Soubhagya, S K Basavarajan and Murugha Mutt, Chitradurga
Soubhagya, S K Basavarajan and Murugha Mutt, Chitradurga 
ಸುದ್ದಿಗಳು

ಬಸವರಾಜನ್‌ ದಂಪತಿ ವಿರುದ್ಧ ಪ್ರಕರಣ: 'ಪೋಕ್ಸೊ ಪ್ರಕರಣದ ವಿಚಾರಣೆ ದಿಕ್ಕು ತಪ್ಪುವುದಿಲ್ಲವೇ?' ಹೈಕೋರ್ಟ್‌ ಪ್ರಶ್ನೆ

Bar & Bench

“ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೊ ಪ್ರಕರಣದ ಸಾಕ್ಷಿಗಳೂ ಆಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್‌ ಮತ್ತವರ ಪತ್ನಿ ಸೌಭಾಗ್ಯ ಅವರ ಮೇಲೆ ಪಿತೂರಿ ಮತ್ತು ಹಣ ಸುಲಿಗೆಗೆ ಪ್ರಯತ್ನಿಸಿದ ಆರೋಪ ಸಂಬಂಧ ಪ್ರತಿ ದೂರು ದಾಖಲಿಸಿರುವುದರಿಂದ ಪೋಕ್ಸೊ ಪ್ರಕರಣದ ವಿಚಾರಣೆ ದಿಕ್ಕು ತಪ್ಪುವುದಿಲ್ಲವೇ?” ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಪ್ರಶ್ನಿಸಿದೆ.

ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲು ಪಿತೂರಿ ನಡೆಸಿದ ಮತ್ತು ಹಣ ಸುಲಿಗೆಗೆ ಪ್ರಯತ್ನಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಬಸವರಾಜನ್‌ ಮತ್ತು ಸೌಭಾಗ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮೇಲಿನಂತೆ ಸರ್ಕಾರಿ ವಕೀಲರನ್ನು ಪ್ರಶ್ನಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೂರುದಾರ ಬಸವಪ್ರಭು ಸ್ವಾಮೀಜಿ ಅವರು ಅರ್ಜಿದಾರರ ವಿರುದ್ಧ ದಾಖಲಿಸಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ. ಪೋಕ್ಸೊ ಪ್ರಕರಣದ ಆರೋಪಗಳಿಂದ ಶಿವಮೂರ್ತಿ ಶರಣರಿಗೆ ರಕ್ಷಣೆ ಒದಗಿಸಲು ಅರ್ಜಿದಾರರ ವಿರುದ್ಧ ಈ ಪ್ರತಿ ದೂರು ದಾಖಲಿಸಲಾಗಿದೆ ಎಂದು ವಿವರಿಸಿದರು.

ಈ ವಾದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರನ್ನು ಉದ್ದೇಶಿಸಿ ಪೀಠವು “ಪೋಕ್ಸೊ ಪ್ರಕರಣದಲ್ಲಿ ಅರ್ಜಿದಾರರು ಸಹ ಸಾಕ್ಷಿಗಳಾಗಿದ್ದಾರೆ. ಅವರ ವಿರುದ್ಧ ಪ್ರತಿ ದೂರು ದಾಖಲಿಸಿರುವಾಗ ಸಾಕ್ಷಿಗಳ ರಕ್ಷಣೆ ಹೇಗೆ ಸಾಧ್ಯ? ಪೋಕ್ಸೊ ಪ್ರಕರಣದ ವಿಚಾರಣೆ ದಿಕ್ಕು ತಪ್ಪುವುದಿಲ್ಲವೇ? ಶರಣರ ವಿರುದ್ಧದ ಪೋಕ್ಸೊ ಪ್ರಕರಣ ಚಿತ್ರದುರ್ಗದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತ ತಲುಪಿದೆ. ಆ ವಿಚಾರಣೆ ಪೂಣಗೊಂಡರೆ, ಎಲ್ಲಾ ಸತ್ಯಾಂಶ ಹೊರಬರುತ್ತದೆಯಲ್ಲವೇ?” ಎಂದು ಕೇಳಿತು. ಅಂತಿಮವಾಗಿ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 9ಕ್ಕೆ ನಿಗದಿಪಡಿಸಿತು.

ಪ್ರಕರಣದ ಹಿನ್ನೆಲೆ: ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಹಲವು ಪಟ್ಟಭದ್ರ ಹಿತಾಸಕ್ತಿಗಳು ಸಂತ್ರಸ್ತ ಬಾಲಕಿಯರು ಹಾಗೂ ಅವರ ತಾಯಿಯನ್ನು ಪ್ರೇರೇಪಿಸಿದ್ಧಾರೆ. ಹಣ ಪಡೆಯಬೇಕೆನ್ನುವ ಮತ್ತು ಮಠಕ್ಕೆ ಮೋಸ ಮಾಡುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಿರುತ್ತಾರೆ. ಈ ವ್ಯವಸ್ಥಿತ ಪಿತೂರಿಯ ಹಿಂದೆ ಇರುವವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಮಠದ ಉಸ್ತುವಾರಿ ಸ್ವಾಮೀಜಿಯೂ ಆದ ಬಸವಪ್ರಭು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು, ಪಿತೂರಿ ಮತ್ತು ಹಣದ ಸುಲಿಗೆಗೆ ಪ್ರಯತ್ನಿಸಿದ ಆರೋಪದಡಿ ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ.