ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯ ದೊರೆಯದ ಹೈಕೋರ್ಟ್‌ಗಳು ಹಾಗೂ ರಾಜ್ಯಗಳ ನ್ಯಾಯಮೂರ್ತಿಗಳಿಗೆ ಪದೋನ್ನತಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರಿಗೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಮನವಿ ಮಾಡಿದೆ.
ಹೆಚ್ಚು ಜನಸಂಖ್ಯೆ ಹೊಂದಿರುವ ಕೆಲವು ದೊಡ್ಡ ರಾಜ್ಯಗಳಿದ್ದು, ಕಳೆದ ಕೆಲವು ತಿಂಗಳಿಂದ ಅವುಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯ ದೊರೆತಿಲ್ಲ ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಸೋಮವಾರ ಸಿಜೆಐಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಕೊಲಿಜಿಯಂ ಸಭೆಯ ಸಂದರ್ಭದಲ್ಲಿ ಈ ಮಹತ್ವದ ವಿಚಾರವನ್ನು ಪರಿಗಣಿಸಬೇಕು ಎಂಬುದು ನಮ್ಮ ವಿನಮ್ರ ಕೋರಿಕೆ” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರೊಂದಿಗೆ ಈ ಸಲಹೆಯ ಕುರಿತು ಚರ್ಚಿಸಲಾಗಿದ್ದು, ಅವರು ಸದರಿ ವಿಚಾರದ ಕುರಿತು ಸಕಾರಾತ್ಮಕ ಮತ್ತು ವಾಸ್ತವಿಕ ನಿಲುವು ಹೊಂದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.