Basanagouda R Patil, D K Shivakumar, CBI and Karnataka HC
Basanagouda R Patil, D K Shivakumar, CBI and Karnataka HC 
ಸುದ್ದಿಗಳು

ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ಅನುಮೋದನೆ ಹಿಂಪಡೆತ: ಹೈಕೋರ್ಟ್‌ ಕದತಟ್ಟಿದ ಬಿಜೆಪಿ ಶಾಸಕ ಯತ್ನಾಳ್‌

Bar & Bench

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಬಿಜೆಪಿ ನೇತೃತ್ವದ ಈ ಹಿಂದಿನ ರಾಜ್ಯ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ್ದ ಅನುಮತಿ ಹಿಂಪಡೆದಿರುವ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಯತ್ನಾಳ್‌ ಅವರ ಪರವಾಗಿ ವಕೀಲ ವೆಂಕಟೇಶ್‌ ದಳವಾಯಿ ಅವರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಇಂದು ಪ್ರಕರಣ ಉಲ್ಲೇಖಿಸಿದರು. ಈ ಹಿನ್ನೆಲೆಯಲ್ಲಿ ಸಂಜೆ ಪ್ರಕರಣ ಕೈಗೆತ್ತಿಗೊಂಡ ಪೀಠದ ಮುಂದೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಅರ್ಜಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದಿದ್ದಾರೆ.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರು ಕಾನೂನಿ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅರ್ಜಿದಾರರ ಪರ ವಕೀಲ ದಳವಾಯಿ ಅವರು ಅರ್ಜಿಯು ನಿರ್ವಹಣೆಗೆ ಅರ್ಹವಾಗಿದೆ ಎಂದು ಸಾಬೀತುಪಡಿಸಲಾಗುವುದು ಎಂದು ಹೇಳಿದ್ದಾರೆ ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಡಿಸೆಂಬರ್‌ 15ಕ್ಕೆ ಮೂಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ಡಿ ಕೆ ಶಿವಕುಮಾರ್‌ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದ ಅನುಮೋದನೆಯನ್ನು ನವೆಂಬರ್‌ 28ರಂದು ರಾಜ್ಯ ಸರ್ಕಾರ ಹಿಂಪಡೆದಿರುವ ಆದೇಶವು ಕಾನೂನುಬಾಹಿರ ಎಂದು ಘೋಷಿಸಬೇಕು. ತನಿಖೆ ಪೂರ್ಣಗೊಳಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಅರ್ಜಿ ಇತ್ಯರ್ಥವಾಗುವವರೆಗೆ ರಾಜ್ಯ ಸರ್ಕಾರದ ಆಕ್ಷೇಪಾರ್ಹ ಆದೇಶಕ್ಕೆ ತಡೆ ನೀಡಬೇಕು ಎಂದು ಮಧ್ಯಂತರ ಕೋರಿಕೆ ಸಲ್ಲಿಸಲಾಗಿದೆ.

ಸಂಪುಟ ಸಚಿವರಾಗಿರುವ ಡಿ ಕೆ ಶಿವಕುಮಾರ್‌ ಅವರನ್ನು ರಕ್ಷಿಸಲು ರಾಜ್ಯ ಸರ್ಕಾರವು ಸಿಬಿಐಗೆ ನೀಡಿದ್ದ ಅನುಮೋದನೆಯನ್ನು ಹಿಂಪಡೆದಿದೆ. ಈ ಮೂಲಕ ತನಿಖೆಯಲ್ಲಿ ಮಧ್ಯಪ್ರವೇಶಿಸಲಾಗಿದೆ. ಆಕ್ಷೇಪಾರ್ಹ ಆದೇಶ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

2019ರ ಸೆಪ್ಟೆಂಬರ್‌ 25ರಂದು ಡಿಎಸ್‌ಪಿಇ ಕಾಯಿದೆ ಸೆಕ್ಷನ್‌ 6ರ ಅಡಿ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿಸಿತ್ತು. ಇದನ್ನು ಕಾಂಗ್ರೆಸ್‌ ನೇತೃತ್ವದ ಸರ್ಕಾರವು 2023ರ ನವೆಂಬರ್‌ 28ರಂದು ಹಿಂಪಡೆದಿತ್ತು. ಇದಕ್ಕೂ ಮುನ್ನ ಸಿಬಿಐ ತನಿಖೆ ಪ್ರಶ್ನಿಸಿ ಡಿ ಕೆ ಶಿವಕುಮಾರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಡಿ ಕೆ ಶಿವಕುಮಾರ್‌ ಅವರು ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣಾ ಹಂತದಲ್ಲಿರುವಾಗಲೇ ಕಾಂಗ್ರೆಸ್‌ ಸರ್ಕಾರ ಸಿಬಿಐಗೆ ತನಿಖೆ ನಡೆಸಲು ನೀಡಿದ್ದ ಅನುಮತಿ ಹಿಂಪಡೆದಿತ್ತು. ಹೀಗಾಗಿ, ಡಿ ಕೆ ಶಿವಕುಮಾರ್‌ ಅವರು ಮೇಲ್ಮನವಿ ಹಿಂಪಡೆದಿದ್ದರು. ಈ ನೆಲೆಯಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಅರ್ಜಿ ಇತ್ಯರ್ಥಪಡಿಸಿತ್ತು.

ಇಲ್ಲಿಯೂ ಯತ್ನಾಳ್‌ ಅವರ ಪರವಾಗಿ ಮಧ್ಯಪ್ರವೇಶಿಕೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ನ್ಯಾಯಾಲಯವು ನಿರಾಕರಿಸಿದ್ದಲ್ಲದೇ, ಸ್ವತಂತ್ರವಾಗಿ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದ ನಿರ್ಧಾರ ಪ್ರಶ್ನಿಸಬಹುದು ಎಂದಿತ್ತು. ಈಗ ಯತ್ನಾಳ್‌ ಅವರು ಅರ್ಜಿ ಸಲ್ಲಿಸಿದ್ದಾರೆ.