ಕೇಂದ್ರ ಸರ್ಕಾರದ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದ (ತಿದ್ದುಪಡಿ) ಸುಗ್ರೀವಾಜ್ಞೆ- 2023 ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸುವುದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ [ದೆಹಲಿ ಸರ್ಕಾರ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
"ಮೊದಲ ಬಾರಿಗೆ, ಅವರು ದೆಹಲಿ ಸರ್ಕಾರದ ವ್ಯಾಪ್ತಿಯಿಂದ ಸೇವೆಗಳನ್ನು ಹೊರಗಿರಿಸಲು ಸಂವಿಧಾನದ 239ಎಎ ವಿಧಿಯ ಕಲಂ 7ರ ಅಡಿ ನೀಡಲಾದ ಅಧಿಕಾರವನ್ನು ಬಳಸಿದ್ದಾರೆ... ಒಂದು ರೀತಿಯಲ್ಲಿ, ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ... ಅದಕ್ಕೆ ಅನುಮತಿಸಬಹುದೇ ಎನ್ನುವುದನ್ನು ನಾವು ಗಮನಿಸಬೇಕಿದೆ? ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿಯನ್ನು ಸಾಂವಿಧಾನಿಕ ಪೀಠವೊಂದರ ಮೂಲಕ ನಾವು ಆಲಿಸಲಿದ್ದೇವೆ. ಹೀಗೆ ಮಾಡುವ ಮೂಲಕ (ತಿದ್ದುಪಡಿ ಸುಗ್ರೀವಾಜ್ಞೆ) ನೀವು ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವೇ ಎಂಬುದನ್ನು ನಾವು ನೋಡಬೇಕಿದೆ”.
ಇದೇ ವೇಳೆ ದೆಹಲಿಯ ಚುನಾಯಿತ ಸರ್ಕಾರ ಮತ್ತು ಲೆ. ಗವರ್ನರ್ ಇಬ್ಬರೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದೆಹಲಿ ವಿದ್ಯುತ್‌ಶಕ್ತಿ ನಿಯಂತ್ರಣ ಆಯೋಗದ (ಡಿಇಆರ್‌ಸಿ) ಮುಖ್ಯಸ್ಥರು ಯಾರಾಗಬೇಕೆಂದು ಜಂಟಿಯಾಗಿ ಹೆಸರು ಸೂಚಿಸುವಂತೆ ನ್ಯಾಯಾಲಯ ಹೇಳಿದೆ.
“ಸಾಂವಿಧಾನಿಕ ಹುದ್ದೆಯಲ್ಲಿರುವ ಇಬ್ಬರೂ ರಾಜಕೀಯ ಜಗಳ ಬದಿಗಿರಿಸಿ ಡಿಇಆರ್‌ಸಿ ಅಧ್ಯಕ್ಷರ ಹೆಸರನ್ನು ಸೂಚಿಸಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವ ಇಬ್ಬರೂ ಈಗ ಒಟ್ಟಿಗೆ ಕುಳಿತು ಆಡಳಿತದತ್ತ ಗಮನಹರಿಸಲಿ. ಡಿಇಆರ್‌ಸಿ ಅಧ್ಯಕ್ಷರ ಆಯ್ಕೆ ಸಮಸ್ಯೆಯಲ್ಲ, ನೀವಿಬ್ಬರೂ ಒಟ್ಟಿಗೆ ಕುಳಿತು ಉಳಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು” ಎಂದು ಸಿಜೆಐ ಕಿವಿಮಾತು ಹೇಳಿದರು.
ಪ್ರಕರಣದ ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.