ರಾಷ್ಟ್ರ ಮತ್ತು ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿರುವ ಖ್ಯಾತ ಶೂಟರ್ ಒಬ್ಬರು ನಾಲ್ಕು ಶಸ್ತ್ರಾಸ್ತ್ರ ಮತ್ತು 25 ಸಾವಿರ ಮದ್ದು ಗುಂಡು ಖರೀದಿಸಲು ಕೋರಿರುವ ಮನವಿಯನ್ನು ಪರಿಗಣಿಸುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಸಕ್ಷಮ ಪ್ರಾಧಿಕಾರಿಯಾದ ಕೊಡಗು ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.
ಕೊಡಗು ಜಿಲ್ಲೆಯ ನಾಪೋಕ್ಲುವಿನ ಕೋಲ್ಕೇರಿ ಗ್ರಾಮದ ನಿವಾಸಿ ಶೂಟರ್ ಸಜನ್ ಅಯ್ಯಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಅರ್ಜಿದಾರರು ಖ್ಯಾತ ಶೂಟರ್ ಎಂದು ಹೇಳಿಕೊಂಡಿದ್ದು, ಅವರು ರಾಷ್ಟ್ರ ಮತ್ತು ರಾಜ್ಯಮಟ್ಟದ ಹಲವು ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದನ್ನು ನೋಡಿದರೆ ಅವರ ವಾದ ಅರ್ಥಪೂರ್ಣವಾಗಿದೆ. ಶಸ್ತ್ರಾಸ್ತ್ರ ನಿಯಮ (2)ರ ಪ್ರಕಾರ ಶೂಟರ್ ಒಬ್ಬರು ಹತ್ತು ಶಸ್ತ್ರಾಸ್ತ್ರಗಳನ್ನು ಹೊಂದಬಹುದಾಗಿದೆ. ಇದರಲ್ಲಿ ಎಂಟನ್ನು ಕ್ರೀಡಾ ಚಟುವಟಿಕೆಗೆ ಮತ್ತು ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 3ರ ಉಪ ಸೆಕ್ಷನ್ 2ರ ಅಡಿ ಸಾಮಾನ್ಯ ನಾಗರಿಕರ ಅಡಿ ಎರಡು ಶಸ್ತ್ರಾಸ್ತ್ರ ಹೊಂದಬಹುದಾಗಿದೆ. ಈ ನೆಲೆಯಲ್ಲಿ ಅರ್ಜಿದಾರರು ನಾಲ್ಕು ಹೆಚ್ಚುವರಿ ಶಸ್ತ್ರಾಸ್ತ್ರ ಖರೀದಿಗೆ ಬೇಡಿಕೆ ಇಟ್ಟಿರುವುದು ಶಾಸನಬದ್ಧ ಚೌಕಟ್ಟಿಗೆ ಒಳಪಟ್ಟಿದೆ” ಎಂದು ನ್ಯಾಯಾಲಯ ಹೇಳಿದೆ.
“ಕ್ರೀಡಾಪಟು, ಶೂಟಿಂಗ್ ಸಂಸ್ಥೆ ಹೊಂದಬಹುದಾದ ಮದ್ದುಗುಂಡುವಿಗೆ ಶಸ್ತ್ರಾಸ್ತ್ರ ನಿಮಯ 40 ಸಂಬಂಧಿಸಿದೆ. ನಿಯಮ 40ರ ಉಪ ನಿಯಮ (ಸಿ) ಅಡಿ ಅರ್ಜಿದಾರರು ಖ್ಯಾತ ಶೂಟರ್ ವಿಭಾಗಕ್ಕೆ ಸೇರುತ್ತಾರೆ. ಖ್ಯಾತ ಶೂಟರ್ 1 ಲಕ್ಷ ಮದ್ದು ಗುಂಡು ಹೊಂದಬಹುದಾಗಿದೆ. ಅರ್ಜಿದಾರರು ಸದ್ಯ 25,000 ಮದ್ದು ಗುಂಡುಗಳನ್ನು ಶಸ್ತ್ರಾಸ್ತ್ರಕ್ಕೆ ಬಳಕೆ ಮಾಡಲು ಕೋರಿದ್ದಾರೆ. ಹೀಗಾಗಿ, ಅರ್ಜಿದಾರರ ಕೋರಿಕೆಯು ಶಾಸನದ ನಾಲ್ಕು ಚೌಕಟ್ಟಿಗೆ ಒಳಪಟ್ಟಿದೆ. ಆಕ್ಷೇಪಾರ್ಹ ಆದೇಶವನ್ನು