Justice PV Sanjay Kumar  
ಸುದ್ದಿಗಳು

ಸಾಂವಿಧಾನಿಕ ತಿದ್ದುಪಡಿಯ ಸೋಗಿನಲ್ಲಿ ಸಂವಿಧಾನವನ್ನು ತಿರುಚಲಾಗದು: ನ್ಯಾ. ಪಿ ವಿ ಸಂಜಯ್ ಕುಮಾರ್

ತಿದ್ದುಪಡಿ ಮಾಡುವ ಅಧಿಕಾರ ಎಂಬುದು ಬದಲಾವಣೆ ಮಾಡುವ ಅಧಿಕಾರವನ್ನು ಸೂಚಿಸುತ್ತದೆಯೇ ವಿನಾ ಇಡಿಯಾಗಿ ಹೊಸ ಸಂವಿಧಾನವನ್ನು ಜಾರಿಗೆ ತರುವ ಅಧಿಕಾರವನ್ನಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತಿಳಿಸಿದರು.

Bar & Bench

ಬಹುಮತ ಗಳಿಸಿರುವ ಸಂಸತ್ತು ಸಂವಿಧಾನ ತಿದ್ದುಪಡಿಯ ನೆಪದಲ್ಲಿ ಇಡೀ ಸಂವಿಧಾನವನ್ನು ಹೊಸದಾಗಿ ಬದಲಿಸದಂತೆ ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪ್ರತಿಪಾದಿಸಿದ ಮೂಲಭೂತ ರಚನಾ ಸಿದ್ಧಾಂತ ರಕ್ಷಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಹೇಳಿದ್ದಾರೆ.  

ಸಿಎಎನ್‌ ಪ್ರತಿಷ್ಠಾನ, ಹೈದರಾಬಾದ್‌ನ ನಲ್ಸಾರ್‌ ಹಾಗೂ ಜಬಲ್‌ಪುರ್‌ ಡಿಎನ್‌ಎಲ್‌ಯು ಶನಿವಾರ ವರ್ಚುವಲ್‌ ವಿಧಾನದಲ್ಲಿ ಆಯೋಜಿಸಿದ್ದ ನ್ಯಾ. ಎಚ್‌ ಆರ್ ಖನ್ನಾ ನೆನಪಿನ 4ನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ʼನಮ್ಮ ಸಂವಿಧಾನದ ವ್ಯಾಪ್ತಿಯಲ್ಲಿ ಮೂಲ ರಚನೆಯ ದಾರಿದೀಪವಾಗಿ ಪ್ರಸ್ತಾವನೆʼ ವಿಷಯದ ಕುರಿತು ಅವರು ಮಾತನಾಡಿದರು.

ಸಾಂವಿಧಾನಿಕ ತಿದ್ದುಪಡಿಗಳ ಸಿಂಧುತ್ವವನ್ನು ಪರೀಕ್ಷಿಸಲು ಮತ್ತು ಸಂವಿಧಾನದ ಮೂಲ ರಚನೆಯನ್ನು ರಕ್ಷಿಸಲು ನ್ಯಾಯಾಲಯಗಳು ನ್ಯಾಯಾಂಗ ಪರಿಶೀಲನೆಯ ಕ್ರಿಯೆ ಕುರಿತಂತೆ ನಡೆದಿರುವ ವಿಶ್ಲೇಷಣೆಗಳಿಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದರು. 

ಉಪನ್ಯಾಸದ ಪ್ರಮುಖಾಂಶಗಳು

  • ತಿದ್ದುಪಡಿ ಮಾಡುವ ಅಧಿಕಾರ ಬದಲಾವಣೆ ಮಾಡುವ ಅಧಿಕಾರವನ್ನು ಸೂಚಿಸುತ್ತದೆಯೇ ವಿನಾ ಇಡಿಯಾಗಿ ಹೊಸ ಸಂವಿಧಾನವನ್ನು ಜಾರಿಗೊಳಿಸುವ ಅಧಿಕಾರ ನೀಡುವುದಿಲ್ಲ. ಜೊತೆಗೆ ಸಾಂವಿಧಾನಿಕ ತಿದ್ದುಪಡಿಯ ನೆಪದಲ್ಲಿ ಸಂವಿಧಾನವನ್ನು ತಿರುಚುವಂತಿಲ್ಲ.

  • ತಿದ್ದುಪಡಿ ಮಾಡಿದರೂ, ಮೂಲ ಸಂವಿಧಾನದ ಉಳಿದಿರಬೇಕು ಮತ್ತು ತಿದ್ದುಪಡಿಯ ಅಧಿಕಾರವು ಹೊಸ ಸಂವಿಧಾನವನ್ನು ಜಾರಿಗೆ ತರಲು ಮೂಲವಾಗುವುದಿಲ್ಲ ಎಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ 'ಸಂವಿಧಾನದ ತಿದ್ದುಪಡಿ' ಎಂಬ ಪದಗುಚ್ಛವನ್ನು ಅರ್ಥೈಸಲಾಗಿದೆ.

  • ಸಂವಿಧಾನದ ಮೂಲಭೂತ ರಚನೆಯನ್ನು ಅದು ಇರುವಂತೆಯೇ ತಿದ್ದುಪಡಿಯಿಂದ ಬದಲಿಸದೆಯೇ ಉಳಿಸಿಕೊಳ್ಳುವ ಅವಶ್ಯಕತೆಯಿದೆ ಎಂಬುದನ್ನು ಇದು ಸೂಚಿಸುತ್ತದೆ.

