನಗಳಾಗಿ ಬಳಸಬಹುದು ಎಂದು ಹೈಕೋರ್ಟ್ ಹೇಳಿತ್ತು. ಬೈಕ್‌ ಟ್ಯಾಕ್ಸಿ ಸೇವೆಗಳ ಮೇಲೆ ನಿಯಂತ್ರಣ ಷರತ್ತುಗಳನ್ನು ವಿಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆಯಾದರೂ, ವಾಹನವು ಮೋಟಾರು ಸೈಕಲ್‌ ಎಂಬ ಏಕೈಕ ಕಾರಣಕ್ಕೆ ಪರವಾನಗಿ ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಕರ್ನಾಟಕ ಸರ್ಕಾರವು, ಬೈಕ್‌ ಟ್ಯಾಕ್ಸಿಗಳಿಂದ ಪ್ರಯಾಣಿಕರ ಸುರಕ್ಷತೆಗೆ ಎದುರಾಗಬಹುದಾದ ಅಪಾಯಗಳು, ವಿಮಾ ಸೌಲಭ್ಯದ ವ್ಯಾಪ್ತಿ ಹಾಗೂ ಪ್ರಯಾಣಿಕರ ರಕ್ಷಣೆಗೆ ಅಗತ್ಯವಾದ ಸುರಕ್ಷತಾ ಕ್ರಮಗಳ ಕೊರತೆ ಕುರಿತು ಆತಂಕ ವ್ಯಕ್ತಪಡಿಸಿದೆ.

ಇದೇ ವೇಳೆ, ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳೂ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿವೆ. ಇತರ ಸಾರಿಗೆ ಸೇವೆಗಳಿಗೆ ವಿಧಿಸಿರುವ ನಿಯಂತ್ರಣಗಳಿಗೆ ಸಮಾನವಾದ ಷರತ್ತುಗಳಿಲ್ಲದೆ ಬೈಕ್‌ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದರಿಂದ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ಸೇವಾದಾರರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂಬುದು ಸಂಘಟನೆಗಳ ವಾದವಾಗಿದೆ.