Justice M Nagaprasanna 
ಸುದ್ದಿಗಳು

ಅತ್ತೆಯ ಮನೆಯಲ್ಲಿ ಉಳಿದು ಆಸ್ತಿ ಲಪಟಾಯಿಸಲು ಸಂಚು: ಸೊಸೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

“ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ–2007ರ ಅನುಸಾರ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರವೇ ಹಿರಿಯರನ್ನು ಮನೆಯಿಂದ ಹೊರಹಾಕುವ ಆದೇಶವನ್ನು ಸಮರ್ಥನೀಯ ಎಂದು ನಿರ್ಣಯಿಸಬಹುದು” ಎಂದಿರುವ ನ್ಯಾಯಾಲಯ.

Bar & Bench

ಅತ್ತೆಯ ಮನೆಯಲ್ಲಿ ಉಳಿದು ಆಸ್ತಿ ಲಪಟಾಯಿಸಲು ಸಂಚು ಹೂಡಿದ್ದ ಆರೋಪದಡಿ ಸೊಸೆಗೆ ಮನೆ ಖಾಲಿ ಮಾಡುವಂತೆ ನಿರ್ದೇಶಿಸಿದ್ದ ಬಳ್ಳಾರಿ ಉಪವಿಭಾಗಾಧಿಕಾರಿ (ಎಸಿ) ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಎತ್ತಿಹಿಡಿದಿದೆ.

ಬಳ್ಳಾರಿ ಉಪವಿಭಾಗಾಧಿಕಾರಿ 2025ರ ಜೂನ್ 17ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಸೊಸೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ–2007ರ ಅನುಸಾರ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರವೇ ಹಿರಿಯರನ್ನು ಮನೆಯಿಂದ ಹೊರಹಾಕುವ ಆದೇಶವನ್ನು ಸಮರ್ಥನೀಯ ಎಂದು ನಿರ್ಣಯಿಸಬಹುದು” ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿದೆ.

“ಹಿರಿಯ ನಾಗರಿಕರು ಎನಿಸಿರುವ ಅತ್ತೆಯನ್ನು ಸೊಸೆ ಔಟ್‌ ಔಸ್‌ನಲ್ಲಿ (ಹೊರಮನೆ) ಇರಿಸಿದ್ದಾರೆ. ಇದರಿಂದ ಅತ್ತೆ ತಮ್ಮ ಸ್ವಂತ ಮನೆಗೆ ಗೌರವಯುತ ಪ್ರವೇಶ ಹೊಂದುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ಮನೆಯು ಸೊಸೆಯ ವಶದಲ್ಲಿದ್ದು, ಅವರು ಆ ಆವರಣದಲ್ಲಿ ವಾಸಿಸುತ್ತಿಲ್ಲ. ಪತಿಯ ಮರಣದ ನಂತರ ಸೊಸೆ ಆಂಧ್ರಪ್ರದೇಶಕ್ಕೆ ತಮ್ಮ ನಿವಾಸವನ್ನು ಬದಲಾಯಿಸಿದ್ದಾರೆ. ಅತ್ತೆಯೊಂದಿಗೆ ಸೊಸೆಯ ಸಂಬಂಧ ಹಳಸಿದೆ. ಈ ಆಧಾರದಡಿ ಮನೆಯ ಆವರಣವನ್ನು ಉಳಿಸಿಕೊಳ್ಳಲು ಸೊಸೆಗೆ ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿ ಪೋಷಕರ ಮಗ ಸುಮಾರು ಎಂಟು ವರ್ಷಗಳ ಹಿಂದೆ ಸಾವ್ನಪ್ಪಿದ್ದರು. ಸೊಸೆ ಮತ್ತು ಅತ್ತೆಯ ನಡುವಿನ ಸಂಬಂಧ ಹಳಸಿತ್ತು. ಸರ್ಕಾರಿ ಕೆಲಸ ಸಿಗಲಿದೆ ಎಂಬ ಕಾರಣಕ್ಕೆ ಸೊಸೆ ಆಂಧ್ರಪ್ರದೇಶಕ್ಕೆ ವಾಸ ಬದಲಿಸಿದ್ದರು.

ಈ ಮಧ್ಯೆ, ಬಳ್ಳಾರಿಯ ಸಿದ್ಧಾರ್ಥ ನಗರದಲ್ಲಿ ಸ್ವಯಾರ್ಜಿತವಾಗಿ ನಿಮಿಸಿದ ಮನೆಯಲ್ಲಿ ಅತ್ತೆ ವಾಸವಿದ್ದರು. ಹಣಕಾಸಿನ ತೊಂದರೆಯಿಂದ ಮನೆಯನ್ನು ಮಾರಾಟ ಮಾಡಲು ಉದ್ದೇಶಿಸಿ, ಮುಂಗಡ ಹಣ ಪಡೆದಿದ್ದರು. ಈ ವಿಷಯ ತಿಳಿದು ಮನೆಗೆ ಬಂದಿದ್ದ ಸೊಸೆ, ತನಗೂ ಆಸ್ತಿಯಲ್ಲಿ ಪಾಲು ನೀಡಬೇಕು ಇಲ್ಲವೇ ₹60 ಲಕ್ಷ ನೀಡಬೇಕು ಎಂದು ಹೇಳಿ ಮನೆಯಲ್ಲಿದ್ದ ಅತ್ತೆಯ ಸಾಮಾನುಗಳನ್ನು ಹೊರಹಾಕಿ, ಮನೆಯಲ್ಲಿ ಠಿಕಾಣಿ ಹೂಡಿದ್ದರು.

ಪರಿಣಾಮ ಪೋಷಕರು ಸಕ್ಷಮ ಪ್ರಾಧಿಕಾರವಾದ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿಯ ಅಧ್ಯಕ್ಷರೂ ಆದ ಬಳ್ಳಾರಿ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿ, ತಮ್ಮ ಆಸ್ತಿ ರಕ್ಷಣೆ, ಮಾನಸಿಕ ಶಾಂತಿ ಮತ್ತು ಪ್ರಾಣ ರಕ್ಷಣೆ ನೀಡಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಸಕ್ಷಮ ಪ್ರಾಧಿಕಾರವು ಸೊಸೆ ಮನೆಯನ್ನು ಖಾಲಿ ಮಾಡಬೇಕು. ಸದರಿ ಆಸ್ತಿಯನ್ನು ಮನವಿದಾರ ಹಿರಿಯ ನಾಗರಿಕ ಪೋಷಕರ ಹೆಸರಿಗೆ ನೋಂದಾಯಿಸಬೇಕು ಎಂದು ಬಳ್ಳಾರಿ ಉಪನೋಂದಣಾಧಿಕಾರಿಗೆ ಆದೇಶಿಸಿದ್ದರು. ಈ ಆದೇಶವನ್ನು ಸೊಸೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ರದ್ದುಗೊಳಿಸಬೇಕು ಎಂದು ಕೋರಿದ್ದರು.

Soumya Vs Ratnakumari.pdf
Preview