  • ಸಂವಿಧಾನವೇ ಮೌನವಾಗಿರುವಾಗ ನ್ಯಾಯಾಂಗದ ಶಾಶ್ವತತೆಯ ಷರತ್ತುಗಳನ್ನು ನ್ಯಾಯಾಲಯಗಳು ರೂಪಿಸಬಾರದ ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ತಿದ್ದುಪಡಿ ಮಾಡುವಾಗ ಸಂವಿಧಾನದಲ್ಲಿ ಸೂಚಿಸಲಾದ ಔಪಚಾರಿಕ ಕಾರ್ಯವಿಧಾನದ ಷರತ್ತುಗಳನ್ನು ಈಡೇರಿಸಲಾಗಿದೆಯೇ ಎಂಬ ಪರೀಕ್ಷೆಗೆ ನ್ಯಾಯಾಲಯ ತನ್ನನ್ನು ಮಿತಿಗೊಳಿಸಬೇಕು ಎಂದು ವಿಮರ್ಶಕರು ವಾದಿಸುತ್ತಾರೆ.

  • ತಿದ್ದುಪಡಿಯ ಅಧಿಕಾರದ ಬಳಕೆಯನ್ನು ನ್ಯಾಯಾಲಯಗಳು ನಿರ್ಬಂಧಿಸಿದ ಸಂದರ್ಭದಲ್ಲಿ ನ್ಯಾಯಾಲಯ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದಿಲ್ಲ, ಬದಲಿಗೆ ನ್ಯಾಯಾಂಗದ ಸ್ವಾತಂತ್ರ್ಯ  ಮತ್ತು ಸಂವಿಧಾನದ ಒಟ್ಟಂದವನ್ನು ರೂಪಿಸುವ ಕಾನೂನುಬದ್ಧ ಆಡಳಿತದಂತಹ ಮೂಲಭೂತ ತತ್ವಗಳನ್ನು ರಕ್ಷಿಸುತ್ತಿರುತ್ತದೆ.

  • ಸಂವಿಧಾನದ ತಿದ್ದುಪಡಿ ಮತ್ತು ಅದರ ತಿರುಚುವಿಕೆಯ ನಡುವೆ ವ್ಯತ್ಯಾಸವಿದೆ. ತಿದ್ದುಪಡಿ ಎಂಬುದು ಅಸ್ತಿತ್ವದಲ್ಲಿರುವ ನಿರ್ದಿಷ್ಟ ಮಾನದಂಡಗಳ ಅಡಿಯಲ್ಲಿನ ನಿಬಂಧನೆಗಳನ್ನು ಬದಲಿಸುತ್ತದೆ. ಆದರೆ ಸಂವಿಧಾನ ತಿರುಚುವಿಕೆಯು ಅಸ್ತಿತ್ವದಲ್ಲಿರುವ ಚೌಕಟ್ಟಿನಾಚೆಗೆ ಸಾಗುವುದಾಗಿದ್ದು, ಸಂವಿಧಾನದ ತಳಹದಿಯನ್ನು ಬದಲಿಸುವುದಾಗಿದೆ.

  • ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಅನ್ವೇಷಣೆಯಲ್ಲಿರುವವರಿಗೆ ನ್ಯಾ. ಎಸ್‌ ಆರ್‌ ಖನ್ನಾ ಇಂದಿಗೂ 'ಪ್ರಕಾಶಮಾನವಾದ ದಾರಿದೀಪ'ವಾಗಿದ್ದಾರೆ. ದೇಶದ ತುರ್ತು ಪರಸ್ಥಿತಿ ಉಂಟುಮಾಡುವ ತೀವ್ರ ಸ್ವರೂಪದ ಘಟನೆಗಳನ್ನು ನ್ಯಾ. ಖನ್ನಾ ಊಹಿಸಿದ್ದರು ಎಂಬುದು ಕಟುವಾಸ್ತವ.

  • ಸಂವಿಧಾನ ಹೇಗೆ ಪೆಡುಸಾಗಿ ಮತ್ತು ನಿಂತ ನೀರಿನಂತೆ ಇರಲಾಗದೋ ಹಾಗೆಯೇ ಸಾಂವಿಧಾನಿಕ ಕಾನೂನು ನಿಂತ ನೀರಾಗಬಾರದು.  ಇವೆರಡೂ ಕಾಲದ ಅಗತ್ಯಕ್ಕೆ ಅನುಗುಣವಾಗಿ ಬೆಳೆಯಬೇಕು ಮತ್ತು ವಿಕಸನಗೊಳ್ಳಬೇಕು, ಸಮಾಜಕ್ಕೆ ಸಮಕಾಲೀನವಾಗಿ ಪ್ರಸ್ತುತವಾಗಬೇಕು ಮತ್ತು ಸಂವಿಧಾನದ ಮೂಲಭೂತ ರಚನೆಯ ಎಲ್ಲೆಯೊಳಗೆ ತಮ್ಮ ಉದ್ದೇಶವನ್ನು ಸಾಕಾರಗೊಳಿಸಿಕೊಳ್ಳಬೇಕು.

  • ಸಂವಿಧಾನದಿಂದ ರಕ್ಷಿತವಾದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಗೌರವಿಸುವ, ಮೌಲ್ಯೀಕರಿಸುವ ಮತ್ತು ಪಾಲಿಸುವ ಜವಾಬ್ದಾರಿ ಭಾರತೀಯ ನಾಗರಿಕರ ಮೇಲಿದೆ.

ಕಾರ್ಯಕ್ರಮದಲ್ಲಿ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್‌ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.