Justice M Nagaprasanna 
ಸುದ್ದಿಗಳು

ಬಹುಪತ್ನಿತ್ವ ಅಪರಾಧದಲ್ಲಿ ಮೊದಲ ಪತ್ನಿಯ ಒಪ್ಪಿಗೆ ಮುಖ್ಯವಾಗುವುದಿಲ್ಲ: ಕರ್ನಾಟಕ ಹೈಕೋರ್ಟ್‌

ಬಹುಪತ್ನಿತ್ವ ಅಪರಾಧವು ನಿರಂತರ ಅಪರಾಧವಾಗಿರುವುದರಿಂದ ವಿಳಂಬದ ಆಧಾರದ ಮೇಲೆ ಅದನ್ನು ಕೈಬಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಬಹುಪತ್ವಿತ್ವ ಅಪರಾಧವನ್ನು ಪರಿಗಣಿಸುವಾಗ ಮೊದಲ ಪತ್ನಿಯ ಒಪ್ಪಿಗೆ ಮುಖ್ಯವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ (ಆನಂದ್‌ ವರ್ಸಸ್‌ ಚಂದ್ರಮ್ಮ).

ಮೊದಲ ಪತ್ನಿಯ ಒಪ್ಪಿಗೆ ಪಡೆದು ಆನಂತರದ ವಿವಾಹಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೇ, ತಡವಾಗಿ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ಆಧರಿಸಿ ಐಪಿಸಿ ಸೆಕ್ಷನ್‌ 494ರ (ಬಹುಪತ್ನಿತ್ವ) ಅಡಿ ಪ್ರಕರಣ ದಾಖಲಿಸಿರುವುದನ್ನು ವಜಾ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

“ಬಹುಪತ್ನಿತ್ವ ಅಪರಾಧ ಪರಿಣಿಸಲು ಮೊದಲ ಪತ್ನಿಯ ಒಪ್ಪಿಗೆ ಅಥವಾ ಮೊದಲ ಮತ್ತು ಎರಡನೇ ಪತ್ನಿಯ ಒಪ್ಪಿಗೆ ಪಡೆದು ವಿವಾಹವಾಗಿರುವುದು ಮುಖ್ಯವಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಮೂರು ವಿವಾಹವಾಗಿರುವುದನ್ನು ಆರೋಪಿ ಪತಿಯು ನಿರಾಕರಿಸಿಲ್ಲ. ಆದರೆ, ಮೂರನೇ ವಿವಾಹವಾಗಿ 25 ವರ್ಷಗಳ ಬಳಿಕ ಖಾಸಗಿ ದೂರು ದಾಖಲಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುಪತ್ನಿತ್ವವು ನಿರಂತರ ಅಪರಾಧವಾಗಿದೆಯೇ ಅಥವಾ ಪ್ರಕರಣ ದಾಖಲಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಅದು ರದ್ದಾಗಲಿದೆ ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಎದ್ದಿತ್ತು.

ಬಿಹಾರ ರಾಜ್ಯ ವರ್ಸಸ್‌ ದಿಯೋಕರಣ್‌ ನೆನ್ಶಿ ಪ್ರಕರಣದ ತೀರ್ಪು ಆಧರಿಸಿರುವ ನ್ಯಾಯಾಲಯವು ಪತಿಯು ಬೇರೆ ಬೇರೆ ಅವಧಿಯಲ್ಲಿ ಮೂವರು ಮಹಿಳೆಯರನ್ನು ವಿವಾಹವಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ, ಆತ ಬಹುಪತ್ನಿತ್ವ ಅಪರಾಧ ಜಾಲದಲ್ಲಿ ಸಿಲುಕಿದ್ದಾನೆ ಎಂದಿದೆ.

“ಮೂರು ವಿವಾಹವಾಗಿರುವ ಕುರಿತು ತಡವಾಗಿ ಪ್ರಕರಣ ದಾಖಲಿಸಿರುವುದು ಅಮುಖ್ಯವಾಗಲಿದ್ದು, ಹಾಲಿ ಬಹುಪತ್ನಿತ್ವ ಪ್ರಕರಣವು ನಿರಂತರ ಅಪರಾಧವಾಗಲಿದೆ” ಎಂದು ಪೀಠ ಹೇಳಿದೆ.

ಆಕ್ಷೇಪಾರ್ಹವಾದ ವಿವಾಹಗಳಿಗೆ ನಿರ್ದಿಷ್ಟ ರೀತಿಯಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಜವಾಬ್ದಾರರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದ ಹೊರತು ಅವರ ವಿರುದ್ಧ ಪ್ರಕ್ರಿಯೆ ಮುಂದುವರಿಸಲಾಗದು ಎಂದು ನ್ಯಾಯಾಲಯವು ಅವರ ವಿರುದ್ಧದ ಪ್ರಕರಣ ವಜಾ ಮಾಡಿದೆ.

ಪ್ರಕರಣದ ಹಿನ್ನೆಲೆ: 76 ವರ್ಷದ ವ್ಯಕ್ತಿಯೊಬ್ಬರು ಮೂರನೇ ವಿವಾಹವಾಗಿರುವುದನ್ನು ಪ್ರಶ್ನಿಸಿ ಆರೋಪಿ ಪತಿ, ಮೂರನೇ ಪತ್ನಿ, ಆತನ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ವಿರುದ್ಧ ಮೊದಲ ಪತ್ನಿ ಪ್ರಕರಣ ದಾಖಲಿಸಿದ್ದರು.

ಎಲ್ಲರೂ ಶಾಂತಿಯುತವಾಗಿ ಬದುಕು ನಡೆಸುತ್ತಿದ್ದು, ಮೊದಲಿಬ್ಬರು ಪತ್ನಿಯರ ಒಪ್ಪಿಗೆ ಪಡೆದು ವಿವಾಹವಾಗಿದ್ದೇನೆ. ಮೂರನೇ ಪತ್ನಿಗೆ ಕೆಲವು ಆಸ್ತಿಯನ್ನು ಉಡುಗೊರೆ ನೀಡಿದ್ದರಿಂದ ಕೋಪಗೊಂಡಿರುವ ಮೊದಲನೇ ಪತ್ನಿಯು ದಾವೆ ಹೂಡಿದ್ದಾಳೆ ಎಂದು ಪತಿ ಮನವಿಯಲ್ಲಿ ವಿವರಿಸಿದ್ದರು.