ಪ್ರಕರಣವನ್ನು ಮತ್ತಷ್ಟು ಎಳೆಯಲು ಮಾಡಲಾಗಿದೆ. ಹೀಗಾಗಿ, ಅದು ಊರ್ಜಿತವಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಕೀಲ ಎಸ್ ಪ್ರವೀಣ್ ಅವರು ಅರ್ಜಿದಾರರು ಖ್ಯಾತ ಶೂಟರ್ ಆಗಿದ್ದು, 10 ಶಸ್ತ್ರಾಸ್ತ್ರ ಹೊಂದಲು ಅರ್ಹರಾಗಿದ್ದಾರೆ. ಸದ್ಯ ಅರ್ಜಿದಾರರ ಬಳಿ ಮೂರು ಶಸ್ತ್ರಾಸ್ತ್ರಗಳಿದ್ದು, ನಾಲ್ಕು ಹೆಚ್ಚುವರಿ ಶಸ್ತ್ರಾಸ್ತ್ರಗಳಿಗೆ ಕೋರಿಕೆ ಸಲ್ಲಿಸಿದ್ದಾರೆ. ಒಂದಲ್ಲಾ ಒಂದು ಕಾರಣಕ್ಕೆ ಪ್ರತಿವಾದಿಗಳು ವಿಚಾರ ಮುಂದಕ್ಕೆ ಹಾಕುತ್ತಿದ್ದು, ಖ್ಯಾತ ಶೂಟರ್ ಎನಿಸಿಕೊಳ್ಳಲು ಕನಿಷ್ಠ ಅರ್ಹತಾ ಅಂಕ ತಿಳಿಯಲು ಅಂತಿಮ ನೋಟಿಸ್ ಜಾರಿ ಮಾಡಿಲ್ಲ ಎಂದು ವಾದಿಸಿದ್ದರು.
ಸರ್ಕಾರದ ಪರ ವಕೀಲರು ಶಸ್ತ್ರಾಸ್ತ್ರ ಕಾಯಿದೆ ಪ್ರಕಾರ ಅರ್ಜಿದಾರರು ಎರಡು ಶಸ್ತ್ರಾಸ್ತ್ರ ಮಾತ್ರ ಹೊಂದಬಹುದಾಗಿದೆ. ಈ ನೆಲೆಯಲ್ಲಿ ನಾಲ್ಕು ಹೆಚ್ಚುವರಿ ಶಸ್ತ್ರಾಸ್ತ್ರ ಹೊಂದಲು ಕೋರಿರುವ ಅವರ ಮನವಿಯು ಸಮರ್ಥನೀಯವಲ್ಲ ಎಂದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಅಯ್ಯಪ್ಪ ಅವರು 2020ರ ಸೆಪ್ಟೆಂಬರ್ 21ರಂದು ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡು ಪಡೆಯುವುದಕ್ಕಾಗಿ ಕೊಡಗು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. 2022ರ ಡಿಸೆಂಬರ್ 28ರಂದು ಜಿಲ್ಲಾಧಿಕಾರಿಯು ಅರ್ಜಿದಾರರು ಖ್ಯಾತ ಮತ್ತು ಪ್ರಸಿದ್ದ ಶೂಟರ್ ಎನ್ನಲು ಕನಿಷ್ಠ ಅರ್ಹತಾ ಅಂಕ ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರರಿಗೆ ನೋಟಿಸ್ ನೀಡಿದ್ದರು. ಇದಕ್ಕೆ 15 ದಿನಗಳಲ್ಲಿ ಉತ್ತರಿಸಬೇಕು ಎಂದು ಗಡುವು ವಿಧಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಅರ್ಜಿದಾರರು ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಭಾರತೀಯ ರಾಷ್ಟ್ರೀಯ ರೈಫಲ್ ಸಂಸ್ಥೆಯ ಆಜೀವ ಸದಸ್ಯನಾಗಿದ್ದು, ಶಸ್ತ್ರಾಸ್ತ್ರ ನಿಯಮ 2016ರ ಅಡಿ ತಾನು ಖ್ಯಾತ ಶೂಟರ್ ವ್ಯಾಖ್ಯಾನಕ್ಕೆ ಬರುತ್ತೇನೆ ಎಂದು ವಾದಿಸಿದ್ದರು,